ಬುಧವಾರ, ಸೆಪ್ಟೆಂಬರ್ 18, 2019
23 °C
ಕುಣಿಮೆಳ್ಳಿ ಹಳ್ಳಿಯಲ್ಲಿ ಸಂತ್ರಸ್ತರು ಅತಂತ್ರ l ಕೈಗೆ ಸಿಗದ ಅಧಿಕಾರಿಗಳಿಂದ ಕಂಗಾಲು

ಪರಿಹಾರ ಕೇಂದ್ರ ಬಿಡಲು ಡೆಡ್‌ಲೈನ್!

Published:
Updated:
Prajavani

ಹಾವೇರಿ: ಜಿಲ್ಲೆಯ ಕುಣಿಮೆಳ್ಳಿ ಹಳ್ಳಿಯ ಪರಿಹಾರ ಕೇಂದ್ರದಲ್ಲೀಗ ‘ಕಲಿಕೆ’ ಹಾಗೂ ‘ಮಾನವೀಯತೆ’ ವಿಷಯಗಳ ಕುರಿತು ಸಂಘರ್ಷ ಶುರುವಾಗಿದೆ!

‘ನೀವೆಲ್ಲ ಶಾಲೆಯಲ್ಲಿ ಇರುವುದರಿಂದ ಮಕ್ಕಳ ಕಲಿಕೆಗೆ ತೊಂದರೆ ಆಗುತ್ತಿದೆ. 24 ಗಂಟೆಯೊಳಗೆ ಜಾಗ ಖಾಲಿ ಮಾಡದಿದ್ದರೆ ಬುಧವಾರ ಬೆಳಿಗ್ಗೆ ನಾವೇ ಬಂದು ಹೊರದಬ್ಬುತ್ತೇವೆ’ ಎಂದು ಗ್ರಾಮದ ಗುಂಪು ಸಂತ್ರಸ್ತರಿಗೆ ಖಡಕ್ ಎಚ್ಚರಿಕೆ ಕೊಟ್ಟು ಹೋಗಿದೆ. ಈ ಪರಿಸ್ಥಿತಿ ಹೇಳಿಕೊಳ್ಳಲು ಅಧಿಕಾರಿಗಳೂ ಕೈಗೆ ಸಿಗದ ಕಾರಣ ಸಂತ್ರಸ್ತರು ಕಂಗಾಲಾಗಿದ್ದಾರೆ.

ಇಲ್ಲಿನ ಸರ್ಕಾರಿ ಶಾಲೆಯಲ್ಲಿ 92 ಮಕ್ಕಳಿದ್ದು, ಎರಡು ಕೊಠಡಿಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ನೆರೆಯಿಂದ ಮನೆಗಳಿಗೆ ಭಾಗಶಃ ಹಾನಿಯಾಗಿದ್ದ ಕುಟುಂಬಗಳು ಈಗಾಗಲೇ ಕೇಂದ್ರ ತೊರೆದು ಮನೆಗಳತ್ತ ಹೆಜ್ಜೆ ಹಾಕಿವೆ. ಆದರೆ, ಪೂರ್ತಿ ಮನೆ ಕಳೆದುಕೊಂಡ 15 ಕುಟುಂಬಗಳು ಈ ಕೇಂದ್ರಗಳಲ್ಲೇ ಆಶ್ರಯ ಪಡೆದಿವೆ.‌

ಮಂಗಳವಾರ ಬೆಳಿಗ್ಗೆ ಶಾಲೆ ಬಳಿ ಜಮಾಯಿಸಿದ 50ಕ್ಕೂ ಹೆಚ್ಚು ಗ್ರಾಮಸ್ಥರು, ಸಂತ್ರಸ್ತರ ಹಾಗೂ ಶಿಕ್ಷಣಾಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ. ‘ಒಂದೋ ಶಾಲೆಯಲ್ಲಿ ಸಂತ್ರಸ್ತರಿರಬೇಕು. ಇಲ್ಲವೇ, ವಿದ್ಯಾರ್ಥಿಗಳು ಇರಬೇಕು. ಮಕ್ಕಳೇ ಕಲಿಯಲಿ ಎಂದಾದರೆ ಇವರನ್ನೆಲ್ಲ ಹೊರದಬ್ಬಿ. ನಿಮ್ಮಿಂದ ಈ ಕೆಲಸ ಆಗದಿದ್ದರೆ ಹೇಳಿ. ನಾವೇ ನೋಡಿಕೊಳ್ಳುತ್ತೇವೆ’ ಎಂದು ಗ್ರಾಮಸ್ಥರ ಗುಂಪು ಹೇಳಿದೆ. 

ಬೀದಿಯಲ್ಲಿ ಮಲಗಿ: ‘ಹೊರ ಹೋದರೆ ಉಳಿಯಲು ಜಾಗವಿಲ್ಲ. ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟ ಕೂಡಲೇ ಇಲ್ಲಿಂದ ಹೊರಡುತ್ತೇವೆ’ ಎಂದು ಸಂತ್ರಸ್ತರು ಮನವಿ ಮಾಡುತ್ತಾರೆ. ಅದಕ್ಕೆ ಗ್ರಾಮದ ಹಿರಿಯರೊಬ್ಬರು, ‘ನೀವು ಬೀದಿಯಲ್ಲಿ ಬೇಕಾದರೂ ಮಲಗಿಕೊಳ್ಳಿ. ಅದು ನಮಗೆ ಬೇಡದ ವಿಷಯ. ಮೊದಲು ಇಲ್ಲಿಂದ ಹೊರ ನಡೆಯಿರಿ’ ಎಂದು ಅಮಾನವೀಯವಾಗಿ ಧಮಕಿ ಹಾಕುವ ದೃಶ್ಯವೂ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಬೆಳಿಗ್ಗೆಯಿಂದ ಇಷ್ಟೆಲ್ಲ ದಾಂದಲೆ ನಡೆಯುತ್ತಿದ್ದರೂ ತಹಶೀಲ್ದಾರ್ ಆದಿಯಾಗಿ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಾರದಿರುವುದು ಸಂತ್ರಸ್ತರ ಕೋಪಕ್ಕೆ ಕಾರಣವಾಗಿದೆ. ‘ಎರಡು ದಿನಗಳಲ್ಲಿ ಶೆಡ್ ನಿರ್ಮಿಸಿಕೊಡುವುದಾಗಿ ಹೇಳಿದವರು, ಈಗ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ’ ಎಂದೂ ಆಕ್ರೋಶ ಹೊರಹಾಕಿದ್ದಾರೆ.

‘ಎಲ್ಲ ಮಕ್ಕಳಿಗೂ ಪರ್ಯಾಯ ಕೊಠಡಿಗಳಲ್ಲಿ ಪಾಠ ಹೇಳಿಕೊಡಲಾಗುತ್ತಿದೆ. ಆದರೂ, ಕೆಲವರು ಗಲಾಟೆ ಸೃಷ್ಟಿಸಿದ್ದಾರೆ. ಈ ವಿಷಯ ತಿಳಿಸಲು ಅಧಿಕಾರಿಗಳಿಗೆ ಕರೆ ಮಾಡಿದರೆ, ‘ಮೀಟಿಂಗ್‌ನಲ್ಲಿದ್ದೇನೆ’ ಎಂಬ ಸಂದೇಶ ಕಳುಹಿಸಿ ಸುಮ್ಮನಾಗುತ್ತಾರೆ. ಇಂಥವರ ಜತೆ ಕೆಲಸ ಮಾಡುವುದಾದರೂ ಹೇಗೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ರಮೇಶ್ ಸೂರದ್ ಬೇಸರ ವ್ಯಕ್ತಪಡಿಸಿದರು.

"ಹಾನಿಗೊಳಗಾದ ಎಲ್ಲ ಗ್ರಾಮಗಳ ಮಾಹಿತಿ ತರಿಸಿಕೊಳ್ಳಲಾಗಿದೆ. ಶೆಡ್ ನಿರ್ಮಿಸಿ ಕೊಡಲು ಜಾಗವನ್ನೂ ಗುರುತಿಸಿದ್ದು, ಶೀಘ್ರ ಶೆಡ್‌ ನಿರ್ಮಿಸುತ್ತೇವೆ "

-ಎನ್‌.ತಿಪ್ಪೇಸ್ವಾಮಿ ಹೆಚ್ಚುವರಿ ಜಿಲ್ಲಾಧಿಕಾರಿ, ಹಾವೇರಿ

Post Comments (+)