ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೌಢಶಾಲೆ ಮರು ಮಂಜೂರಾತಿಗೆ ಆಗ್ರಹ

ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳು: ಕಳವಳ
Last Updated 9 ಆಗಸ್ಟ್ 2022, 4:47 IST
ಅಕ್ಷರ ಗಾತ್ರ

ಹಾವೇರಿ: ‘ನಾಗೇಂದ್ರನಮಟ್ಟಿಯ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು ಪ್ರೌಢಶಾಲೆ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಕೂಡಲೇ ಉನ್ನತೀಕರಿಸಿದ ಪ್ರೌಢಶಾಲೆಯನ್ನು ಮರು ಮಂಜೂರು ಮಾಡಬೇಕು’ ಎಂದು ನಾಗೇಂದ್ರನಮಟ್ಟಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ಡಂಬ್ರಳ್ಳಿ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರೌಢಶಾಲೆಯ ಅಗತ್ಯವನ್ನು ಮನಗಂಡ ರಾಜ್ಯ ಸರ್ಕಾರ 2011ರಲ್ಲಿ ಉನ್ನತೀಕರಿಸಿದ ಪ್ರೌಢಶಾಲೆಯನ್ನು ಮಂಜೂರು ಮಾಡಿತ್ತು. ಆದರೆ, 2012ರಲ್ಲಿ ಏಕಾಏಕಿ ಆ ಪ್ರೌಢಶಾಲೆಯನ್ನು ಅಂದಿನ ಡಿಡಿಪಿಐ ರದ್ದುಗೊಳಿಸಿ, ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸಲು ಆದೇಶಿಸಿದ್ದರು. ಡಿಡಿಪಿಐ ಕ್ರಮವನ್ನು ಖಂಡಿಸಿ, ಶಾಲೆಯ ಎದುರು ಬೃಹತ್‌ ಪ್ರತಿಭಟನೆ ನಡೆಸಿದ್ದೆವು. ನಂತರ ಹಲವಾರು ಮನವಿಗಳನ್ನು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾಗೇಂದ್ರನಮಟ್ಟಿಯಲ್ಲಿ ಬಡ ಮತ್ತು ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸುಮಾರು 28 ಸಾವಿರ ಜನಸಂಖ್ಯೆಯಿದೆ. ಈ ಪ್ರದೇಶದ ಮಕ್ಕಳು ಹೈಸ್ಕೂಲ್‌ಗಾಗಿ 3 ಕಿ.ಮೀ. ದೂರದಲ್ಲಿರುವ ಎಪಿಎಂಸಿ ಸಮೀಪದ ಸರ್ಕಾರಿ ಶಾಲೆ ಅಥವಾ ಮುನ್ಸಿಪಲ್‌ ಹೈಸ್ಕೂಲ್‌ಗೆ ಹೋಗಬೇಕಿದೆ. ಶಾಲೆ ದೂರವಿದೆ ಎಂಬ ಕಾರಣದಿಂದ ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿ, ದುಡಿಮೆಗೆ ದೂಡುತ್ತಿದ್ದಾರೆ. ಶಿಕ್ಷಣದಿಂದ ವಂಚಿತರಾದ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ ಹಾಗೂ ಹೆಣ್ಣುಮಕ್ಕಳು ಬಾಲ್ಯವಿವಾಹಕ್ಕೆ ಸಿಲುಕುತ್ತಿದ್ದಾರೆ ಎಂದು ಸಮಸ್ಯೆ ತೋಡಿಕೊಂಡರು.

ನಗರಸಭೆ ಮಾಜಿ ಸದಸ್ಯ ಮಲ್ಲೇಶಪ್ಪ ಪಟ್ಟಣಶೆಟ್ಟಿ ಮಾತನಾಡಿ,ನಾಗೇಂದ್ರನಮಟ್ಟಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಾಗವಿದೆ, ಕಟ್ಟಡವಿದೆ. ಓದಲು ಮಕ್ಕಳು ಇದ್ದಾರೆ. ಆದರೆ ಪ್ರೌಢಶಾಲೆಗೆ ಮರು ಮಂಜೂರಾತಿ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಬಡಮಕ್ಕಳ ವ್ಯಾಸಂಗಕ್ಕೆ ಒಂದು ವಾರದಲ್ಲಿ ಅನುಕೂಲ ಕಲ್ಪಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಬಸಪ್ಪ ಮುದ್ದಿ, ನಗರಸಭೆ ಸದಸ್ಯ ವೆಂಕಟೇಶ ಬಿಜಾಪುರ, ಮಾಜಿ ಸದಸ್ಯ ಸತೀಶ ಹಾವೇರಿ, ಚನ್ನಬಸನಗೌಡ ರೊಡ್ಡನವರ, ಶಿವಾನಂದ ಬಡಿಗೇರ, ಮಾರುತಿ ಕದರಮಂಡಲಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT