ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಗ್ಲಾಸ್‌ ಹೌಸ್‌: ₹2.60 ಕೋಟಿ ಅನುದಾನ ನೀರುಪಾಲು!

ನಿರಾಕ್ಷೇಪಣಾ ಪತ್ರ ನೀಡದ ಕೆರೆ ಅಭಿವೃದ್ಧಿ ಪ್ರಾಧಿಕಾರ: ಹಳ್ಳಹಿಡಿದ ‘ಗಾಜಿನ ಮನೆ’ ಕಾಮಗಾರಿ
Last Updated 1 ಡಿಸೆಂಬರ್ 2022, 4:16 IST
ಅಕ್ಷರ ಗಾತ್ರ

ಹಾವೇರಿ:ನಗರದ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆಯಲ್ಲಿ ‘ಗಾಜಿನ ಮನೆ’ (ಗ್ಲಾಸ್‌ ಹೌಸ್‌) ನಿರ್ಮಾಣ ಮಾಡುವ ಕನಸು ನುಚ್ಚು ನೂರಾಗಿದೆ. ಈ ಯೋಜನೆಗೆ ಇದುವರೆಗೆ ವ್ಯಯಿಸಿದ್ದ ಬರೋಬ್ಬರಿ ₹2.60 ಕೋಟಿ ನೀರು ಪಾಲಾಗಿದೆ.

ರಾಷ್ಟ್ರಿಯ ಹೆದ್ದಾರಿ-48ಕ್ಕೆ(ಪುಣೆ– ಬೆಂಗಳೂರು) ಹೊಂದಿಕೊಂಡಿರುವ ಈ ಕೆರೆ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತದೆ ಎಂದು ಹಾವೇರಿ ಜಿಲ್ಲೆಯ ಜನರು ನಿರೀಕ್ಷಿಸಿದ್ದರು. ಆದರೆ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಯೋಜನೆಗೆ ತಡೆಯೊಡ್ಡಿದೆ.

ಹೆಗ್ಗೇರಿ ಕೆರೆಯಲ್ಲಿ ಗ್ಲಾಸ್‌ ಹೌಸ್‌ ಹಾಗೂ ಹೈಟೆಕ್‌ ಪಾರ್ಕ್‌ ನಿರ್ಮಿಸುವ ಕುರಿತು ‘ನಿರಾಕ್ಷೇಪಣಾ ಪತ್ರ’ ನೀಡುವಂತೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶ 2021ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ‘ಕೆರೆಯ ಅಂಗಳದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಕೈಗೊಳ್ಳಲು ನಿರ್ಬಂಧ ಇರುವುದರಿಂದ ಪ್ರಸ್ತಾವ ಹಿಂದಿರುಗಿಸಲಾಗಿದೆ’ ಎಂದು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಜನೆಗೆ ಸಮ್ಮತಿ ನೀಡಿಲ್ಲ.

ಆಮೆಗತಿಯಲ್ಲಿ ಕಾಮಗಾರಿ:

ನಾಲ್ಕು ವರ್ಷಗಳು ಕಳೆದರೂ ಶೇ 20ರಷ್ಟು ಕಾಮಗಾರಿ ಕೂಡ ಆಗಲಿಲ್ಲ. ಒಟ್ಟು ₹5.40 ಕೋಟಿಯಲ್ಲಿ ಇದುವರೆಗೆ ಕೇವಲ ₹60 ಲಕ್ಷ ವೆಚ್ಚದ ಕಾಮಗಾರಿ ಮಾಡಲಾಗಿತ್ತು. ಇದರ ಜತೆಗೆ ನಗರೋತ್ಥಾನ ಯೋಜನೆಯಡಿ ₹3 ಕೋಟಿ ವೆಚ್ಚದಲ್ಲಿ ‘ರಿಟೇನಿಂಗ್‌ ವಾಲ್‌’ ಮತ್ತು ರಸ್ತೆ ಕಾಮಗಾರಿಗೆ ಹಣ ಮೀಸಲಿಡಲಾಗಿತ್ತು. ಇದರಲ್ಲಿ ₹2 ಕೋಟಿಯಷ್ಟು ಕಾಮಗಾರಿಗೆ ವಿನಿಯೋಗಿಸಲಾಗಿದೆ. ಇನ್ನೂ ₹1 ಕೋಟಿ ಕಾಮಗಾರಿ ಬಾಕಿ ಉಳಿದಿತ್ತು.

ಕೋಡಿಬಿದ್ದ ಕೆರೆ:

ಹೆಗ್ಗೇರಿ ಕೆರೆಯಲ್ಲಿ ಈ ಯೋಜನೆ ಕೈಗೊಂಡಾಗ ಹಲವಾರು ವರ್ಷಗಳಿಂದ ಕೆರೆ ನೀರಿಲ್ಲದೆ ಬತ್ತಿ ಹೋಗಿತ್ತು. 2009ರಲ್ಲಿ ತುಂಬಿದ್ದ ಕೆರೆಯು ದಶಕದ ನಂತರ ಅಂದರೆ 2019ರಲ್ಲಿ ಅತಿವೃಷ್ಟಿಯಿಂದ ಕೋಡಿ ಬಿದ್ದಿತು. ಕೆರೆ ತುಂಬುವುದಿಲ್ಲ ಎಂದು ನಿರೀಕ್ಷಿಸಿದ್ದ ಗುತ್ತಿಗೆದಾರರಿಗೆ ದೊಡ್ಡ ಸವಾಲು ಎದುರಾಗಿ ಕಾಮಗಾರಿ ಸ್ಥಗಿತಗೊಂಡಿತು. ಇದು ಕೂಡ ಕಾಮಗಾರಿ ವಿಳಂಬವಾಗಲು ಕಾರಣ ಎನ್ನಲಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆದಾರರ ವಿಳಂಬ ಧೋರಣೆ ಹಾಗೂನಿರಾಕ್ಷೇಪಣಾ ಪತ್ರ ಪಡೆಯದೇ ಕಾಮಗಾರಿ ಆರಂಭ ಮಾಡಿದ ಕಾರಣ ‘ಗ್ಲಾಸ್‌ ಹೌಸ್‌’ ಯೋಜನೆ ನೀರುಪಾಲಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

***

ಏನಿದು ಯೋಜನೆ?

2017–18ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲೆಗೆ ₹50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಅದರಲ್ಲಿ ₹5 ಕೋಟಿಯನ್ನು ಗಾಜಿನ ಮನೆ ಮತ್ತು ಇತರ ಕಾಮಗಾರಿಗಳಿಗೆ ಮೀಸಲಿಡಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಟೆಂಡರ್‌ ಕರೆದು, ಬೆಂಗಳೂರಿನ ನಿಖಿತಾ ಬಿಲ್ಡ್‌ಟೆಕ್‌ ಕಂಪನಿಗೆ ಕಾಮಗಾರಿಯ ಹೊಣೆ ನೀಡಿ, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು.

ಸಂತ ಕನಕದಾಸರು ನಡೆದಾಡಿದ ಪುಣ್ಯಭೂಮಿಯಲ್ಲಿ ಗಾಜಿನ ಮನೆಯನ್ನು ತಂಬೂರಿ ಆಕಾರದಲ್ಲಿ 20 ಸಾವಿರ ಚದರ ಅಡಿಯಲ್ಲಿ ನಿರ್ಮಾಣ ಮಾಡಬೇಕು. ಪ್ರವಾಸಿಗರು ಗಾಜಿನ ಮನೆಯ ಮೂಲಕ ಕೆರೆಯ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬೇಕು. ಗಾಜಿನ ಮನೆಯ ಸುತ್ತ ನೀರು ಮತ್ತು ಮಣ್ಣಿನ ಪಾರ್ಶ್ವ ಒತ್ತಡವನ್ನು ಪ್ರತಿರೋಧಿಸಲು ಗೋಡೆಯನ್ನು ನಿರ್ಮಿಸಬೇಕು. ಕೆರೆಯ ದಂಡೆಯಿಂದ ಗಾಜಿನ ಮನೆಗೆ ಬರಲು ರಸ್ತೆ ನಿರ್ಮಿಸಬೇಕು ಎಂದು ನೀಲನಕ್ಷೆ ರಚಿಸಲಾಗಿತ್ತು.

***

ಹೆಗ್ಗೇರಿ ಕೆರೆಯಲ್ಲಿ ಗ್ಲಾಸ್‌ ಹೌಸ್‌ ನಿರ್ಮಾಣಕ್ಕೆ ಕೆರೆ ಅಭಿವೃದ್ಧಿ ಪ್ರಾಧಿಕಾರದವರು ನಿರಾಕ್ಷೇಪಣ ಪತ್ರ ನೀಡಿಲ್ಲ. ಬೇರೆ ಕಡೆ ನಿರ್ಮಿಸಲು ಪರಿಶೀಲಿಸಲಾಗುವುದು
– ರಘುನಂದನಮೂರ್ತಿ, ಜಿಲ್ಲಾಧಿಕಾರಿ, ಹಾವೇರಿ

***

ನೆಲೋಗಲ್ಲ ಗುಡ್ಡದಲ್ಲಿ ಗ್ಲಾಸ್‌ ಹೌಸ್‌ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಹೆಗ್ಗೇರಿ ಕೆರೆಯಲ್ಲಿ ಬಸವೇಶ್ವರ ಮೂರ್ತಿ ಸ್ಥಾಪನೆ ಮತ್ತು ಪಕ್ಷಿಗಳ ತಾಣ ಸೃಷ್ಟಿಸಲು ಕ್ರಮ ಕೈಗೊಳ್ಳುತ್ತೇವೆ
– ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷ, ಹಾವೇರಿ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT