ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸೈಬರ್‌ ಅಪರಾಧ ಏರಿಕೆ

ಬಹುಮಾನದ ಆಮಿಷ ಒಡ್ಡಿ ಬ್ಯಾಂಕ್ ಖಾತೆಗೆ ಕನ್ನ: ವಂಚಕರ ಪತ್ತೆಗೆ ಪೊಲೀಸರ ಹರಸಾಹಸ
Last Updated 16 ಸೆಪ್ಟೆಂಬರ್ 2021, 5:12 IST
ಅಕ್ಷರ ಗಾತ್ರ

ಹಾವೇರಿ: ಬಹುಮಾನದ ಆಮಿಷ ಮತ್ತು ಕೆಲಸ ಕೊಡಿಸುವುದಾಗಿ ನಂಬಿಸುವ ವಂಚಕರು, ಬ್ಯಾಂಕ್‌ ಗ್ರಾಹಕರ ಖಾತೆಗೆ ಕನ್ನ ಹಾಕುತ್ತಿರುವ ‘ಸೈಬರ್‌ ಅಪರಾಧ’ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ.

2018ರಲ್ಲಿ 3 ಪ್ರಕರಣ, 2019ರಲ್ಲಿ 9 ಪ್ರಕರಣ, 2020ರಲ್ಲಿ 30 ಪ್ರಕರಣ ಹಾಗೂ 2021ರಲ್ಲಿ 48 ಸೈಬರ್‌ ಅಪರಾಧ ಪ್ರಕರಣಗಳು ನಗರದ ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ.

ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕುಳಿತು, ಬ್ಯಾಂಕ್‌ ಮತ್ತು ಗ್ರಾಹಕ ಸೇವಾ ಕೇಂದ್ರಗಳ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ಕರೆ ಮಾಡುವ ವಂಚಕರು, ಡೆಬಿಟ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ವಿವರಗಳನ್ನು ಬಳಸಿಕೊಂಡು ಮೋಸ ಮಾಡುತ್ತಿದ್ದಾರೆ. ಬಹುಮಾನದ ಆಮಿಷವೊಡ್ಡಿ, ವಿವಿಧ ಶುಲ್ಕಗಳನ್ನು ಹಂತ ಹಂತವಾಗಿ ಕಟ್ಟಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ದಾಖಲಾಗಿವೆ.

ಪತ್ತೆಯಾಗದ ವಂಚಕರು:

ಜಿಲ್ಲೆಯಲ್ಲಿ 90 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿದ್ದು, 10 ಪ್ರಕರಣಗಳು ಪತ್ತೆಯಾಗಿವೆ. ಆದರೆ, ಯಾವುದೇ ವಂಚಕರು ಇದುವರೆಗೆ ಪೊಲೀಸರ ಬಲೆಗೆ ಬಿದ್ದಿಲ್ಲ. ನಕಲಿ ಸಿಮ್‌ ಕಾರ್ಡ್‌ ಬಳಸಿ ಕರೆ ಮಾಡುವ ವಂಚಕರ ಜಾಡನ್ನು ಹಿಡಿದು ಹೋಗುವ ಪೊಲೀಸರಿಗೆ ಸಿಮ್‌ ಕಾರ್ಡ್‌ ಖರೀದಿಸಿದ ಮೂಲ ಗ್ರಾಹಕ ಸಿಗುತ್ತಿದ್ದಾನೆಯೇ ಹೊರತು, ವಂಚಕರು ಪತ್ತೆಯಾಗುತ್ತಿಲ್ಲ.

ಮೋಸ ಹೋದ ವಿದ್ಯಾವಂತರು!

ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಮೋಸ ಹೋಗಿರುವವರಲ್ಲಿ ವಿದ್ಯಾವಂತರೇ ಹೆಚ್ಚು. ಇಂಡಿಯನ್‌ ಷೇರು ಮಾರುಕಟ್ಟೆಯಲ್ಲಿ ಲಾಭ ಮಾಡಿಕೊಡುತ್ತೇವೆ ಎಂದು ನಂಬಿಸಿದ ವಂಚಕರು ಬ್ಯಾಡಗಿ ತಾಲ್ಲೂಕು ಅಂಗರಗಟ್ಟಿ ಗ್ರಾಮದ ಶಿಕ್ಷಕನಿಂದ ₹12.95 ಲಕ್ಷ ದೋಚಿದ್ದರು.ಎಸ್‌ಬಿಐ ಬ್ಯಾಂಕ್‌ ವ್ಯವಸ್ಥಾಪಕ ಎಂದು ಹೇಳಿಕೊಂಡು, ಅಕೌಂಟ್‌ನ ಕೆವೈಸಿ ಅಪ್‌ಡೇಟ್‌ ಮಾಡಬೇಕು ಎಂದು ಹೇಳಿರಟ್ಟೀಹಳ್ಳಿ ಪಟ್ಟಣದ ಬನಶಂಕರಿ ನಗರದ ನಿವೃತ್ತ ನೌಕರನಿಂದ₹2 ಲಕ್ಷವನ್ನು ಗುಳುಂ ಮಾಡಿದ್ದರು.

‘ಕೌನ್‌ ಬನೇಗಾ ಕರೋಡ್‌ಪತಿ’ಯಿಂದ ₹25 ಲಕ್ಷ ಬಹುಮಾನ ಬಂದಿದೆ ಅಂತ ನಂಬಿಸಿ, ವಿವಿಧ ಶುಲ್ಕಗಳ ಹೆಸರಿನಲ್ಲಿ ಸಂಗೂರ ಸಕ್ಕರೆ ಕಾರ್ಖಾನೆ ನಿವೃತ್ತ ನೌಕರನಿಂದ ₹15 ಲಕ್ಷ ಹಾಗೂಇಂಗ್ಲೆಂಡ್‌ನ ಕಂಪನಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ಸವಣೂರ ಪಟ್ಟಣದ ಪದವೀಧರ ಮಹಿಳೆಯನ್ನು ನಂಬಿಸಿ, ₹2.09 ಲಕ್ಷ ವಂಚಿಸಿದ್ದರು.

ದೂರುದಾರರಿಗೆ ₹21 ಲಕ್ಷ ವಾಪಸ್‌:

‘2020ರಲ್ಲಿ ದಾಖಲಾದ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ, ಸುಮಾರು ₹21 ಲಕ್ಷವನ್ನು ಪತ್ತೆ ಹಚ್ಚಿ, ದೂರುದಾರರ ಖಾತೆಗೆ ಮರಳಿ ಹಾಕಲಾಗಿದೆ. 2021ರಲ್ಲಿ ₹18 ಲಕ್ಷ ಪತ್ತೆಯಾಗಿದ್ದು, ದೂರುದಾರರಿಗೆ ವಾಪಸ್‌ ಕೊಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಬಹುತೇಕ ಪ್ರಕರಣಗಳು ನ್ಯಾಯಾಲಯದ ಹಂತದಲ್ಲಿವೆ. ನಕಲಿ ದಾಖಲೆ, ನಕಲಿ ಸಿಮ್‌ ಕಾರ್ಡ್‌ ಸೃಷ್ಟಿಸಿ ಮೋಸ ಎಸಗುವ ವಂಚಕರ ಪತ್ತೆಗೆ ಬಲೆ ಬೀಸಲಾಗಿದೆ’ ಎಂದು ಹಾವೇರಿ ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಎಸ್‌.ಕೆ.ಪವಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸೈಬರ್‌ ಕಳ್ಳರ ಗಾಳ: ಇರಲಿ ಎಚ್ಚರ

* ಅನಾಮಧೇಯ ಕರೆಗಳಿಗೆ ಬ್ಯಾಂಕ್‌ ವಿವರಗಳನ್ನು ನೀಡಬೇಡಿ

* ಗೂಗಲ್‌ನಲ್ಲಿ ‘ಕಸ್ಟಮರ್‌ ಕೇರ್‌ ಸಂಖ್ಯೆಗಳನ್ನು ಹುಡುಕಬೇಡಿ

* ಸಾಮಾಜಿಕ ಜಾಲತಾಣದ ಜಾಹೀರಾತು ನಂಬಿ, ಹಣ ಹಾಕಬೇಡಿ

* ಮೊಬೈಲ್‌ಗೆ ಬರುವ ಅನಾಮಧೇಯ ಲಿಂಕ್‌ಗಳನ್ನು ಒತ್ತಬೇಡಿ

* ಸಿಕ್ಕ ಸಿಕ್ಕ ಕಡೆ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಹಾಕಬೇಡಿ

* ಅಶ್ಲೀಲ ಪೋಟೊ, ವಿಡಿಯೊ ಕಳುಹಿಸುವವರ ಮತ್ತು ನಕಲಿ ಅಕೌಂಟ್‌ ತೆರೆಯುವವರ ವಿರುದ್ಧ ತುರ್ತು ದೂರವಾಣಿ ಸಂಖ್ಯೆ 112 ಅಥವಾ ದೂ:08375–232770ಗೆ ದೂರು ನೀಡಿ.

***

"ಇನ್‌ಸ್ಪೆಕ್ಟರ್‌ಗಳಿಗೆ ವಿಶೇಷ ತರಬೇತಿ ನೀಡಿದ್ದೇವೆ. 50 ಸಾವಿರ ಕರಪತ್ರ ಮುದ್ರಿಸಿ, ಸಾರ್ವಜನಿಕರಿಗೆ ಇಲಾಖೆಯಿಂದ ಜಾಗೃತಿ ಮೂಡಿಸುತ್ತಿದ್ದೇವೆ"
– ಹನುಮಂತರಾಯ, ಎಸ್ಪಿ, ಹಾವೇರಿ

***

ಸೈಬರ್‌ ಅಪರಾಧ ಪ್ರಕರಣಗಳ ವಿವರ

ತಾಲ್ಲೂಕು;2019;2020;2021

ರಾಣೆಬೆನ್ನೂರು;01;12;12

ಹಾವೇರಿ;01;07;09

ಶಿಗ್ಗಾವಿ;03;04;05

ರಟ್ಟೀಹಳ್ಳಿ;00;03;07

ಹಾನಗಲ್‌;01;02;05

ಬ್ಯಾಡಗಿ;01;01;04

ಹಿರೇಕೆರೂರು;02;00;03

ಸವಣೂರ;00;01;03

ಒಟ್ಟು;09;30;48

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT