ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಪರಿಶಿಷ್ಟ ಪಂಗಡ ಸೇರ್ಪಡೆಗೆ ಆಗ್ರಹ

ಅಖಿಲ ಕರ್ನಾಟಕ ಹೆಳವ ಸಮಾಜದ ಜಿಲ್ಲಾ ಘಟಕದಿಂದ ಪ್ರತಿಭಟನೆ
Last Updated 23 ಸೆಪ್ಟೆಂಬರ್ 2022, 13:22 IST
ಅಕ್ಷರ ಗಾತ್ರ

ಹಾವೇರಿ: ಹೆಳವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ಹೆಳವ ಸಮಾಜದ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಮುರುಘಾ ಮಠದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ.ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ, ಕೆಲಹೊತ್ತು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ನಂತರ ಪಿ.ಬಿ.ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿ ತಮ್ಮ ನ್ಯಾಯ ಸಮ್ಮತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಎಂ.ನಾಗರಾಜ ಗುರೂಜಿ ಮಾತನಾಡಿ, ‘ಅಲೆಮಾರಿ ಗುಂಪಿಗೆ ಸೇರಿದ ಹೆಳವ ಜನಾಗಂದವರು ಹೊಟ್ಟೆಪಾಡಿಗಾಗಿ ಒಕ್ಕಲು ಮನೆತನದವರ ವಂಶಾವಳಿ ಹೇಳುತ್ತಾ, ಊರೂರು ಅಲೆಯುತ್ತಾ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಶಾಶ್ವತ ನೆಲೆ ಇಲ್ಲದೇ ಚಳಿ, ಮಳೆ, ಗಾಳಿ, ಬಿಸಿಲು ಲೆಕ್ಕಿಸದೇ ಊರಿಂದ ಊರಿಗೆ ಅಲೆಯುತ್ತಾ ಬೀದಿ ಬದಿಗಳಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ’ ಎಂದು ದೂರಿದರು.

ರಾಜ್ಯದಲ್ಲಿ ಸುಮಾರು 1.50 ಲಕ್ಷ ಹೆಳವ ಸಮುದಾಯದ ಜನರಿದ್ದು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಸಮಾಜದ ಮುಖ್ಯವಾಹಿನಿಗೆ ಬರಲಾಗದೇ ಶೋಷಣೆಗೆ ಒಳಗಾಗಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಮುದಾಯದ ಜನರಿಗೆ ಸಮಸ್ಯೆಯಾಗುತ್ತಿದ್ದು, ಈ ಹಿನ್ನೆಲೆ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ನಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

1975ರಲ್ಲಿ ಎಲ್.ಜಿ.ಹಾವನೂರ ಹಾಗೂ 1992ರಲ್ಲಿ ಡಿ.ಕೆ.ನಾಯ್ಕರ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಹೆಳವ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಶಿಫಾರಸು ಮಾಡಲಾಗಿತ್ತು. ಆದರೆ ಇವರೆಗೂ ನಮಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.

ಅಖಿಲ ಕರ್ನಾಟಕ ಹೆಳವ ಸಮಾಜದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಹೆಳವರ ಕೇಲೂರ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಶರಣಪ್ಪ ಹೆಳವರ, ಆಂಜನೇಯಪ್ಪ, ಚಂದ್ರಶೇಖರ ರೊಡ್ಕವರ, ಯಲ್ಲಪ್ಪ ಹೆಳವರ ನಾಮದೇವಪ್ಪ ಮುದೇನೂರ, ಬಸವರಾಜಪ್ಪ ಸಿಂಧಗೆರಿ, ಚಂದ್ರಪ್ಪ ಗಿಡ್ಡಳ್ಳಿ, ರಾಮಪ್ಪ ಎಚ್., ಪಿ.ಆರ್.ಚಿಕ್ಕಳ್ಳಿ, ಪಿ.ಬಿ.ಚಿಕ್ಕೋಣತಿ, ರಾಮಕೃಷ್ಣ ರೊಡ್ಕವರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT