ಬುಧವಾರ, ಜನವರಿ 26, 2022
26 °C
ಕೋವಿಡ್‌ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಹಾವೇರಿ | ಹೋರಿ ಬೆದರಿಸುವ ಸ್ಪರ್ಧೆ ಕೈಬಿಡಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೋವಿಡ್ ಸೋಂಕು ಸಕ್ರಿಯವಾಗಿರುವ ಜೊತೆಗೆ ಹೊಸದಾಗಿ ಓಮೈಕ್ರಾನ್‌ ಸೋಂಕು ರಾಜ್ಯದಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಜಿಲ್ಲೆಯಲ್ಲಿ ನಡೆಸುತ್ತಿರುವ ಹೋರಿ ಬೆದರಿಸುವ ಸ್ಪರ್ಧೆಗಳನ್ನು ಕೈಬಿಡುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮನವಿ ಮಾಡಿಕೊಂಡಿದ್ದಾರೆ.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹೋರಿ ಬೆದರಿಸುವ ಸ್ಪರ್ಧೆಯಿಂದ ಕೋವಿಡ್ ನಿಯಮಗಳು ಉಲ್ಲಂಘನೆಯಾಗುತ್ತಿವೆ. ಸ್ಪರ್ಧೆಗಳಿಂದ ಸಾವು-ನೋವುಗಳು ಹೆಚ್ಚಾಗುತ್ತಿವೆ. ಸ್ವಯಂ ನಿರ್ಧಾರ ಕೈಗೊಂಡು ಎಲ್ಲ ಸಂಘಟನೆಗಳು ಹೋರಿ ಬೆದರಿಸುವ ಸ್ಪರ್ಧೆಗಳನ್ನು ಕೈಬಿಡಬೇಕು’ ಎಂದು ತಿಳಿಸಿದರು. 

2012ರಲ್ಲಿ ಅಂದಿನ ಜಿಲ್ಲಾಧಿಕಾರಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲು 18 ಷರತ್ತುಗಳನ್ನು ವಿಧಿಸಿದ್ದಾರೆ. ಪೂರ್ವಾನುಮತಿ ಇಲ್ಲದೆ ಹೋರಿ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸಬಾರದು. ಸಾವಿರಾರು ಜನ ಒಂದೆಡೆ ಸೇರುವುದರಿಂದ ಕೊರೊನಾ ಸೊಂಕು ಹರಡುವ ಸಾಧ್ಯತೆ ಜಾಸ್ತಿ ಇರುತ್ತದೆ ಎಂದು ಅಭಿಪ್ರಾಯಪಟ್ಟರು. 

ನಿರ್ದಾಕ್ಷಿಣ್ಯ ಕ್ರಮ:

ಮಳೆಹಾನಿ ಸಮೀಕ್ಷೆ ಕಾರ್ಯ ಕೈಗೊಂಡು ಈಗಾಗಲೇ ಮನೆ ಹಾನಿ ಹಾಗೂ ಬೆಳೆಹಾನಿ, ಮೂಲಸೌಕರ್ಯಗಳ ಹಾನಿಗಳ ಕುರಿತಂತೆ ಪಾರದರ್ಶಕವಾಗಿ ನಿಯಮಾನುಸಾರ ಕ್ರಮ ಕೈಗೊಂಡು ಪರಿಹಾರ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡುವ ಕಾರ್ಯ ನಡೆಯುತ್ತಿದೆ. ಮನೆಹಾನಿ ಹಾಗೂ ಬೆಳೆಹಾನಿ ಪರಿಹಾರ ಕುರಿತಂತೆ ಮಧ್ಯವರ್ತಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿದರೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಸಿದರು.

ಸಮೀಕ್ಷೆಯಲ್ಲಿ ಲೋಪವೆಸಗಿದರೆ, ಅವ್ಯವಹಾರದಲ್ಲಿ ಯಾವುದೇ ಅಧಿಕಾರಿಗಳು ಶಾಮೀಲಾಗಿರುವ ಕುರಿತಂತೆ ಖಚಿತ ದೂರು ಬಂದರೆ ಅಂತಹವರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಹಣ ಪಡೆದಿದ್ದರೆ ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

6,158 ಮನೆಗಳಿಗೆ ಹಾನಿ:

ಮಳೆಯಿಂದ 6158 ಮನೆಗಳು ಹಾನಿಯಾಗಿರುವ ಕುರಿತಂತೆ ಮಾಹಿತಿ ಸಂಗ್ರಹಿಸಲಾಗಿದೆ. ಪರಿಶೀಲನೆ ನಡೆಸಿ ಶೇ 15ಕ್ಕಿಂತ ಕಡಿಮೆ ಹಾನಿಯಾಗಿರುವ 1180 ಮನೆಗಳ ಅರ್ಜಿಗಳನ್ನು ಕೈಬಿಡಲಾಗಿದೆ. ಬಾಕಿ 4978 ಮನೆಗಳನ್ನು ಅಂಗೀಕರಿಸಲಾಗಿದೆ. ಈ ಪೈಕಿ 4148 ಮನೆಗಳನ್ನು ರಾಜೀವಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 3811 ಮನೆಗಳನ್ನು ನಗರ ಪ್ರದೇಶಗಳ 337 ಮನೆಗಳನ್ನುತಂತ್ರಾಂಶದಲ್ಲಿ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

50,638 ಹೆಕ್ಟೇರ್‌ ಬೆಳೆ ಹಾನಿ:

ಜಿಲ್ಲೆಯಲ್ಲಿ 50,638 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ. 46,251 ರೈತರ ಕಡತಗಳನ್ನು ರಚಿಸಲಾಗಿದೆ. 28,428 ಪ್ರಕರಣಗಳನ್ನು ಬೆಳೆ ಪರಿಹಾರ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಲಾಗಿದೆ. ಉಳಿದ ಪ್ರಕರಣಗಳ ದಾಖಲಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. 1908 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಶುಂಠಿ, ಟೊಮೆಟೊ, ದೊಣ್ಣೆಮೆಣಸಿನಕಾಯಿ, ಈರುಳ್ಳಿ ಬೆಳೆಗೆ ಹೆಚ್ಚಿನ ಹಾನಿಯಾಗಿದೆ. ₹80 ಕೋಟಿಯಷ್ಟು ಕಟ್ಟಡ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿರುವುದಾಗಿ ಮಾಹಿತಿ ನೀಡಿದರು.

ಕೋವಿಡ್ ಮರಣ ಪ್ರಕರಣ:

ಜಿಲ್ಲೆಯಲ್ಲಿ ಈವರೆಗೆ 618 ಜನ ಕೋವಿಡ್‍ನಿಂದ ಮರಣ ಹೊಂದಿದ್ದು, ಈಗಾಗಲೇ 541 ಪ್ರಕರಣಗಳನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಈ ಪೈಕಿ ಬಾಕಿ 77 ಪ್ರಕರಣಗಳು ಹೊರ ಜಿಲ್ಲೆಗಳ ಪ್ರಕರಣಗಳಾಗಿವೆ. ಸರ್ಕಾರದ ಮಾರ್ಗಸೂಚಿಯಂತೆ ಮೃತರ ಕುಟುಂಬಗಳಿಗೆ ಪರಿಹಾರಧನ ಪಾವತಿಸಲು ₹1.60 ಕೋಟಿಯನ್ನು ತಹಶೀಲ್ದಾರ್‌ಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಹೋರಿ ಸ್ಪರ್ಧೆ: ಐವರ ಸಾವು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ‘ಐದು ವರ್ಷಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಿಂದ ಐವರು ಮೃತಪಟ್ಟಿದ್ದಾರೆ. ಒಂದು ಹೋರಿ ಮರಣ ಹೊಂದಿದೆ. ಈ ಕುರಿತಂತೆ 15 ಪ್ರಕರಣಗಳು ದಾಖಲಾಗಿವೆ. ಕಳೆದ ವಾರ ಬಸಾಪುರದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ 24 ಜನರು ಗಾಯಗೊಂಡಿದ್ದಾರೆ. ತನಿಖೆ ನಡೆಯುತ್ತಿದೆ. ಈಗಾಗಲೇ ಐದು ಜನರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಒತ್ತಡ ಹೇರಿದರೆ ಸದಸ್ಯತ್ವ ರದ್ದು

ಕೆಲವೆಡೆ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಹೆಚ್ಚಿನ ಹಾನಿ ದಾಖಲಿಸುವ ಕುರಿತಂತೆ ಒತ್ತಡ ಹಾಕುತ್ತಿರುವ ದೂರುಗಳು ಬರುತ್ತಿವೆ. ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿಸಂಹಿತೆ ಜಾರಿಯಲ್ಲಿದೆ. ಸರ್ಕಾರದ ನಿಯಮಾವಳಿಯ ವಿರುದ್ಧವಾಗಿ ಸದಸ್ಯರು ವರ್ತಿಸಿದರೆ ಅವರ ಸದಸ್ಯತ್ವವನ್ನು ರದ್ದುಪಡಿಸುವ ಅವಕಾಶಗಳಿವೆ. ಯಾವುದೇ ಸದಸ್ಯರಿರಲಿ ಹಾಗೂ ಮಧ್ಯವರ್ತಿಗಳಿರಲಿ, ಸಮೀಕ್ಷೆ ಕಾರ್ಯದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿದರೆ ಕಾನೂನಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ರಾಜೀವ ಕೂಲೇರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ಪ್ರದೀಪ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು