ಬುಧವಾರ, ಡಿಸೆಂಬರ್ 8, 2021
18 °C

‘ಬಿಜೆಪಿಗೆ ಟೋಪಿ ಹಾಕಿ, ಬುದ್ದಿ ಕಲಿಸಿ’: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಕ್ಕಿಆಲೂರ: ಕಳೆದ ಎರಡು ವರ್ಷಗಳಿಂದ ನಿಮಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ನೀವು ಟೋಪಿ ಹಾಕಿ, ಬುದ್ದಿ ಕಲಿಸಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಡಬಲ್‌ ಇಂಜಿನ್ ಸರ್ಕಾರ ಇದೆ. ಆದರೆ ಅವರು ಹೇಳಿದಂತೆ ಅಚ್ಚೇ ದಿನ ಬರಲಿಲ್ಲ, ಬರುವುದೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು.

ಹಾನಗಲ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪರಸಿಕೊಪ್ಪ ಮತ್ತು ಬೆಳಗಾಲಪೇಟೆ ಗ್ರಾಮಗಳಲ್ಲಿ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಬುಧವಾರ ಪ್ರಚಾರ ನಡೆಸಿ ಅವರು ಮಾತನಾಡಿದರು.

ಉಪ ಚುನಾವಣೆಯಲ್ಲಿ ಸೋಲುವ ಭಯದಿಂದ ಹಣದ ಹೊಳೆ ಹರಿಸುತ್ತಿರುವ ಬಿಜೆಪಿಗೆ ಪಾಠ ಕಲಿಸಿ. ಅವರು ನೀಡುವ ನೋಟ್ ತೆಗೆದುಕೊಳ್ಳಿ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರಿಗೆ ವೋಟ್ ಹಾಕಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಇದೇ 30 ರಂದು ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗುತ್ತದೆ ಎಂದು ಸಿಎಂಗೆ ವರದಿ ಹೋಗಿದೆ. ಇದರಿಂದ ಅವರು ವಿಚಲಿತಗೊಂಡು ತಮ್ಮ ಮಂತ್ರಿ ಮಂಡಲದ ಸದಸ್ಯರ ಮೂಲಕ ಈ ಕ್ಷೇತ್ರಗಳಿಗೆ ದುಡ್ಡು ಕೊಟ್ಟು ಕಳಿಸಿ, ಹಂಚಲು ಹೇಳಿದ್ದಾರೆ. ಪ್ರತಿ ಮತಕ್ಕೆ ₹ 2 ಸಾವಿರ ಹಂಚುತ್ತಿದ್ದಾರೆ. ಅವರು ನಿಮಗೂ ನೀಡುತ್ತಾರೆ. ಅವರ ನೋಟು ತೆಗೆದುಕೊಳ್ಳಿ, ಕಾಂಗ್ರೆಸ್‍ಗೆ ವೋಟು ಹಾಕಿ, ಶ್ರೀನಿವಾಸ್ ಮಾನೆ ಅವರನ್ನು ವಿಧಾನಸಭೆಗೆ ಕಳಿಸಿ ಎಂದರು.

ಶ್ರೀನಿವಾಸ್ ಮಾನೆ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ಬಡವರು, ಉದ್ಯೋಗ ಕಳೆದುಕೊಂಡವರಿಗೆ ₹ 2 ಸಾವಿರ  ನೆರವು ಕೊಟ್ಟಿದ್ದಾರೆ. ಅವರಿಗೆ ಅಧಿಕಾರ ಇರಲಿಲ್ಲ. ಆದರೂ ನಿಮಗೆ ನೆರವು ನೀಡಿದ್ದಾರೆ. ಕಷ್ಟಕಾಲದಲ್ಲಿ ಅವರು ನಿಮ್ಮ ಬೆನ್ನಿಗೆ ನಿಂತಿದ್ದಾರೆ. ಈ ಕಾರ್ಯದ ಮೂಲಕ ಅವರು ಇಡೀ ಕಾಂಗ್ರೆಸ್ ಪಕ್ಷದ ಮರ್ಯಾದೆ ಉಳಿಸಿದ್ದಾರೆ ಎಂದು ಹೇಳಿದರು.

ದಿನನಿತ್ಯ  ಬಿಜೆಪಿ ಸರ್ಕಾರ ನಿಮ್ಮ ಹಣವನ್ನು ಪಿಕ್ ಪಾಕೆಟ್ ಮಾಡುತ್ತಿದೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗಳಿಗೂ ತಲಾ ₹ 15 ಲಕ್ಷ  ಹಾಕುತ್ತೇವೆ ಎಂದಿದ್ದರು. ಅದಕ್ಕಾಗಿ ನಿಮ್ಮ ಖಾತೆಯನ್ನೊಮ್ಮೆ ಪರೀಕ್ಷಿಸಿ, ಅವರು ಹಣ ಹಾಕಿದರಾ? ಯಾರಿಗಾದರೂ ಹಣ ಬಂತಾ? ಯುವಕರಿಗೆ ಕೆಲಸ ಸಿಕ್ಕಿತಾ? ಯಾವುದಾದರೂ ಫ್ಯಾಕ್ಟರಿ ನಿರ್ಮಾಣ ಮಾಡಿದರಾ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲ್‌ ಮಾತನಾಡಿ, ಜನಸಾಮಾನ್ಯರ ಆದಾಯ ತಗ್ಗಿದೆ, ಖರ್ಚು ಹಿಗ್ಗಿದೆ. ನಿತ್ಯದ ಜೀವನ ಹೈರಾಣಾಗಿದೆ. ಇದಕ್ಕೆಲ್ಲಾ ಯಾರು ಹೊಣೆ? ಕೊರೊನಾ ಸಮಯದಲ್ಲಿ ಬಿಜೆಪಿ ನಾಯಕರು ತಮ್ಮ ಮನೆಯ ಬಾಗಿಲು ಮುಚ್ಚಿ ಕೊಂಡರು. ಜನ ಹಾದಿ ಬೀದಿಯಲ್ಲಿ ನರಳಾಡಿದರು. ಆಗ ನಿಮ್ಮ ಕಣ್ಣೀರು ಒರೆಸಿದ್ದು ಶ್ರೀನಿವಾಸ್ ಮಾನೆ ಅವರಲ್ಲವೇ? ಅಂಥ ನಾಯಕನಿಗೆ ಶಕ್ತಿ ತುಂಬಿ, ವಿಧಾನಸಭೆಗೆ ಕಳುಹಿಸಿಕೊಡಿ ಎಂದರು.

ಅಭ್ಯರ್ಥಿ ಶ್ರೀನಿವಾಸ್ ಮಾನೆ ಮಾತನಾಡಿ, ಕಳೆದ ಎರಡೂವರೆ ವರ್ಷಗಳಿಂದ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಜನ ಕಷ್ಟದ ದಿನಗಳನ್ನೇ ನೋಡುತ್ತಿದ್ದಾರೆ. ಬಿಜೆಪಿಗೆ ಪಾಠ ಕಲಿಸಲು ಜನ ಮುಂದಾಗಬೇಕಿದೆ. ಮನೆ, ಮನೆಗಳಿಗೆ ತೆರಳಿ ಕಾರ್ಯಕರ್ತರು ಜನಜಾಗೃತಿ ಮೂಡಿಸಿ ವಿಶ್ವಾಸ ಗಳಿಸುವ ಕೆಲಸ ಮಾಡಬೇಕು. ನಮ್ಮ ಗೆಲುವು ನೂರಕ್ಕೆ ನೂರು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ಮನೋಹರ ತಹಶೀಲ್ದಾರ್, ಎಚ್.ಕೆ.ಪಾಟೀಲ, ಮಾಜಿ ಶಾಸಕ ಮಧು ಬಂಗಾರಪ್ಪ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಸೋಮಣ್ಣ ಬೇವಿನಮರದ, ಆರ್.ಎಸ್.ಪಾಟೀಲ, ಪುಟ್ಟಪ್ಪ ನರೇಗಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.