ಧಾರವಾಡ ಸಾಹಿತ್ಯದ ಸಮ್ಮೇಳನಕ್ಕೆ ಸಿದ್ಧಗೊಂಡಿದೆ ಕೈದಿಗಳ ‘ಕರಕುಶಲ ಉತ್ಪನ್ನಗಳು’

7

ಧಾರವಾಡ ಸಾಹಿತ್ಯದ ಸಮ್ಮೇಳನಕ್ಕೆ ಸಿದ್ಧಗೊಂಡಿದೆ ಕೈದಿಗಳ ‘ಕರಕುಶಲ ಉತ್ಪನ್ನಗಳು’

Published:
Updated:
Prajavani

ಹಾವೇರಿ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಹಾವೇರಿ ಜಿಲ್ಲಾ ಕಾರಾಗೃಹದ ಕೈದಿಗಳು ಕಸೂತಿ, ಕರಕುಶಲ ಹಾಗೂ ಕಿನ್ನಾಳ ಕಲೆಯ ಉತ್ಪನ್ನಗಳನ್ನು ಸಿದ್ಧಪಡಿಸಿದ್ದಾರೆ. 

ಇಲ್ಲಿನ ಕೈದಿಗಳಿಗೆ ಕಸೂತಿ, ಕರಕುಶಲ ಕಲೆಗಳು ಹಾಗೂ ಕಿನ್ನಾಳ ಕಲೆಯ ತರಬೇತಿಯನ್ನು ಕೆಲ ತಿಂಗಳ ಹಿಂದೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಣೆಬೆನ್ನೂರಿನ ಭರಮಗಿರಿ ಸಮಾಜ ಸಂಸ್ಥೆ ಸಹಭಾಗಿತ್ವದಲ್ಲಿ ತರಬೇತಿ ನೀಡಲಾಗಿತ್ತು. ಕೊಪ್ಪಳದ ಕಿನ್ನಾಳದ ರಮೇಶ ಚಿತ್ರಗಾರ– ಪದ್ಮಾ ಚಿತ್ರಗಾರ ದಂಪತಿ ಹಾಗೂ ರಾಣೆಬೆನ್ನೂರಿನ ಸರೋಜಿನಿ ಯರ್ರೇಶೀಮೆ, ಮಲ್ಲಮ್ಮ ಬ್ಯಾತನಾಳ ಹಾಗೂ ಹಾವೇರಿಯ ರಾಜೇಶ್ವರಿ ಸಾರಂಗಮಠ ತರಬೇತಿ ನೀಡಿದ್ದರು.

ಈ ಪೈಕಿ ಕಸೂತಿ ಹಾಗೂ ಕರಕುಶಲ ತರಬೇತಿ ಪಡೆದ ಸುಮಾರು 30 ಕೈದಿಗಳು ಸ್ವೆಟರ್‌, ಚೀಲ, ಶಾಲು, ಮಹಿಳೆಯರ ಅಲಂಕಾರದ ಬಳೆ, ಜುಮ್ಕಿ, ಓಲೆ ಮತ್ತಿತರ ಆಭರಣಗಳು, ಕಸೂತಿ ಮಾಡಿದ ಗೃಹ ಬಳಕೆ ವಸ್ತುಗಳನ್ನು ಸಿದ್ಧಪಡಿಸಿದ್ದಾರೆ. ಕಿನ್ನಾಳ ಕಲೆಯ ತರಬೇತಿ ಪಡೆದ ಕಲಾವಿದರು ಬೊಂಬೆಗಳು, ಕನ್ನಡಿ, ಫಲಕಗಳು ಇತ್ಯಾದಿಗಳನ್ನು ರಚಿಸಿದ್ದಾರೆ.

‘ಮೈಸೂರು ಮತ್ತಿತರೆಡೆಗಳಿಂದ ಕಚ್ಛಾ ವಸ್ತುಗಳನ್ನು ತರಿಸಿಕೊಡಲಾಗಿತ್ತು. ತಮ್ಮ ಆಸಕ್ತಿಗೆ ಅನುಗುಣವಾಗಿ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸಿದ್ದಾರೆ. ಅವುಗಳಿಗೆ ಅವರೇ ಬೆಲೆ ನಿಗದಿಪಡಿಸಿದ್ದಾರೆ. ಇವುಗಳನ್ನು ‘ಪರಿವರ್ತನಾ ಕರಕುಶಲ ಉತ್ಪನ್ನಗಳು’ ಹೆಸರಿನಲ್ಲಿ ಮಾರುಕಟ್ಟೆ ಮಾಡಲಾಗುವುದು. ಮಾರಾಟದಿಂದ ಬರುವ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುವುದು’ ಎಂದು ಜೈಲು ಅಧೀಕ್ಷಕ ತಿಮ್ಮಣ್ಣ ಬಿ. ಭಜಂತ್ರಿ ತಿಳಿಸಿದರು.

13 ಮಹಿಳೆ ಸೇರಿದಂತೆ 176 ಕೈದಿಗಳಿದ್ದು, ಪ್ರತಿಯೊಬ್ಬರಿಗೂ ಬ್ಯಾಂಕ್‌ ಖಾತೆಯನ್ನು ತೆರೆದುಕೊಡುವುದಾಗಿ ಲೀಡ್‌ (ವಿಜಯಾ) ಬ್ಯಾಂಕ್ ತಿಳಿಸಿದೆ. ಆ ಬಳಿಕ ಹಣವನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದರು.

ಜೈಲಿನ ಕಂಬಿಗಳ ಹಿಂದೆ ಕುಳಿತ್ತಿದ್ದಾಗ ಕೆಟ್ಟ ಆಲೋಚನೆಗಳು ಬರುತ್ತಿದ್ದವು. ಆದರೆ, ಕರಕುಶಲ ಕಲೆಯಲ್ಲಿ ತೊಡಗಿಸಿಕೊಂಡ ಬಳಿಕ ಯಾವುದೇ ಮಾನಸಿಕ ಒತ್ತಡಗಳು ಉಂಟಾಗುತ್ತಿಲ್ಲ ಎಂದು ಮಹಿಳಾ ಕೈದಿಯೊಬ್ಬರು ಪ್ರತಿಕ್ರಿಯಿಸಿದರು. 

*
ಜೈಲುವಾಸವು ಶಿಕ್ಷೆ ಆಗುವ ಬದಲು, ಪರಿವರ್ತನಾ ಕೇಂದ್ರ ಆಗಬೇಕು. ಅಲ್ಲದೇ, ಬಿಡುಗಡೆ ಬಳಿಕವೂ ಆರ್ಥಿಕವಾಗಿ ಅವರು ಸಶಕ್ತರಾಗಬೇಕು
–ತಿಮ್ಮಣ್ಣ ಬಿ. ಭಜಂತ್ರಿ, ಜೈಲು ಅಧೀಕ್ಷಕ, ಹಾವೇರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !