ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಝಳಕ್ಕೆ ಹೈರಾಣಾದ ಅಭ್ಯರ್ಥಿಗಳು

ಪ್ರಚಾರಕ್ಕೆ ತಡೆ ಒಡ್ಡುತ್ತಿರುವ ಸೂರ್ಯ
Last Updated 24 ಏಪ್ರಿಲ್ 2018, 10:24 IST
ಅಕ್ಷರ ಗಾತ್ರ

ಮುಂಡಗೋಡ: ಚುನಾವಣೆಯ ಕಾವು ಅಷ್ಟಾಗಿ ಕಾಣದಿದ್ದರೂ ಬಂಡಾಯದ ಬಿಸಿ ಹಾಗೂ ಬಿಸಿಲಿನ ಝಳ ಅಭ್ಯರ್ಥಿಗಳಿಗೆ ತಲೆನೋವಾಗಿದೆ.

ಕಡಿಮೆ ಅವಧಿಯಲ್ಲಿ ಎಲ್ಲ ಮತದಾರರನ್ನು ಮುಟ್ಟಬೇಕೆಂಬ ಅಭ್ಯರ್ಥಿಗಳ ಆಸೆ ಬಿಸಿಗಾಳಿಯಲ್ಲಿ ಕಮರುತ್ತಿದೆ. ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಸರಾಸರಿ 35–38 ಡಿಗ್ರಿ ಸೆಲ್ಸಿಯಸ್‌ ನಷ್ಟು ಬಿಸಿಲಿನ ಪ್ರಮಾಣ ದಾಖಲಾಗುತ್ತಿದೆ.ಸೂರ್ಯೋದಯವಾಗಿ ಒಂದೆರಡು ಗಂಟೆಗಳಲ್ಲಿ ಹಣೆಯ ಮೇಲೆ ಬೆವರ ಹನಿಗಳು ಮೂಡುತ್ತಿವೆ. ನಾಮಪತ್ರ ಸಲ್ಲಿಸಿ ಪ್ರಚಾರಕ್ಕೆ ಅಣಿಯಾಗುವ ಅಭ್ಯರ್ಥಿಗಳಿಗೆ ಬಿಸಿಲ ಧಗೆ ಸಹಿಸಲು ಅಸಾಧ್ಯವಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕೆನ್ನುವ ಅಭ್ಯರ್ಥಿಗಳಿಗೆ, ಉರಿಬಿಸಿಲಿನಲ್ಲಿ ಮತದಾರರು ಸಿಗುತ್ತಾರೊ ಇಲ್ಲವೋ ಎನ್ನುವ ಭಯ ಕೂಡ ಆವರಿಸಿದೆ. ತಂಪನೆಯ ಹೊತ್ತಿನಲ್ಲಿ ಪ್ರಚಾರಕ್ಕೆ ಹೋಗಬೇಕೆಂದರೂ ಚುನಾವಣೆಗೆ ಬೆರಳೆಣಿಕೆ ದಿನಗಳು ಮಾತ್ರ ಉಳಿದಿರುವುದು ಆತಂಕವನ್ನುಂಟು ಮಾಡುತ್ತಿದೆ. ಆದರೂ ಕೆಲವು ಅಭ್ಯರ್ಥಿಗಳು ಕಾರ್ಯಕರ್ತರು, ಮತದಾರರನ್ನು ಭೇಟಿಯಾಗುತ್ತ ಮತಯಾಚನೆ ಮಾಡುತ್ತಿದ್ದಾರೆ.

ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಪೂರ್ಣ ಪ್ರಮಾಣದ ಪ್ರಚಾರ ಭರಾಟೆ ಆರಂಭವಾಗಿಲ್ಲ. ಮತದಾರರು ಸಹ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳದೆ, ಅಭ್ಯರ್ಥಿಗಳು ಪ್ರಚಾರಕ್ಕೆ ಬಂದಾಗ ನೋಡಿದರಾಯಿತು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಆ ಪಕ್ಷದಿಂದ ಈ ಪಕ್ಷ ಅಂತ ಹಾರ ಬದಲಿಸಿಕೊಳ್ಳುತ್ತಲೇ ಇದ್ದಾರೆ.

‘ನಮ್ಮೂರಿನಲ್ಲಿ ಚುನಾವಣೆ ಪ್ರಚಾರ ಇನ್ನೂ ಶುರು ಆಗಿಲ್ಲ. ಪ್ರಚಾರಕ್ಕೆ ಹೋಗಲು ಬಿಸಿಲು ಅಡ್ಡಿಯಾಗುತ್ತಿದೆ. ಈ ಬಿಸಿಲಲ್ಲಿ ಪ್ರಚಾರ ಮಾಡುವುದು ಇರಲಿ, ಜನರನ್ನು ಒಂದೆಡೆ ಸೇರಿಸುವುದೇ ಕಷ್ಟವಾಗುತ್ತದೆ. ನಾಲ್ಕೈದು ದಿನಗಳು ಸತತ ಮಳೆಯಾದರೆ ಮಾತ್ರ ಭೂಮಿ ತಂಪಾಗಿ, ಸ್ವಲ್ಪ ಅನುಕೂಲವಾಗಬಹುದು’ ಎಂದು ಪರುಶುರಾಮ ಕಟ್ಟಿಮನಿ ಹೇಳಿದರು.

‘ಮತದಾರರು ಸಿಗಬೇಕೆಂದರೆ ಸಂಜೆಯ ವೇಳೆಗೆ ಪ್ರಚಾರ ಕಾರ್ಯ ನಡೆಸಬೇಕು. ಬಿಸಿಲಿನ ಹೊಡೆತಕ್ಕೆ ಹೈರಾಣಾಗುವ ಜನರು ಸಂಜೆಯ ವೇಳೆಗೆ ಗಿಡಮರಗಳ ಕೆಳಗೆ, ದೇವಸ್ಥಾನ ಆವರಣ ಸೇರಿದಂತೆ ಇನ್ನಿತರ ಕಡೆ ವಿಶ್ರಾಂತಿ ಪಡೆಯುತ್ತಾರೆ. ಎಲ್ಲ ಮತದಾರರನ್ನು ಭೇಟಿಯಾಗುವುದು ಸಾಹಸದ ಕೆಲಸವಾಗುತ್ತಿದೆ. ವಿಪರೀತ ಝಳದಿಂದ ಕಾರ್ಯಕರ್ತರು ಬೆವರಿಳಿಯುತ್ತಿದ್ದಾರೆ’ ಎಂದು ಕಾರ್ಯಕರ್ತ ನಾಗರಾಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT