ಶನಿವಾರ, ಡಿಸೆಂಬರ್ 14, 2019
21 °C
ಹಾವೇರಿಯ ಶಿವಲಿಂಗೇಶ್ವರ ಜನುವಾರು ಮಾರುಕಟ್ಟೆಯಲ್ಲಿನ ಕುರಿ ವ್ಯಾಪಾರ

ಕುರಿ ಮಾರುಕಟ್ಟೆ: ‘ಮಹಾಲಯ’ ಬಳಿಕ ಬೇಡಿಕೆ

ಮಂಜುನಾಥ ಸಿ. ರಾಠೋಡ Updated:

ಅಕ್ಷರ ಗಾತ್ರ : | |

Deccan Herald

ಹಾವೇರಿ: ಮಹಾಲಯ ಅಮಾವಾಸ್ಯೆಯ ಬಳಿಕ ಕುರಿಗೆ ಬೇಡಿಕೆ ವೃದ್ಧಿಸಲಿದ್ದು, ಇಲ್ಲಿನ ಹಾನಗಲ್‌ ರಸ್ತೆಯಲ್ಲಿರುವ ಎಪಿಎಂಸಿ ಆವರಣದ ಶಿವಲಿಂಗೇಶ್ವರ ಜಾನುವಾರು ಮಾರುಕಟ್ಟೆಯಲ್ಲೂ ಭಾರಿ ವ್ಯಾಪಾರ ನಡೆಯಲಿದೆ. ಇಲ್ಲಿ ಕೇವಲ ಜಿಲ್ಲೆ ಮಾತ್ರವಲ್ಲ, ಬೆಳಗಾವಿಯಿಂದ ಬೆಂಗಳೂರು ನತಕ ಹಾಗೂ ಹೊರ ರಾಜ್ಯದ ವ್ಯಾಪಾರಿಗಳು ಬಂದು ಲಕ್ಷಾಂತರ ವಹಿವಾಟು ನಡೆಸುತ್ತಾರೆ.

ಇಲ್ಲಿ ಸಾಂಪ್ರದಾಯಿಕ ಕುರಿ ವ್ಯಾಪಾರ ನಡೆಯುತ್ತಿದ್ದು, ಟಗರು, ಕುರಿ, ಆಡು, ಮೇಕೆಗಳ ಖರೀದಿಗೆ ಇತರ ಜಿಲ್ಲೆಗಳಿಂದಲೂ  ಬರುತ್ತಾರೆ. ಆದರೆ, ಮುಂಗಾರು ಆರಂಭಗೊಂಡ ಬಳಿಕ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದರು. ಆ ಬಳಿಕ ಶ್ರಾವಣ ಮಾಸ, ಸಾಲು ಸಾಲು ಹಬ್ಬಗಳು ಬಂದಿದ್ದು, ಮಾಂಸಕ್ಕೆ ಬೇಡಿಕೆ ಕುಸಿದಿತ್ತು. ಸಹಜವಾಗಿ ಕುರಿ ಮಾರುಕಟ್ಟೆಯಲ್ಲೂ ವ್ಯಾಪಾರ ಇಳಿಕೆಯಾಗಿತ್ತು.

‘ಆದರೆ, ಮಹಾಲಯ ಅಮಾವಾಸ್ಯೆ ಬಳಿಕ ಬೇಡಿಕೆ ವೃದ್ಧಿಸುತ್ತದೆ. ಅನಂತರ ಬರುವ ಹಿರಿಯರ ಹಬ್ಬ, ನವಮಿ, ದಶಮಿ, ನರಕ ಚತುರ್ಥಿ, ದೀಪಾವಳಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬಲಿ ನೀಡುವುದು, ಮಾಂಸದೂಟ ಹಾಕುವುದೂ ಹೆಚ್ಚಾಗಿ ನಡೆಯುತ್ತದೆ. ಅಲ್ಲದೇ, ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಆವಕಗೊಳ್ಳುವ ಕಾರಣ ವಹಿವಾಟೂ ಹೆಚ್ಚುತ್ತದೆ. ಅಲ್ಲದೇ ಜಾತ್ರೆಗಳೂ ಶುರುವಾಗುತ್ತವೆ. ಹೀಗಾಗಿ ಕುರಿ ಮಾರುಕಟ್ಟೆ ಚೇತರಿಕೆ ಕಾಣುತ್ತದೆ ಎನ್ನುತ್ತಾರೆ ಸ್ಥಳಿಯ ವ್ಯಾಪಾರಿ ಶಂಕರಪ್ಪ.

ಹಾವೇರಿ ಮಾರುಕಟ್ಟೆಗೆ ಜಮಲಾಪುರಿ, ಸೆರಾಯ್‌, ಬಿಟಲ್‌ ಹಾಗೂ ಸ್ಥಳೀಯ ತಳಿಗಳು ಬರುತ್ತವೆ. ಚೆನ್ನಾಗಿ ಮೇಯಿಸಿದ ಎರಡು ತಿಂಗಳಿನ ಮರಿಯನ್ನು ಸುಮಾರು ₹4 ಸಾವಿರಕ್ಕೆ ಮಾರಾಟ ಮಾಡಬಹುದು. ದೊಡ್ಡ ಕುರಿಗಳಿಗೆ ಇನ್ನು ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ, ಮೇವಿನ ಸಮಸ್ಯೆ, ಆರೋಗ್ಯದ ಸಮಸ್ಯೆ ಇದ್ದರೆ ಬೇಡಿಕೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಚಿಕ್ಕೋಡಿಯ ವ್ಯಾಪಾರಿ ನಾಗಪ್ಪ.

ರಾಜ್ಯದ ಬೆಂಗಳೂರು, ಕೋಲಾರ, ತುಮಕೂರ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಂದ ಮಾತ್ರವಲ್ಲ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಂದಲೂ ವ್ಯಾಪಾರಿಗಳು ಬರುತ್ತಾರೆ. ಆಗ ಭರ್ಜರಿ ಡಿಮ್ಯಾಂಡ್ ಉಂಟಾಗುತ್ತದೆ. ಮುಂದಿನ ವಾರದಿಂದ ವ್ಯಾಪಾರ ಹೆಚ್ಚಾಗಲಿದೆ ಎಂದರು.

ಕೆಲವು ವ್ಯಾಪಾರಿಗಳು ಒಂದು ಮಾರುಕಟ್ಟೆಯಲ್ಲಿ ಖರೀದಿಸಿ, ಇನ್ನೊಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ಮಾಂಸಕ್ಕಾಗಿಯೇ ಖರೀದಿಸುತ್ತಾರೆ. ಅಲ್ಲದೇ, ಹರಕೆಗಾಗಿ ಖರೀದಿಸುವ ಮಂದಿ ಹೆಚ್ಚಿನ ದರ ನೀಡುತ್ತಾರೆ. ಕುರಿಯನ್ನು ಖರೀದಿಸುವಾಗ ಹಲ್ಲುಗಳು ಹಾಗೂ ನಡು ಹಿಡಿದು ಅಂದಾಜು ತೂಕವನ್ನು ಲೆಕ್ಕ ಹಾಕುತ್ತಾರೆ ಎಂದು ನಿಂಗಣ್ಣ ಬಸಾಪುರ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು