ಶನಿವಾರ, ಸೆಪ್ಟೆಂಬರ್ 18, 2021
23 °C
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ: ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯವಿಲ್ಲ

ಕೋವಿಡ್‌ ಭೀತಿ: ಪ್ರವಾಸಿಗರ ಸಂಖ್ಯೆ ಇಳಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಎನಿಸಿರುವ ಹಾವೇರಿ ಜಿಲ್ಲೆಯಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಪ್ರವಾಸಿ ತಾಣಗಳಿವೆ. ಆದರೆ, ಕೋವಿಡ್‌ ಮತ್ತು ನೆರೆ ಹಾವಳಿಯ ಕಾರಣದಿಂದಾಗಿ ಈ ಬಾರಿ ಪ್ರವಾಸಿಗರು ನಿರೀಕ್ಷಿತ ಮಟ್ಟದಲ್ಲಿ ಬಾರದೆ ಪ್ರವಾಸೋದ್ಯಮ ನೆಲಕಚ್ಚಿದೆ.

ಬಾಡಾದ ‘ಕನಕ ಅರಮನೆ’, ಕಾಗಿನೆಲೆಯ ‘ಕನಕ ಪರಿಸರಸ್ನೇಹಿ ಉದ್ಯಾನ’, ಶಿಲ್ಪಕಲೆ ಮತ್ತು ಗ್ರಾಮೀಣ ಸೊಗಡು ಪಸರಿಸುವ ‘ರಾಕ್‌ ಗಾರ್ಡನ್‌’, ಕೃಷಿ ಧ್ಯಾನ ಮತ್ತು ಮನರಂಜನೆಯ ಯಾನಕ್ಕೆ ಹೇಳಿ ಮಾಡಿಸಿರುವ ‘ಅಗಡಿ ತೋಟ’, ಬಂಕಾಪುರದ ನವಿಲುಧಾಮ, ರಾಣೆಬೆನ್ನೂರಿನ ‘ಕೃಷ್ಣಮೃಗ ವನ್ಯಜೀವಿಧಾಮ’ ಸೇರಿದಂತೆ ಮುಂತಾದ ಸ್ಥಳಗಳು ಪ್ರವಾಸಿಗರ ಮೆಚ್ಚಿನ ತಾಣಗಳಾಗಿವೆ. 

ಕೋವಿಡ್‌ ಲಾಕ್‌ಡೌನ್‌ ತೆರವಾದ ನಂತರ ಪ್ರವಾಸೋದ್ಯಮ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿತ್ತು. ಆದರೆ, ಕೋವಿಡ್‌ ಮೂರನೇ ಅಲೆ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎಂಬ ಸುದ್ದಿ ಹರಡಿದ ನಂತರ ಪ್ರವಾಸಿಗರ ಸಂಖ್ಯೆ ಇಳಿಮುಖವಾಯಿತು. 

ಪ್ರವಾಸಿಗರನ್ನೇ ನೆಚ್ಚಿಕೊಂಡ ಹೋಟೆಲ್‌, ರೆಸ್ಟೋರೆಂಟ್‌ ಮತ್ತು ಡಾಬಾ ಮಾಲೀಕರು, ವ್ಯಾಪಾರಿಗಳು, ಆಟೊ ಮತ್ತು ಟ್ಯಾಕ್ಸಿ ಚಾಲಕರು, ಛಾಯಾಗ್ರಾಹಕರು ಹಾಗೂ ಕಾರ್ಮಿಕರ ದುಡಿಮೆ ಮೇಲೆ ಪೆಟ್ಟು ಬಿದ್ದಿದೆ. 

ಪ್ರವಾಸಿ ತಾಣಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ. ಸ್ಯಾನಿಟೈಸರ್‌ ಹಾಕುವುದು, ಥರ್ಮಲ್‌ ಸ್ಕ್ರೀನಿಂಗ್ ಮೂಲಕ ದೇಹದ ಉಷ್ಣಾಂಶ ಪರೀಕ್ಷೆ ಮಾಡುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗಿದೆ. ಆದರೆ, ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ತರುವುದನ್ನು ಎಲ್ಲಿಯೂ ಕಡ್ಡಾಯ ಮಾಡಿಲ್ಲ. 

ಭಕ್ತರ ಸಂಖ್ಯೆ ಇಳಿಮುಖ

ಹಿರೇಕೆರೂರು: ಪಟ್ಟಣದ ಅಧಿದೇವತೆ ದುರ್ಗಾದೇವಿಗೆ ರಾಜ್ಯದ ವಿವಿಧ ಕಡೆ ಭಕ್ತ ಸಮೂಹ ಇದೆ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿಯೂ ಅಪಾರ ಭಕ್ತರು ಇದ್ದಾರೆ. ಪ್ರತಿ ವರ್ಷ ಅಲ್ಲಿಂದ ಭಕ್ತರು ಬಂದು ದೇವಿಯ ದರ್ಶನ ಪಡೆದು ಹೋಗುತ್ತಾರೆ. 
ಈ ಬಾರಿ ಕೋವಿಡ್ ಪರಿಣಾಮ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ದೂರದಿಂದ ಬರುವ ಭಕ್ತರು ಮಾಸ್ಕ್ ಸಹಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿರುತ್ತಾರೆ ಎಂದು ಅರ್ಚಕ ನಿಂಗಾಚಾರ್ ಮಾಯಾಚಾರಿ ತಿಳಿಸಿದರು.
ಸರ್ವಜ್ಞನ ಅಬಲೂರು ಗ್ರಾಮದಲ್ಲಿ ಪ್ರಾಚೀನ ಕಾಲದ ದೇವಸ್ಥಾನಗಳಿವೆ, ಆದರೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ತೀರಾ ವಿರಳ.

ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸಿಗರ ಕೊರತೆ

ಬ್ಯಾಡಗಿ: ಕೋವಿಡ್‌ ಹಿನ್ನೆಲೆಯಲ್ಲಿ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಸರ್ಕಾರ ತೆರವುಗೊಳಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಭಕ್ತರು ಬರುತ್ತಿಲ್ಲ. ತಾಲ್ಲೂಕಿನ ಕದರಮಂಡಲಗಿ ಕಾಂತೇಶ (ಆಂಜನೇಯ) ಸ್ವಾಮಿಯ ದರ್ಶನಕ್ಕೆ ಶನಿವಾರ ಮಾತ್ರ ಹೆಚ್ಚು ಜನ ಭಕ್ತರು ಬರುತ್ತಿದ್ದು, ಕೋವಿಡ್‌ ಮಾರ್ಗಸೂಚಿಯಂತೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಪಕ್ಕದ ರಾಜ್ಯಗಳಲ್ಲಿ ಕೋವಿಡ್‌ 3ನೇ ಅಲೆ ಕಾಣಿಸಿಕೊಂಡಿದ್ದು, ಶ್ರಾವಣ ಮಾಸ ಆರಂಭವಾದರೆ ಭಕ್ತರ ಸಂಖ್ಯೆ ಗರಿಷ್ಠ ಮಟ್ಟಕ್ಕೆ ಹೆಚ್ಚಬಹುದು ಎನ್ನುವ ಆತಂಕ ಎದುರಾಗಿದೆ ಎಂದು ದೇವಸ್ಥಾನದ ಪಂಚ ಕಮಿಟಿ ಅಧ್ಯಕ್ಷ ಹನುಮಂತಪ್ಪ ಕುಡಪಲಿ ಹೇಳಿದರು.

ಪ್ರವಾಸಿ ಕೇಂದ್ರಗಳಲ್ಲಿ ಕೋವಿಡ್ ಪಾಲನೆ

ಶಿಗ್ಗಾವಿ: ಬಾಡದ ಕನಕದಾಸರ ಅರಮನೆ ಮುಖ್ಯದ್ವಾರದಲ್ಲಿ ಪ್ರವಾಸಿಗರ ಆರೋಗ್ಯ ತಪಾಸಣೆ ಮಾಡಿದ ನಂತರ ಒಳಗೆ ಪ್ರವೇಶ ನೀಡಲಾಗುತ್ತಿದೆ. ಅಂತರ ಕಾಪಾಡುವ ಮೂಲಕ ಅರಮನೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ. ಗೋಟಗೋಡಿ ಉತ್ಸವ ರಾಕ್ ಗಾರ್ಡನ್‌ ಕೌಂಟರ್‌ಗಳಲ್ಲಿ ಪ್ರವಾಸಿಗರಿಗೆ ಕೋವಿಡ್ ನಿಯಮಗಳ ಬಗ್ಗೆ ಪ್ರವಾಸಿಗರಿಗೆ ತಿಳಿಸಲಾಗುತ್ತಿದೆ. 

ಅಭಿವೃದ್ಧಿಗೆ ಕಾದಿರುವ ಪ್ರವಾಸಿ ತಾಣ

ಹಾನಗಲ್: ರಾಜ್ಯಮಟ್ಟದಲ್ಲಿ ಗುರುತಿಸುವ ಪ್ರೇಕ್ಷಣೀಯ ತಾಣಗಳು ಹಾನಗಲ್ ವ್ಯಾಪ್ತಿಯಲ್ಲಿ ಇಲ್ಲ. 11ನೇ ಶತಮಾನದಲ್ಲಿ ನಿರ್ಮಾಣವಾದ ಸುಂದರ ಶಿಲ್ಪಕಲೆಯ ತಾರಕೇಶ್ವರ ದೇವಸ್ಥಾನ ಪ್ರವಾಸಿ ಕ್ಷೇತ್ರವಾಗಿ ಅಭಿವೃದ್ಧಿಗೊಳ್ಳಬೇಕಿದೆ.

ಅಖಿಲ ಭಾರತ ವೀರಶೈವ ಮಹಾಸಭಾ ಕತೃ ಲಿಂ.ಕುಮಾರ ಶಿವಯೋಗಿಗಳವರ ಕುಮಾರೇಶ್ವರ ಮಠ ಮತ್ತು ಆವರಣ ಅಭಿವೃದ್ಧಿಗೊಂಡಿದೆ. ನಾಲ್ಕು ವರ್ಷಗಳ ಹಿಂದೆ ಪಟ್ಟಣದ ಹೊರಭಾಗದ ಅರಣ್ಯ ಪ್ರದೇಶದಲ್ಲಿ ನಿರ್ಮಾಣಗೊಂಡ ಟ್ರೀ ಪಾರ್ಕ್‌ ಆಕರ್ಷಣೀಯ ಸ್ಥಳವಾಗಿದೆ. ಇಲ್ಲಿಗೆ ಜನರು ಭೇಟಿ ನೀಡುತ್ತಾರೆ. ಅರಣ್ಯ ಇಲಾಖೆ ಈ ಟ್ರೀ ಪಾರ್ಕ್‌ ಪ್ರವೇಶಕ್ಕೆ ನಿಯಮಗಳನ್ನು ರೂಪಿಸಿದೆ. ಮಾಸ್ಕ್‌ ಕಡ್ಡಾಯ, ಜನರು ಅಂತರ ಕಾಯ್ದುಕೊಳ್ಳಬೇಕು ಎಂಬ ಸೂಚನೆ ನೀಡಲಾಗುತ್ತಿದೆ.

ಲಸಿಕೆಯ ಪ್ರಮಾಣಪತ್ರ ಕಡ್ಡಾಯ

ರಾಣೆಬೆನ್ನೂರು: ಇಲ್ಲಿನ ಮೇಡ್ಲೇರಿ ರಸ್ತೆಯ ಗಂಗಾಜಲದ ಬಳಿ ಇರುವ ಕೃಷ್ಣಮೃಗ ಅಭಯಾರಣ್ಯಕ್ಕೆ ಕೃಷ್ಣಮೃಗಗಳ ವೀಕ್ಷಣೆಗೆ ದೇಶ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರುತ್ತಿದ್ದರು. ಮಾರ್ಚ್ ತಿಂಗಳಿಂದ ಅಕ್ಟೋಬರ್‌ವರೆಗೆ ಅಭಯಾರಣ್ಯದಲ್ಲಿ ಕೃಷ್ಣಮೃಗ ಸೇರಿದಂತೆ ಇತರೆ ಪ್ರಾಣಿಗಳನ್ನು ನೋಡಲು ಅತ್ಯುತ್ತಮ ಸಮಯವಾಗಿದೆ. 

ಲಾಕ್‌ಡೌನ್‌ ತೆರವು ಆಗುತ್ತಿದ್ದಂತೆ ವೀಕ್ಷಣೆಗೆಂದು ಪ್ರವಾಸಿಗರು ಆಗಮಿಸಿದ ಬೆನ್ನಲ್ಲೇ ಮೂರನೇ ಅಲೆ ಪ್ರವಾಸಿಗರನ್ನು ಕಾಡುತ್ತಿದೆ. ಪ್ರವಾಸಿಗರಿಗೆ ಕೋವಿಡ್‌ ತಪಾಸಣೆ, ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರ ಬೇಕಾಗುತ್ತದೆ. ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಗಣೇಶ ಶೆಟ್ಟರ್.

ಕೆರೆ ನೋಡಲು ಪ್ರವಾಸಿಗರ ದಂಡು

ರಟ್ಟೀಹಳ್ಳಿ: ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಮದಗ-ಮಾಸೂರು ಕೆರೆ ಪ್ರಮುಖ ಪ್ರವಾಸಿ ತಾಣವಾಗಿದೆ. ಗುಡ್ಡಗಳ ಮಧ್ಯೆ ಬೃಹತ್ ಕೆರೆಯಿದೆ. ಕೆರೆಯ ಕೋಡಿಯಿಂದ ಮುಂದೆ ಸುಂದರ ನಿಸರ್ಗದಲ್ಲಿ ಗುಡ್ಡವನ್ನು ಸೀಳಿ ಧುಮುಕುವ ಕುಮದ್ವತಿ ನದಿ ಜಲಪಾತ ಸೃಷ್ಟಿಸಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. 

ಮದಗದ ಕೆಂಚಮ್ಮ ದೇವಸ್ಥಾನ ಸಮಿತಿಯಿಂದ ಸಾಲುಮರದ ತಿಮ್ಮಕ್ಕ ಉದ್ಯಾನ ನಿರ್ಮಿತವಾಗಿದ್ದು, ನೋಡುಗರ ಕಣ್ಮನ ಸೆಳೆಯುವ ವಿವಿಧ ಜಾತಿಯ ಸುಂದರವಾದ ಗಿಡ-ಮರ-ಬಳ್ಳಿಗಳನ್ನು ನೆಡಲಾಗಿದೆ. ಮಳೆಗಾಲದಲ್ಲಿ ಮಾತ್ರ ಇಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈಗ ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೋವಿಡ್‌ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ನವಾಬರ ಮಹಲ್‌ ಜೀರ್ಣೋದ್ಧಾರ

ಸವಣೂರ: ನವಾಬರ ಆಳ್ವಿಕೆಯ ಪ್ರದೇಶ ಎಂಬ ಖ್ಯಾತಿ ಹೊಂದಿರುವ ಸವಣೂರು ಪಟ್ಟಣಕ್ಕೆ ದೂರದ ಸ್ಥಳಗಳಿಂದ ಪ್ರವಾಸಿಗರು ಆಗಮಿಸಿ ವೀಕ್ಷಣೆ ಮಾಡುತ್ತಿದ್ದರು. ಆದರೆ, ಕೋವಿಡ್‌ ಪರಿಣಾಮ ಪ್ರವಾಸಿಗರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ.

ನವಾಬರ ಕಾಲದ ಆಳ್ವಿಕೆಯ ಮಹಲ್‌ನಲ್ಲಿ ಜೆ.ಎಂ.ಎಫ್.ಸಿ ನ್ಯಾಯಾಲಯ ಅನೇಕ ವರ್ಷ ಕಾರ್ಯವನ್ನು ನಿರ್ವಹಿಸಿತ್ತು. ನ್ಯಾಯಾಲಯ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಂತೆ ನವಾಬರ ಆಳ್ವಿಕೆಯ ಕಟ್ಟಡ ಅವಸಾನ ಹೊಂದಬಾರದು ಎಂಬ ಉದ್ದೇಶದಿಂದ ಸ್ಥಳೀಯ ಶಾಸಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹2 ಕೋಟಿ ಅನುದಾನದಲ್ಲಿ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿದ್ದು, ನವಾಬರ ಕಾಲದ ವಸ್ತುಸಂಗ್ರಹಾಲಯವಾಗಿ ರೂಪುಗೊಳ್ಳುತ್ತಿದೆ.

ಕಾಗಿನೆಲೆ ಮತ್ತು ಬಾಡಾದಲ್ಲಿ ಕೋವಿಡ್‌ ನಿಯಮ ಪಾಲಿಸುತ್ತಿದ್ದೇವೆ. ಆದರೆ, ಸೋಂಕಿನ ಭಯದಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರು ಬರುತ್ತಿಲ್ಲ
–ಮಲ್ಲೇಶಪ್ಪ ಹೊರಪೇಟೆ, ಆಯುಕ್ತ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ

ಲಾಕ್‌ಡೌನ್‌, ಕೊರೊನಾ, ನೆರೆ ಹಾವಳಿಯಿಂದ ಪ್ರವಾಸೋದ್ಯಮ ಇನ್ನೂ ಪೂರ್ಣ ಚೇತರಿಸಿಕೊಂಡಿಲ್ಲ. ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ
–ವೇದಾರಾಣಿ ದಾಸನೂರ, ರಾಕ್ ಗಾರ್ಡನ್ ಮುಖ್ಯಸ್ಥೆ, ಶಿಗ್ಗಾವಿ

ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದೇ ರೀತಿ ಮುಂದುವರಿದರೆ ಶನಿವಾರ, ಭಾನುವಾರ ಮಾತ್ರ ಅಗಡಿ ತೋಟ ತೆರೆಯಬೇಕಾಗುತ್ತದೆ
–ಜಯದೇವ ಅಗಡಿ, ಅಗಡಿ ತೋಟದ ಮಾಲೀಕ

ಬಾಡಾದಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡಿದ್ದರಿಂದ ಕನಕದಾಸರ ಬದುಕಿನ ಚರಿತ್ರೆ ಅರಿಯಲು ಸಾಧ್ಯವಾಯಿತು
–ಸದ್ದಾಂಹುಸೇನ್ ತಗ್ಗಿಹಳ್ಳಿ, ಪ್ರವಾಸಿಗ

***

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಮುಕ್ತೇಶ್ವರ ಕೂರಗುಂದಮಠ, ಎಂ.ವಿ.ಗಾಡದ, ಕೆ.ಎಚ್‌.ನಾಯಕ, ಮಾರುತಿ ಪೇಟಕರ, ಪ್ರಮೀಳಾ ಹುನಗುಂದ, ಗಣೇಶಗೌಡ ಎಂ.ಪಾಟೀಲ, ಪ್ರದೀಪ ಕುಲಕರ್ಣಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.