ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಹಾನಿ: ನಿಖರ ಸಮೀಕ್ಷೆ ಕೈಗೊಳ್ಳಿ- ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಜಿಲ್ಲೆಗೆ 3468 ಬೆಳೆ ಕಟಾವು ಪ್ರಯೋಗಗಳು ನಿಯೋಜಿತ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
Last Updated 4 ಜುಲೈ 2022, 14:37 IST
ಅಕ್ಷರ ಗಾತ್ರ

ಹಾವೇರಿ: ಪ್ರಸಕ್ತ ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಕೈಗೊಳ್ಳುವ ಬೆಳೆ ಕಟಾವು ಪ್ರಯೋಗಗಳನ್ನು ಅತ್ಯಂತ ನಿಖರವಾಗಿ ಯಾವುದೇ ಗೊಂದಲಗಳಿಲ್ಲದಂತೆ ದಾಖಲಿಸುವಂತೆ ನಿಯೋಜಿತ ಸಮೀಕ್ಷಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ 2022-23ನೇ ಸಾಲಿನ ಮುಂಗಾರು ಋತುವಿನ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆವಿಮೆ ನೋಂದಣಿ ಹಾಗೂ ಬೆಳೆಹಾನಿ ಸಮೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನಿಖರವಾಗಿ ಸಮೀಕ್ಷೆಗಳನ್ನು ಕೈಗೊಳ್ಳಬೇಕು. ಕಾಲಮಿತಿಯೊಳಗೆ ಆ್ಯಪ್‍ಗಳಲ್ಲಿ ಫೋಟೋ ಸಹಿತ ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಬೆಳೆ ಕಟಾವು ಪ್ರಯೋಗ:

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ 3468 ಬೆಳೆ ಕಟಾವು ಪ್ರಯೋಗಗಳು ನಿಯೋಜಿತವಾಗಿವೆ. ಮೊಬೈಲ್ ಆ್ಯಪ್‍ ಬಳಿಸಿ ನಿಯಮಾನುಸಾರ ಕಾರ್ಯನಿರ್ವಹಿಸಿ. ಯಾವುದೇ ಬೆಳೆ ಪ್ರಯೋಗ ನಷ್ಟವಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳೆ ಸಮೀಕ್ಷೆ ಆಧರಿಸಿ ಬೆಳೆ ಕ್ಷೇತ್ರ ಮರು ಹೊಂದಾಣಿಕೆ ವರದಿಯನ್ನು ಮಾರ್ಗಸೂಚಿ ಪ್ರಕಾರ ತಯಾರಿಸಿ ಋತುವಾರು ನಿಗದಿತ ಅವಧಿಯಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ನೀರಾವರಿ ಇಲಾಖಾ ಅಧಿಕಾರಿಗಳು ಜಂಟಿಯಾಗಿ ತಾಲ್ಲೂಕು ಮಟ್ಟದ ವರದಿಗಳನ್ನು ಕಾಲಮಿತಿಯೊಳಗೆ ಸಲ್ಲಿಸಲು ಸೂಚಿಸಿದರು.

ಜಿಲ್ಲಾ ಮಟ್ಟದ ಮಾದರಿಯಲ್ಲಿ ಮುಂಗಾರು ಋತುವಿನ ಬೆಳೆ ಅಂಕಿ-ಅಂಶಗಳ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯನ್ನು ಜುಲೈ 5ರಂದು ಜಿಲ್ಲೆಯ ತಹಶೀಲ್ದಾರ್‌ಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಂಜೆಯೊಳಗೆ ನಡಾವಳಿ ವರದಿಯನ್ನು ಕಳುಹಿಸಿ ಕೊಡಬೇಕು. ಮುಂದಿನ 10 ದಿನಗಳಲ್ಲಿ ಮತ್ತೊಂದು ಸಭೆ ನಡೆಸಿ ನಿಗದಿತ ಅವಧಿಯಲ್ಲಿ ಸಮೀಕ್ಷಾ ಕಾರ್ಯಗಳನ್ನು ಕೈಗೊಳ್ಳಲು ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.

‘ಹತ್ತಿ ಬೆಳೆ ಹಾನಿ: ವರದಿ ನೀಡಿ’

ಕಂಪನಿಯೊಂದು ಕಳಪೆ ಬೀಜ ವಿತರಿಸಿದ ಪರಿಣಾಮ ರೈತರು ನಷ್ಟ ಅನುಭವಿಸಿರುವ ಕುರಿತಂತೆ ವರದಿಯಾಗಿವೆ. ನೈಜತೆ ಕುರಿತಂತೆ ಪರಿಶೀಲನೆ ನಡೆಸಿ. ಒಂದೊಮ್ಮೆ ಹಾನಿಯಾಗಿದ್ದರೆ ಯಾವ ಕಂಪನಿ ಬೀಜ ವಿತರಿಸಿದೆ? ಪ್ರಮಾಣೀಕರಿಸದ ಬೀಜವೇ ಅಥವಾ ಇತರ ಬೀಜವೇ? ಮಾರಾಟ ಮಾಡಿದವರ ವಿವರ, ಹಾನಿಯಾದ ಬೆಳೆಯ ಪ್ರಮಾಣ, ನಷ್ಟ ಅನುಭವಿಸಿದ ವಿವರದ ಮಾಹಿತಿ ನೀಡಲು ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಕಳಪೆ ಬೀಜ ಮಾರಾಟ: ಕ್ರಮಕ್ಕೆ ಸೂಚನೆ

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಪ್ರಮಾಣೀಕರಿಸಿದ ಬೀಜ-ಗೊಬ್ಬರ ಹೊರತುಪಡಿಸಿ ಇತರ ಬಿತ್ತನೆ ಬೀಜ, ಗೊಬ್ಬರ ಖರೀದಿಸದಂತೆ ರೈತರಿಗೆ ಜಾಗೃತಿ ಮೂಡಿಸಿ. ಆಯಾ ಪ್ರದೇಶದ ಪ್ರಗತಿಪರ ರೈತರ ಸಂಪರ್ಕ ಇಟ್ಟುಕೊಂಡು ಕಳಪೆ ಬೀಜ-ಗೊಬ್ಬರ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ. ಮಾನ್ಯತೆ ಇಲ್ಲದ ಬಿತ್ತನೆ ಬೀಜ, ಗೊಬ್ಬರ ಹಾಗೂ ಔಷಧಿಗಳನ್ನು ಮಾರಾಟ ಮಾಡುವ ಏಜೆನ್ಸಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ, ಹಾವೇರಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಗದೀಶ ಆರ್. ಪಾಟೀಲ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT