ಬುಧವಾರ, ಅಕ್ಟೋಬರ್ 21, 2020
26 °C
ಮುಷ್ಕರದಲ್ಲಿ ಪಾಲ್ಗೊಂಡಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ವಜಾಕ್ಕೆ ಡಿಎಚ್‌ಒ ಆದೇಶ

ಹಾವೇರಿ: ತೂಗುಯ್ಯಾಲೆಯಲ್ಲಿ 518 ನೌಕರರ ಭವಿಷ್ಯ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೋವಿಡ್‌ ತುರ್ತು ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗದೆ, ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡಿರುವ ಜಿಲ್ಲೆಯ ಅರೆ ವೈದ್ಯಕೀಯ ಮತ್ತು ವೈದ್ಯೇತರ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ತಕ್ಷಣ ವಜಾಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಆದೇಶ ಹೊರಡಿಸಿದ್ದಾರೆ. 

ಕೋವಿಡ್‌–19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಆರೋಗ್ಯ ಇಲಾಖೆ ತೀವ್ರಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ನೀಡುವಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ತೊಂದರೆಯುಂಟು ಮಾಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರು ಅ.5ರಂದು ತುರ್ತು ಸಭೆ ನಡೆಸಿ, ವಜಾಗೊಳಿಸುವ ಸೂಚನೆ ನೀಡಿದ್ದಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. 

ಜಿಲ್ಲೆಯ ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಆರೋಗ್ಯ ಸಂಸ್ಥೆಗಳ ಆಡಳಿತ ವೈದ್ಯಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು. ತಪ್ಪಿದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ಡಿಎಚ್‌ಒ ನೀಡಿದ್ದಾರೆ. 

ಬೇಡಿಕೆ ಈಡೇರಿಕೆಗೆ ಮುಷ್ಕರ:

‘ಹಲವಾರು ವರ್ಷಗಳಿಂದ ಬೇಡಿಕೆ ಈಡೇರದ ಕಾರಣ ಅನಿವಾರ್ಯವಾಗಿ ಸೆ.22ರಿಂದ ರಾಜ್ಯದಾದ್ಯಂತ ಮುಷ್ಕರದ ಹಾದಿ ತುಳಿಯುವಂತೆ ಆರೋಗ್ಯ ಇಲಾಖೆ ಮಾಡಿದೆ. ಸೆ.22 ಮತ್ತು 23ರಂದು ಕೆಲಸಕ್ಕೆ ಹಾಜರಾದರೂ ಯಾವುದೇ ವರದಿ ಕೊಡದಂತೆ ಸಾಂಕೇತಿಕ ಧರಣಿ ನಡೆಸಿದ್ದೆವು. ಸೆ.24ರಿಂದ ‘ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ’ದ ನೇತೃತ್ವದಲ್ಲಿ ಕೆಲಸ ಬಹಿಷ್ಕರಿಸಿ ಮುಷ್ಕರ ಮಾಡುತ್ತಿದ್ದೇವೆ’ ಎನ್ನುತ್ತಾರೆ ಜಿಲ್ಲಾ ಸಂಘದ ಪದಾಧಿಕಾರಿಗಳು. 

ವಜಾಕ್ಕೆ ವಿರೋಧ:

ಯಾವುದೇ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಲು 3 ನೋಟಿಸ್‌ ಕೊಡಬೇಕು. ಜಿಲ್ಲೆಯಲ್ಲಿ ಇದುವರೆಗೆ ಕೇವಲ 9 ಮಂದಿಗೆ ಮಾತ್ರ ಒಂದು ಬಾರಿ ನೋಟಿಸ್‌ ಕೊಟ್ಟಿದ್ದರು. ಈಗ ನಮ್ಮ ಜತೆ ಚರ್ಚೆಯನ್ನೇ ಮಾಡದೆ, 518 ನೌಕರರನ್ನು ಕೆಲಸದಿಂದ ಏಕಾಏಕಿ ವಜಾ ಮಾಡಿದ್ದಾರೆ. ಕೋವಿಡ್‌–19 ಅವಧಿಯಲ್ಲಿ ರಜೆಯನ್ನು ತೆಗೆದುಕೊಳ್ಳದೆ ಸತತ 6 ತಿಂಗಳು ಕೆಲಸ ಮಾಡಿದ್ದೇವೆ. ಸಾರಿಗೆ ಸೌಲಭ್ಯವಿಲ್ಲದಿದ್ದರೂ ನಿತ್ಯ ಆಸ್ಪತ್ರೆಗೆ ಬಂದು ಕರ್ತವ್ಯ ಮಾಡಿದ್ದೇವೆ. ಕಾಯಂ ನೌಕರರಿಗೆ ವಿಶೇಷ ಭತ್ಯೆ ಕೊಟ್ಟರು. ಆದರೆ, ನಮಗೆ ಭತ್ಯೆಯೂ ಇಲ್ಲ, ಗೌರವವೂ ಇಲ್ಲ’ ಎಂದು ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಬೇಸರ ವ್ಯಕ್ತಪಡಿಸಿದರು.

ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಮುಷ್ಕರ ಆರಂಭಿಸಿದ ಮೇಲೆ ಜಿಲ್ಲಾ ಮತ್ತು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸಮರ್ಪಕವಾಗಿ ಮತ್ತು ಸಕಾಲದಲ್ಲಿ ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಹಣ ತೆರಬೇಕಾಗಿದೆ. ಕೋವಿಡ್‌ ಸೋಂಕಿನ ಲಕ್ಷಣಗಳಿದ್ದರೆ ಖಾಸಗಿ ಆಸ್ಪತ್ರೆಯವರು ಚಿಕಿತ್ಸೆ ನೋಡಲು ಹಿಂಜರಿಯುತ್ತಾರೆ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿವೆ.

ಅ.7ರಿಂದ ಜಿಲ್ಲೆಯ ಎಲ್ಲ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಕೆಲಸಕ್ಕೆ ಹಾಜರಾಗುವ ಸಾಧ್ಯತೆ ಇದೆ. ಸಮಸ್ಯೆ ನಿವಾರಣೆಯಾಗುವ ಭರವಸೆ ಇದೆ.
– ಡಾ.ರಾಜೇಂದ್ರ ದೊಡ್ಡಮನಿ, ಜಿಲ್ಲಾ ಆರೋಗ್ಯಾಧಿಕಾರಿ, ಹಾವೇರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.