ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಧರಣಿ

ದಿನಗೂಲಿ, ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಒತ್ತಾಯ: ಮೂಲಸೌಕರ್ಯ ಕಲ್ಪಿಸಲು ಆಗ್ರಹ
Last Updated 1 ಜುಲೈ 2022, 12:33 IST
ಅಕ್ಷರ ಗಾತ್ರ

ಹಾವೇರಿ:ನೇರ ಪಾವತಿ, ಗುತ್ತಿಗೆ ಪೌರಕಾರ್ಮಿಕರು, ದಿನಗೂಲಿ ಲೋಡರ್ಸ್, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಒಂದೇ ಬಾರಿಗೆ ಕಾಯಂಗೊಳಿಸಲು ಒತ್ತಾಯಿಸಿ, ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿದ ಪೌರಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡರು.

ಸಫಾಯಿ ಕರ್ಮಚಾರಿ/ ಪೌರಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿಯ ಆಶ್ರಯದಲ್ಲಿ ಪೌರಕಾರ್ಮಿಕರು ಬೆಳಿಗ್ಗೆ 10.30ಕ್ಕೆ ನಗರಸಭೆಯಿಂದ ಪ್ರತಿಭಟನೆ ಆರಂಭಿಸಿ, ಮೈಲಾರ ಮಹದೇವಪ್ಪ ವೃತ್ತದ ಮೂಲಕ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿದರು. ನಂತರ ನೇರವಾಗಿ ಜಿಲ್ಲಾಡಳಿತ ಕಚೇರಿಗೆ ಹೋಗಿ ಧರಣಿ ಕುಳಿತರು.

ಡಿಎಸ್‌ಎಸ್‌ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ, ‘ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕೆಲಸವನ್ನು ಹೊರಗುತ್ತಿಗೆಗೆ ನೀಡಲಾಗಿದೆ. ಕಾರ್ಮಿಕರನ್ನು ಅಪಾರವಾಗಿ ಶೋಷಿಸುವ ಗುತ್ತಿಗೆ ಪದ್ಧತಿಯು ಸರ್ಕಾರವೇ ನಡೆಸುತ್ತಿರುವ ಗುಲಾಮಿ ಪದ್ಧತಿಯಾಗಿದೆ. ಈ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಎಲ್ಲಾ ಕಾರ್ಮಿಕರನ್ನು ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳು ಪೊರಕೆ ಹಿಡಿದು ಕಸ ಗುಡಿಸುವವರನ್ನು ಮಾತ್ರ ಪೌರಕಾರ್ಮಿಕರೆಂದು ಪರಿಗಣಿಸಿ ಬೇರೆ ಕಾರ್ಮಿಕರನ್ನು ಪ್ರತ್ಯೇಕಗೊಳಿಸಿದ್ದಾರೆ. ಆದರೆ ಕಸವನ್ನು ತೆರವು ಮಾಡುವ ಕೆಲಸದಲ್ಲಿ ತೊಡಗಿರುವ ಎಲ್ಲರನ್ನೂ ಪೌರಕಾರ್ಮಿಕರು ಅಥವಾ ಸ್ವಚ್ಛತಾ ಕಾರ್ಮಿಕರು ಎಂದು ಭಾವಿಸಿದ್ದೇವೆ. ಪೌರಕಾರ್ಮಿಕರ ಮಧ್ಯೆ ತಾರತಮ್ಯ ಮಾಡದೇ ಎಲ್ಲರನ್ನೂ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ವಕೀಲರಾದ ನಾಗರಾಜ ಮಾಳಗಿ ಮಾತನಾಡಿ, ನೇರಪಾವತಿ ಪೌರಕಾರ್ಮಿಕರು, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಕಸದ ವಾಹನ ಚಾಲಕರು, ಸಹಾಯಕರು, ಹಾಗೂ ಪೌರಕಾರ್ಮಿಕರ ಮೇಲ್ವಿಚಾರಕರು ಎಂಬ ಅಸಂಬದ್ಧ ವಿಂಡಗಣೆಯನ್ನು ಕೈಬಿಡಬೇಕು. ಮಹಿಳಾ ಪೌರಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದರು.

ಡಿಎಸ್ಎಸ್‌ ಮುಖಂಡ ಹೊನ್ನಪ್ಪ ತಗಡಿನಮನಿ, ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪುರ, ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ, ರೈತ ಸಂಘದ ಮುಖಂಡರಾದ ಮಂಜಳಾ ಪೂಜಾರ ಹಾಗೂ ಸುಭಾಸ ಬೆಂಗಳೂರು ಮಾತನಾಡಿದರು.

ಪೌರಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಮರಡಿಮನಿ, ಲೋಡರ್ಸ್‌ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೊಸಮನಿ, ಮುಖಂಡರಾದ ರಾಜು ಮಾಳಗಿ, ಮಂಜುನಾಥ ದೇವಗಿರಿ, ಮಂಜುನಾಥ ದೊಡ್ಡಮನಿ, ಸಂತೋಷ ಎರಕಲ್, ಸಂತೋಷ ಕೆಂಚಲ್ಲನವರ, ಪರಮೇಶ ಓಬವ್ವನವರ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT