ಜೈಲು ಉನ್ನತೀಕರಣ: ವರದಿ ಸಲ್ಲಿಕೆಗೆ ಸೂಚನೆ

7

ಜೈಲು ಉನ್ನತೀಕರಣ: ವರದಿ ಸಲ್ಲಿಕೆಗೆ ಸೂಚನೆ

Published:
Updated:

ಹಾವೇರಿ: ಜಿಲ್ಲಾ ಕಾರಾಗೃಹವನ್ನು ಮೊದಲ ದರ್ಜೆಗೆ ಉನ್ನತೀಕರಿಸುವ ಹಿನ್ನೆಲೆಯಲ್ಲಿ ಮೂಲಸೌಕರ್ಯ, ಮಾನದಂಡ, ಅಗತ್ಯಗಳನ್ನು ಪರಿಶೀಲಿಸಿಕೊಂಡು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ  ಕಾರಾಗೃಹದ ಅಧೀಕ್ಷಕರಿಗೆ ಸೂಚಿಸಿದರು.

ಇಲ್ಲಿನ ಕೆರಿಮತ್ತಿಹಳ್ಳಿಯ ಜಿಲ್ಲಾ ಕಾರಾಗೃಹದಲ್ಲಿ ಈಚೆಗೆ ನಡೆದ ಸಂದರ್ಶಕ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಂದರಿಂದ ಆರು ತಿಂಗಳವರೆಗೆ ಶಿಕ್ಷೆಗೊಳಗಾದವರನ್ನು ಮಾತ್ರ ಇರಿಸಲು ಇಲ್ಲಿ ಅವಕಾಶವಿದೆ. ಒಂದರಿಂದ ಹತ್ತು ವರ್ಷದೊಳಗೆ ಶಿಕ್ಷೆಗೆ ಗುರಿಯಾದವರನ್ನು ಇರಿಸಬೇಕಾದರೆ, ಮೊದಲ ದರ್ಜೆಗೆ ಉನ್ನತೀಕರಿಸಬೇಕು. ಇದರಿಂದ ಕೈದಿಗಳ ಬಂಧುಗಳಿಗೂ  ಅನುಕೂಲವಾಗಲಿದೆ. ಅದಕ್ಕಾಗಿ ಮೊದಲ ದರ್ಜೆಗೆ ಉನ್ನತೀಕರಿಸಿ ಎಂದು ಕಾರಾಗೃಹದ ಅಧೀಕ್ಷಕ ಟಿ.ಬಿ.ಭಜಂತ್ರಿ ಬೇಡಿಕೆ ಸಲ್ಲಿಸಿದರು.

ಇದಕ್ಕೆ ಬೇಕಾದ ಅಗತ್ಯ ಸೌಲಭ್ಯ ಹಾಗೂ ಮಾರ್ಗಸೂಚಿಗಳನ್ನು ಪರಿಶೀಲಿಸಿ, ವಿವಿಧ ಅಧಿಕಾರಿಗಳ ತಂಡ ರಚಿಸಿ ವರದಿ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ವೃತ್ತಿ ಕೌಶಲ ತರಬೇತಿ:
ಗಣಕಯಂತ್ರ ಆಪರೇಟರ್, ಟ್ಯಾಲಿ ತರಬೇತಿ, ಕಟ್ಟಡ ನಿರ್ಮಾಣ, ಚಿತ್ರಕಲೆ, ಪ್ಲಂಬರ್, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿಯ ವೃತ್ತಿ ಕೌಶಲ ತರಬೇತಿಗಳನ್ನು ಕೈದಿಗಳಿಗೆ ನೀಡುವಂತೆ ಸಲಹೆ ನೀಡಿದರು.

ಮೂಲಭೂತ ಸೌಕರ್ಯ:
ಕಾರಾಗೃಹದಲ್ಲಿ ಹೆಚ್ಚುವರಿಯಾಗಿ ನಾಲ್ಕು ಬ್ಯಾರಕ್‌ಗಳ ನಿರ್ಮಾಣ, ಯೋಗ, ವ್ಯಾಸಂಗ, ಸಾಂಸ್ಕೃತಿಕ ಚಟುವಟಿಕೆ ಅನುಕೂಲವಾಗುವಂತೆ ಸಭಾಂಗಣ ನಿರ್ಮಾಣ, ಜೈಲು ಸಿಬ್ಬಂದಿಗೆ ವಸತಿ ಗೃಹಗಳ ನಿರ್ಮಾಣ, ಆವರಣಗೋಡೆ ನಿರ್ಮಾಣ ಹಾಗೂ ಕೈದಿಗಳ ಭೇಟಿಗೆ ಬಂದವರ ವಿಶ್ರಾಂತಿಗಾಗಿ ಶೆಡ್ ನಿರ್ಮಾಣ ಹಾಗೂ ಶೌಚಾಲಯ ನಿರ್ಮಾಣ ಮಾಡುವ ಕುರಿತು ಅಂದಾಜು ಪತ್ರಿಕೆ ಸಿದ್ಧಪಡಿಸಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ಸೂಚಿಸಿದರು.

ಹೈನುಗಾರಿಕೆ:
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ಹತ್ತು ಹಸುಗಳ ನಿರ್ವಹಣೆಯ ಶೆಡ್, ಎರೆಹುಳು ಗೊಬ್ಬರ ತಯಾರಿಕೆ ಘಟಕ ನಿರ್ಮಾಣ, ಉದ್ಯಾನ, ನಾಲ್ಕು ಎಕರೆ ಜಮೀನಿನಲ್ಲಿ  ತೋಟಗಾರಿಕೆ ಕೈಗೊಳ್ಳಿ ಎಂದು ಜಿಲ್ಲಾ ಪಂಚಾಯ್ತಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೈದ್ಯಕೀಯ ಸೌಕರ್ಯ:
ಕೈದಿಗಳಿಗೆ ವೈದ್ಯಕೀಯ ಉಪಚಾರಕ್ಕಾಗಿ ವೈದ್ಯರು ಮತ್ತು ಶುಶ್ರೂಷಕಿಯರ ನಿಯೋಜನೆ ಮಾಡಬೇಕು ಎಂದ ತಾಲ್ಲೂಕು ವೈದ್ಯಾಧಿಕಾರಿಗೆ ಸೂಚನೆ ನೀಡಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೈ.ಎಲ್.ಲಾಡಖಾನ್, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಗೋವಿಂದಸ್ವಾಮಿ, ಸದಸ್ಯರಾದ ಸತೀಶ ಕುಲಕರ್ಣಿ, ಶಿಕ್ಷಕಿ ರೇಣುಕಾ ಗುಡಿಮನಿ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !