ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಹಾನಿ: ವಾಸ್ತವ ವರದಿ ಸಲ್ಲಿಸಿ

ಹಾವೇರಿ ಜಿಲ್ಲಾಡಳಿತದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೊ ಸಂವಾದ
Last Updated 7 ಆಗಸ್ಟ್ 2022, 13:55 IST
ಅಕ್ಷರ ಗಾತ್ರ

ಹಾವೇರಿ: ಅತಿವೃಷ್ಟಿಯಿಂದಾಗಿ ಹಾನಿಯ ವರದಿ ಅತ್ಯಂತ ನಿಖರವಾಗಿರಲಿ. ಜಿಲ್ಲೆಯಲ್ಲಿ ಬೆಳೆಹಾನಿ ವರದಿ ಉತ್ಪ್ರೇಕ್ಷೆಯಿಂದ ಕೂಡಿದ್ದು, ಪುನರ್ ಪರಿಶೀಲನೆ ನಡೆಸಿ ವಾಸ್ತವಾಂಶಗಳ ಆಧಾರದ ಮೇಲೆ ವರದಿ ಸಲ್ಲಿಸಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಅತಿವೃಷ್ಟಿ ಬಾಧಿತ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಶನಿವಾರ ಬೆಂಗಳೂರಿನಿಂದ ವಿಡಿಯೊ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ಮನೆಹಾನಿ, ಬೆಳೆಹಾನಿ, ಮೂಲ ಸೌಕರ್ಯಗಳ ಹಾನಿ, ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಹಾವೇರಿ ಜಿಲ್ಲೆಯಲ್ಲಿ 27 ಸಾವಿರ ಹೆಕ್ಟೇರ್ ಬೆಳೆಹಾನಿಯಾಗಿರುವುದು ವಾಸ್ತವಾಂಶಗಳನ್ನು ಒಳಗೊಂಡಿಲ್ಲ ಎನಿಸುತ್ತದೆ. ಈ ಕುರಿತಂತೆ ಪುನರ್ ಪರಿಶೀಲನೆ ನಡೆಸಿ ಹಾನಿಯ ಪ್ಲಾಟ್‍ಗಳಿಗೆ ಭೇಟಿ ನೀಡಿ ವಾಸ್ತವ ಪರಿಶೀಲಿಸಿ ಮೂರ್ನಾಲ್ಕು ದಿನ ತಡವಾದರೂ ನಿಖರವಾದ ವರದಿ ನೀಡಿ ಎಂದು ಕೃಷಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮನೆಹಾನಿ ಸಂತ್ರಸ್ತರಿಗೆ ಕೂಡಲೇ ಪರಿಹಾರ ವಿತರಿಸಿ. ಹಾನಿಗೊಳಾಗದ ಅಂಗನವಾಡಿ, ಶಾಲೆ, ರಸ್ತೆ, ಸೇತುವೆ ಸೇರಿದಂತೆ ಮೂಲಸೌಕರ್ಯಗಳ ದುರಸ್ತಿಗೆ ಕೂಡಲೇ ಕ್ರಮವಹಿಸಿ. ಶಾಶ್ವತವಾದ ಕಾಮಗಾರಿಗಳಿಗೆ ಅಂದಾಜು ವೆಚ್ಚದ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಿ ಎಂದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ನದಿಯ ಪ್ರವಾಹ ಅಪಾಯ ಮಟ್ಟ ಮೀರಿಲ್ಲ. ಅಗತ್ಯಬಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಕ್ರಮವಹಿಸಲಾಗಿದೆ. 1,402 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 26 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದೆ. 538 ಮನೆಗಳ ವಿವರವನ್ನು ಆರ್.ಜಿ.ಎಸ್. ಪೋರ್ಟೆಲ್‍ನಲ್ಲಿ ದಾಖಲಿಸಲಾಗಿದೆ. ₹3.89 ಕೋಟಿ ಪರಿಹಾರ ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್ ಮಾತನಾಡಿ, 1,361 ಕಿ.ಮೀ ಗ್ರಾಮೀಣ ರಸ್ತೆ, 971 ಪ್ರಾಥಮಿಕ ಶಾಲೆ, 38 ಅಂಗನವಾಡಿ ಹಾನಿಯಾಗಿರುವ ಕುರಿತು ವರದಿ ಸಲ್ಲಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ಅನುದಾನ ಬಿಡುಗಡೆಗೊಳಿಸಿದ್ದಾರೆ. ದುರಸ್ತಿ ಕಾರ್ಯ ಆರಂಭಿಸಲಾಗಿದೆ ಎಂದರು.

ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಕೃಷಿ ಬೆಳೆಹಾನಿ ಕುರಿತಂತೆ ಮಾಹಿತಿ ನೀಡಿದರು.ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಂ ಹೆಬ್ಬಾರ್ ಅವರು ಸ್ವ–ಕ್ಷೇತ್ರದಿಂದ ವಿಡಿಯೊ ಸಂವಾದಲ್ಲಿ ಭಾಗವಹಿಸಿ ಹಾವೇರಿ ಜಿಲ್ಲೆಯ ಬೆಳೆಹಾನಿ ಸೇರಿದಂತೆ ಜಿಲ್ಲೆಯ ಮಳೆ ಮತ್ತು ಹಾನಿಯ ಸ್ಥಿತಿಗತಿ ಕುರಿತಂತೆ ಮುಖ್ಯಮಂತ್ರಿಗಳಿಗೆ ವಿವರಿಸಿದರು.

‘ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸಿ’

ತಗ್ಗು ಪ್ರದೇಶದ ಜನರನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಬೇಕು. ವರದಾ, ಕುಮದ್ವತಿ ಸೇರಿದಂತೆ ನದಿಗಳ ಏರಿಳಿತದ ಬಗ್ಗೆ ಗಮನಹರಿಸಬೇಕು. ಅತಿವೃಷ್ಟಿಯಿಂದ ತೊಂದರೆಗೊಳಗಾದ ಜನರಿಗೆ ಕಾಳಜಿ ಕೇಂದ್ರಗಳನ್ನು ತೆರೆಯಿರಿ. ಉತ್ತಮ ಗುಣಮಟ್ಟದ ಆಹಾರ ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ. ಕಾಳಜಿ ಕೇಂದ್ರಕ್ಕೆ ಬರಲು ಒಪ್ಪದೇ ಸಂಬಂಧಿಕರ ಮನೆಗೆ ತೆರಳುವ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಇವರಿಗೆ ಡ್ರೈ ರೇಷನ್ ನೀಡಲು ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT