ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ನಿವೇಶನ ಒತ್ತುವರಿ ತಡೆಗೆ ಕ್ರಮ

ರೈತರಿಂದ ವ್ಯಾಪಕ ದೂರು: ಸಮಸ್ಯೆ ಪರಿಹರಿಸಲು ಸಂಸದ ಶಿವಕುಮಾರ ಉದಾಸಿ ಸೂಚನೆ
Last Updated 25 ಜನವರಿ 2021, 16:25 IST
ಅಕ್ಷರ ಗಾತ್ರ

ಹಾವೇರಿ: ಹೊಸ ನಿಯಮದ ಪ್ರಕಾರ ಬರುವ ದಿನಗಳಲ್ಲಿ ಬೆಳೆಹಾನಿ ಸಮೀಕ್ಷೆ ಕೈಗೊಳ್ಳಲು ಎಲ್ಲ ತಾಲ್ಲೂಕುಮಟ್ಟದ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡುವಂತೆ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಅವರು ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಮುಂದುವರಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪ್ರಾಕೃತಿಕ ವಿಕೋಪಗಳಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯಾದ ಕ್ಷೇತ್ರದಲ್ಲೇ ಬೆಳೆಹಾನಿ ಸಮೀಕ್ಷೆಗಳನ್ನು ಕೈಗೊಂಡು ಈ ಆಧಾರದ ಮೇಲೆ ವರದಿ ಸಲ್ಲಿಸಬೇಕು. ಈ ಮಾನದಂಡಗಳನ್ನು ಅನುಸರಿಸುವಂತೆ ಸಲಹೆ ನೀಡಿದರು.

ಬೆಳೆಹಾನಿ, ಸಮೀಕ್ಷೆ, ಬೆಳೆ ವಿಮೆ ಹಾಗೂ ಕೃಷಿ ಸಿಂಚಾಯಿ ಯೋಜನೆಗಳ ಕುರಿತಂತೆ ರೈತರಿಂದ ವ್ಯಾಪಕ ದೂರುಗಳಿವೆ. ಕೆಲವೆಡೆ ಕೃಷಿ ಯೋಜನೆಗಳಿಗೆ ಅನುದಾನವಿಲ್ಲ ಎಂದು ಕೆಳಹಂತದ ಅಧಿಕಾರಿಗಳು ರೈತರಿಗೆ ತಿಳಿಸುತ್ತಾರೆ ಎಂಬ ದೂರುಗಳಿವೆ. ಈ ಕುರಿತಂತೆ ಖುದ್ದಾಗಿ ಪರಿಶೀಲನೆ ನಡೆಸಿ ಲೋಪಗಳನ್ನು ಸರಿಪಡಿಸುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಸಂಸದರು ಸೂಚನೆ ನೀಡಿದರು.

ಪರಿಹಾರ ವಿಳಂಬ:ಪ್ರವಾಹ ಸಂದರ್ಭದಲ್ಲಿ ತ್ವರಿತವಾಗಿ ಬೆಳೆಹಾನಿ ಮಾಹಿತಿಯನ್ನು ಸರ್ವೆ ಮಾಡಿ ತಂತ್ರಾಂಶದಲ್ಲಿ ತ್ವರಿತವಾಗಿ ಅಪ್‍ಲೋಡ್‌ ಮಾಡದ ಕಾರಣ ಪರಿಹಾರ ಪಡೆಯುತ್ತಿರುವುದು ವಿಳಂಬವಾಗಿದೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಎಲ್ಲಿ ವಿಳಂಬವಾಗಿದೆ ಅದನ್ನು ಸರಿಪಡಿಸಿ ತ್ವರಿತವಾಗಿ ಪರಿಹಾರ ಪಡೆಯುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಪಕ್ಕದ ಗದಗ ಜಿಲ್ಲೆಯಲ್ಲಿ ತ್ವರಿತವಾಗಿ ಬೆಳೆಹಾನಿ ಪರಿಹಾರವನ್ನು ಗರಿಷ್ಠಮಟ್ಟದಲ್ಲಿ ಪಡೆಯಲಾಗಿದೆ. ಈ ಜಿಲ್ಲೆಯಲ್ಲಿ ತೊಂದರೆ ಏನು ಎಂದು ಪ್ರಶ್ನಿಸಿದರು.

ದಾಖಲೀಕರಣ ಮಾಡಿ:ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ಆಸ್ತಿ ವಿವರಗಳನ್ನು ದಾಖಲೀಕರಣ ಮಾಡಬೇಕು. ಸರ್ಕಾರಿ ಶಾಲಾ-ಕಾಲೇಜುಗಳ ಆಸ್ತಿಗಳನ್ನು ಒತ್ತುವರಿ ಮಾಡದಂತೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಆವರಣ ಗೋಡೆ ನಿರ್ಮಾಣ ಮಾಡಬೇಕು. ಕುಡಿಯುವ ನೀರು, ಗುಣಮಟ್ಟದ ವಿದ್ಯುತ್ ಸಂಪರ್ಕಕ್ಕೆ ಕ್ರಮವಹಿಸಬೇಕು. ಶಾಲಾ ಸುಧರಣಾ ಸಮಿತಿಗೆ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಅನುದಾನವನ್ನು ಪರಿಷ್ಕರಣೆ ಮಾಡಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಕಲುಷಿತ ನೀರು ತಡೆಗಟ್ಟಿ:ರಾಣೆಬೆನ್ನೂರು ದೊಡ್ಡಕೆರೆಗೆ ಕಲುಷಿತ ನೀರು ಸೇರದಂತೆ ತಾಂತ್ರಿಕ ತಜ್ಞರನ್ನು ಕರೆಸಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು. 27X7 ಕುಡಿಯುವ ನೀರಿನ ಯೋಜನೆಯನ್ನು ಫೆಬ್ರುವರಿ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 100 ಕೆ.ವಿ.ಗಿಂತ ಕಡಿಮೆ ಇರುವ ವಿದ್ಯುತ್ ಸರಬರಾಜು ಸ್ಟೇಷನ್‍ಗಳನ್ನು 110 ಕೆ.ವಿ.ಗೆ ಉನ್ನತೀಕರಿಸಬೇಕು. ಈ ಕುರಿತಂತೆ ಸರ್ವೆ ಕೈಗೊಂಡು ಎಲ್ಲ ಸ್ಟೇಷನ್‍ಗಳನ್ನು ಉನ್ನತೀಕರಿಸಲು ಸೂಚನೆ ನೀಡಿದರು.

ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಏಕನಾಥ ಬಾನುವಳ್ಳಿ, ಶಾಸಕ ಅರುಣಕುಮಾರ ಗುತ್ತೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್‌, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT