ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಸಮಗ್ರ ಕೃಷಿ ಪದ್ಧತಿಯಲ್ಲಿ ಯಶಸ್ಸು ಸಾಧಿಸಿರುವ ಹಿರೇಅಣಜಿ ಗ್ರಾಮದ ರೈತ

ರೈತ ಹೇಮಣ್ಣ ಬಾರಂಗಿ ಅವರಿಗೆ ‘ಕೃಷಿ ಪಂಡಿತ’ ಪ್ರಶಸ್ತಿ
Last Updated 5 ಮೇ 2022, 19:30 IST
ಅಕ್ಷರ ಗಾತ್ರ

ಬ್ಯಾಡಗಿ: ಸಮಗ್ರ ಕೃಷಿ ಪದ್ಧತಿಯಲ್ಲಿ ಯಶಸ್ಸು ಸಾಧಿಸಿರುವ ತಾಲ್ಲೂಕಿನ ಹಿರೇಅಣಜಿ ಗ್ರಾಮದ ರೈತ ಹೇಮಣ್ಣ ಬಾರಂಗಿ ಅವರಿಗೆ ‘ಕೃಷಿ ಪಂಡಿತ’ ಪ್ರಶಸ್ತಿ ಲಭಿಸಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ.

ಶಾಲೆಯ ಮೆಟ್ಟಿಲು ಹತ್ತದ ಹೇಮಣ್ಣ 30 ವರ್ಷಗಳಿಂದ ಕೃಷಿಯಲ್ಲಿ ನಿರಂತರ ಪರಿಶ್ರಮದ ಫಲವಾಗಿ ಸಾಧನೆಯ ಶಿಖರವೇರಿದ್ದಾರೆ. ಉಳುಮೆಗೆ ಜಮೀನು ಇಲ್ಲ ಎಂದು ಕೊರಗದೆ ತಮಗಿರುವ 10 ಗುಂಟೆ ಜಾಗದಲ್ಲೇ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.

ನೀರಿನ ತೊಟ್ಟಿಗಳನ್ನು ನಿರ್ಮಿಸಿಕೊಂಡು ಅದರಲ್ಲಿ ಮಳೆ ನೀರು ಸಂಗ್ರಹಕ್ಕೆ ಮುಂದಾಗಿದ್ದಾರೆ. ಎಂತಹ ಬರಗಾಲದಲ್ಲಿಯೂ ನೀರಿನ ಸಂಗ್ರಹಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿದ್ದು, ಬೆಳೆಗಳಿಗೆ ನೀರುಣಿಸಲು ಹನಿ ಹಾಗೂ ತುಂತುರು ನೀರಾವರಿ ಅಳವಡಿಸಿಕೊಂಡು, ಕಡಿಮೆ ನೀರು ಬಳಸಿ ಹೆಚ್ಚು ಆದಾಯವನ್ನು ತರುವ ಬೆಳೆಯನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.

₹3 ಲಕ್ಷ ಆದಾಯ:ವರ್ಷಕ್ಕೆ ₹3 ಲಕ್ಷಕ್ಕಿಂತ ಹೆಚ್ಚು ಆದಾಯ ತರಬಹುದಾದ ಹೈನುಗಾರಿಕೆ, ಮೀನು ಸಾಕಾಣಿಕೆ ಹಾಗೂ ದಾಳಿಂಬೆ, ನಿಂಬೆಯಂತಹ ಸಸಿಗಳ ತಯಾರಿಕೆಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಕೃಷಿ ವಿಶ್ವವಿದ್ಯಾನಿಲಯ ‘ಕೃಷಿ ಪಂಡಿತ’ ಪ್ರಶಸ್ತಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಹೈನು ಉತ್ಪಾದನೆ ಹೆಚ್ಚಿಸಿಕೊಳ್ಳಲು ಹತ್ತಿಕಾಳು ಹಾಗೂ ಶೇಂಗಾ ಹಿಂಡಿಯ ಬದಲಿಗೆ ಬದುವಿನಲ್ಲಿ ಬೆಳೆದ ಅಜೋಲಾ ಬೆಳೆಯನ್ನು ಜಾನುವಾರುಗಳಿಗೆ ಮೇಯಲು ಹಾಕಲಾಗುತ್ತದೆ. ಈ ಮೂಲಕ ಪ್ರತಿ ದಿನ 14 ಲೀಟರ್‌ ಹಾಲನ್ನು ಮಾರಾಟ ಮಾಡಲಾಗುತ್ತದೆ. ಬದುವಿನಲ್ಲಿ ನುಗ್ಗೆ, ತೊಂಡೆ ಬೆಳೆದಿದ್ದು ಅವುಗಳ ಮಾರಾಟದಿಂದಲೂ ನಿತ್ಯ ಆದಾಯ ಬರುತ್ತದೆ.

ಹಣ್ಣಿನ ಗಿಡಗಳು:ತೆಂಗು, ಹಲಸು, ದಾಳಿಂಬೆ ಹಣ್ಣಿನ ಗಿಡಗಳನ್ನು ಸಹ ಬೆಳೆಯಲಾಗಿದೆ. ಉದುರಿದ ಎಲೆಗಳನ್ನು ತೊಟ್ಟಿಯಲ್ಲಿ ಸಂಗ್ರಹಿಸಿ ಸಾವಯವ ಗೊಬ್ಬರವನ್ನು ಸಹ ತಯಾರಿಸಲಾಗುತ್ತದೆ. ರಾಸಾಯನಿಕ ಗೊಬ್ಬರ ಬಳಕೆಯನ್ನು ಮಿತಗೊಳಿಸಿ ಎರೆಹುಳು ಗೊಬ್ಬರ ಬಳಕೆಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಇದರಿಂದ ಮಣ್ಣಿನ ಸಂರಕ್ಷಣೆ ಜೊತೆಗೆ ಹೆಚ್ಚಿನ ಇಳುವರಿ ಬರುವ ಬೆಳೆಯನ್ನು ಬೆಳೆಯಲು ಅನುಕೂಲವಾಗಲಿದೆ ಎನ್ನುತ್ತಾರೆ ಹೇಮಣ್ಣ ಬಾರಂಗಿ.

ಎರೆಹುಳು ಗೊಬ್ಬರ ತಯಾರಿಕೆ:40X50 ಅಡಿ ವಿಸ್ತೀರ್ಣದ ತೊಟ್ಟಿಯಲ್ಲಿ ಆಫ್ರಿಕನ್‌ ಮಾದರಿಯ ಎರೆಹುಳುಗಳನ್ನು ಬೆಳೆಸಲಾಗುತ್ತದೆ. ಒಂದು ಕೆ.ಜಿ.ಗೆ ಅಂದಾಜು 800 ಎರೆಹುಳುಗಳು ಬರುತ್ತಿದ್ದು, ಎರೆಹುಳು ಬೇಕಾದ ರೈತರಿಗೆ ಪ್ರಾತ್ಯಕ್ಷಿಕೆಯ ಮೂಲಕ ಗೊಬ್ಬರ ತಯಾರಿಸುವ ವಿಧಾನವನ್ನು ತಿಳಿಸಲಾಗುತ್ತದೆ.

ಹೀಗಾಗಿ ಧಾರವಾಡ, ಬೆಳಗಾವಿ, ಶಿವಮೊಗ್ಗ ಮುಂತಾದ ಕಡೆ ತೆರಳಿ ಎರೆಹುಳು ಗೊಬ್ಬರದ ಬಳಕೆ ಹೆಚ್ಚಿಸುವಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಗೊಬ್ಬರ ಬೇಕಾದವರಿಗೆ 50 ಕೆ.ಜಿ. ತೂಕದ ಚೀಲಗಳಲ್ಲಿ ಸಂಗ್ರಹಿಸಿ ಮಾರಾಟ ಮಾಡಲಾಗುತ್ತದೆ.

ಎರೆಹುಳು ಗೊಬ್ಬರದ ಬಗ್ಗೆ ಮಾಹಿತಿ ನೀಡುತ್ತಿದ್ದು,ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ನೆರವಿನ ಮೂಲಕ ರೈತರ ಹೊಲಗಳಿಗೆ ತೆರಳಿ ಪ್ರಾತ್ಯಕ್ಷಿಕೆಯ ಮೂಲಕ ವಿವರಣೆಯನ್ನು ನೀಡಲಾಗುತ್ತದೆ ಎಂದು ಹೇಮಣ್ಣ ತಿಳಿಸಿದರು.

(ಹೇಮಣ್ಣ ಅವರ ಸಂಪರ್ಕಕ್ಕೆ ಮೊ:96638 61958)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT