ಗುರುವಾರ , ಡಿಸೆಂಬರ್ 12, 2019
26 °C
ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ: ಸಂಸದ ಶಿವಕುಮಾರ್ ಉದಾಸಿ

ಡಿ.18ರೊಳಗೆ ಆದೇಶ ಪತ್ರ ಸಿದ್ಧಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಾವೇರಿ: ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್‌ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು, ಜಿಲ್ಲೆಯ ಕನಿಷ್ಠ 50 ಸಾವಿರ ಫಲಾನುಭವಿಗಳಿಗೆ ಡಿ.18ರೊಳಗೆ ಆದೇಶ ಪತ್ರ ನೀಡಬೇಕು ಎಂದು ಸಂಸದ ಶಿವಕುಮಾರ ಉದಾಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಯೋಜನೆಯಡಿ ಫಲಾನುಭವಿಗಳ ನೋಂದಣಿಯು ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯ್ತಿಗಳಲ್ಲಿ ಆಗಬೇಕು. ಪ್ರಸ್ತುತ ಎಷ್ಟು ಫಲಾನುಭವಿಗಳ ಪಟ್ಟಿ? ಯಾವ ಹಂತದಲ್ಲಿದೆ? ಎಂದು ಅಧಿಕಾರಿಗಳನ್ನು ಸಂಸದರು ಪ್ರಶ್ನಿಸಿದರು. ಆದರೆ, ಸ್ಪಷ್ಟ ಉತ್ತರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಕೆಲಹೊತ್ತು ಗಲಿಬಿಲಿ ಉಂಟಾಯಿತು. ಅಧಿಕಾರಿಗಳ ಅಸ್ಪಷ್ಟ ಉತ್ತರದಿಂದ ರೋಸಿ ಹೋದ ಸಂಸದರು, ‘ಯಾವಾಗ ಪೂರ್ಣಗೊಳಿಸುತ್ತೀರಾ?’ ಎಂದರು. ಡಿಸೆಂಬರ್ 18ರೊಳಗೆ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಮಾಸಾಶನವು ವಿಳಂಬವಾಗುತ್ತಿರುವ ಬಗ್ಗೆ ದಿಶಾ ಸದಸ್ಯ ಉಮೇಶ ಮಾಗಳ ದೂರಿದರು. ಈ ಬಗ್ಗೆ ಮಾಹಿತಿ ನೀಡಬೇಕಾದ ಅಂಚೆ ಅಧಿಕಾರಿಗಳು ಸಭೆಗೆ ಗೈರಾಗಿದ್ದರು. ಅವರಿಗೆ ನೋಟಿಸ್ ನೀಡುವಂತೆ ಸಂಸದರು ನಿರ್ದೇಶನ ನೀಡಿದರು.

‘ಪೋಡಿ ಮುಕ್ತ ಗ್ರಾಮ’ ಮಾದರಿಯಲ್ಲಿ ‘ಇ-ಸ್ವತ್ತು ಮುಕ್ತ ಗ್ರಾಮ’ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಒತ್ತಾಯಿಸಿದರು. 

ಈ ಕುರಿತ ಸಾಧಕ–ಬಾಧಕಗಳ ಕುರಿತು ಮಾಹಿತಿ ಪಡೆದ ಸಂಸದ ಉದಾಸಿ, ‘ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಸಿಬ್ಬಂದಿ ನಿಯೋಜಿಸುವ ಮೂಲಕ ಮಾದರಿ ಕಾರ್ಯಕ್ರಮ ರೂಪಿಸಬೇಕು. ರೈತರಿಗೆ ನೆರವಾಗಬೇಕು’ ಎಂದರು.

ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಿಸಲು ಒಂದು ಅಥವಾ ಎರಡು ಗುಂಟೆ ಕೃಷಿ ಭೂಮಿಗೆ ಪಹಣಿ ಮಾಡಿಕೊಡುವುದಿಲ್ಲ. ಹೀಗಾಗಿ, ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಿದ್ಧರಿದ್ದವರೂ, ಸೂರು ರಹಿತರಾಗಿದ್ದರೆ ಎಂದು ದಿಶಾ ಸದಸ್ಯರೊಬ್ಬರು ದೂರಿದರು.

‘ಕೇಂದ್ರ ಸರ್ಕಾರವು 2020ರ ಹೊತ್ತಿಗೆ ಸಂಪೂರ್ಣ ಗುಡಿಸಲು ಮುಕ್ತ ಮಾಡುವ ಗುರಿ ಹೊಂದಿದೆ. ಆದ್ದರಿಂದ ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು. ವಸತಿ ಯೋಜನೆಯ ಫಲಾನುಭವಿಗಳಿಗೆ ಅವಕಾಶ ಕಲ್ಪಿಸಬೇಕು’ ಎಂದು ಸಂಸದರು ಸೂಚನೆ ನೀಡಿದರು. ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುವುದಾಗಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಲೀಲಾವತಿ ತಿಳಿಸಿದರು.

ಸಂಸದರು ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಕುರಿತಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನೀಡಿದರು.

ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಉಪಕಾರ್ಯದರ್ಶಿ ಗೋವಿಂದಸ್ವಾಮಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು