ಭಾನುವಾರ, ನವೆಂಬರ್ 28, 2021
20 °C
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಾಗ್ದಾಳಿ

ವಿಧಾನಸೌಧಕ್ಕೆ ಬೀಗ ಜಡಿದು ಹಾನಗಲ್‌ನಲ್ಲಿ ಬಿಡಾರ ಹೂಡಿದ ಮಂತ್ರಿಮಂಡಲ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾನಗಲ್: ಇಡೀ ಮಂತ್ರಿಮಂಡಲ ವಿಧಾನಸೌಧಕ್ಕೆ ಬೀಗ ಜಡಿದು ಹಾನಗಲ್‍ನಲ್ಲಿ ಬಿಡಾರ ಹೂಡಿದೆ. ಸರ್ಕಾರ ಸರಿಯಾಗಿ ಕೆಲಸ ಮಾಡಿ, ಯೋಜನೆಗಳನ್ನು ತಲುಪಿಸಿದ್ದರೆ ಈ ಪರಿಸ್ಥಿತಿ ಬರುತ್ತಿತ್ತೇ? ಜನರಿಗೆ ಆಮಿಷ ಒಡ್ಡುವ ಸ್ಥಿತಿ ನಿರ್ಮಾಣವಾಗುತ್ತಿತ್ತೇ? ಇದಕ್ಕೆ ಜನರೇ ಪಾಠ ಕಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. 

ಹಾನಗಲ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿಗಳ ಕಚೇರಿಯಲ್ಲಿರುವವರಿಗೆ ಪರಿಜ್ಞಾನ ಇದೆಯೋ? ಇಲ್ಲವೋ? ಎಂಬ ಪ್ರಶ್ನೆ ಕಾಡುತ್ತಿದೆ. ಬಿಜೆಪಿ ಬಿಡುಗಡೆ ಮಾಡಿರುವ ಈ ಪ್ರಣಾಳಿಕೆ ಮಾಡಿದ್ದು ಯಾರು? ಯಾರನ್ನು ಮೂರ್ಖರನ್ನಾಗಿಸಲು ಇದನ್ನು ಬಿಡುಗಡೆ ಮಾಡಲಾಗಿದೆ?. ಇದರಲ್ಲಿ ಆಯುಷ್ಮಾನ್ ಭಾರತ ಯೋಜನೆಯಲ್ಲಿ ಆರೋಗ್ಯಕ್ಕಾಗಿ ₹5 ಲಕ್ಷ ನೀಡುತ್ತಾರಂತೆ. ಕಳೆದ 2 ವರ್ಷಗಳಲ್ಲಿ ಸತ್ತವರಿಗೆ ಈ ವಿಮೆಯಿಂದಲೇ ಪರಿಹಾರ, ಆಸ್ಪತ್ರೆಯಲ್ಲಿ ದುಬಾರಿ ಬಿಲ್ ತೆತ್ತವರಿಗೆ ಸಹಾಯ ಮಾಡಬಹುದಿತ್ತಲ್ಲವೇ? ಯಾಕೆ ಮಾಡಲಿಲ್ಲ? ಎಂದರು. 

ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗಿಲ್ಲ ರಕ್ಷಣೆ:

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿರಾಣಿ ಮೌರ್ಯ ಅವರು ಕತ್ತಲಾದ ಮೇಲೆ ಯಾವುದೇ ಹೆಣ್ಣುಮಕ್ಕಳು ಒಂಟಿಯಾಗಿ ಪೊಲೀಸ್‌ ಠಾಣೆಗೆ ಹೋಗಬಾರದು. ಹೋಗಬೇಕಾದ ಸ್ಥಿತಿ ಬಂದರೆ ಅಣ್ಣ, ಅಪ್ಪ, ಪತಿ ಯಾರನ್ನಾದರೂ ಜತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಪ್ರಧಾನಿ ಪ್ರತಿನಿಧಿಸುವ ಕ್ಷೇತ್ರ ವಾರಾಣಸಿಯಲ್ಲಿ ಹೇಳಿದ್ದಾರೆ. ಈ ದೇಶ ಹಾಗೂ ರಾಜ್ಯದಲ್ಲಿ ಯಾವ ರೀತಿ ಮಹಿಳೆಯರಿಗೆ ರಕ್ಷಣೆ ಸಿಗುತ್ತಿದೆ ಎಂದು ನಾವು ನೋಡುತ್ತಿದ್ದು, ಈ ವಿಚಾರ ಗಂಭೀರವಾಗಿ ಪರಿಗಣಿಸುವಂತೆ ಮಹಿಳೆಯರಲ್ಲಿ ಮನವಿ ಮಾಡುತ್ತೇನೆ. ದೇಶದ ಎಲ್ಲ ಮಹಿಳೆಯರು ಧ್ವನಿ ಎತ್ತಿ ಹೋರಾಡಬೇಕು. ಬಿಜೆಪಿ ವಿರುದ್ಧ ಮತ ಹಾಕಿ, ತಮ್ಮ ಸುರಕ್ಷತೆಯತ್ತ ಗಮನ ಹರಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಯಾವ ಕಾರಣಕ್ಕೆ ಬಿಜೆಪಿ ಸಂಭ್ರಮ?:

ದೇಶದಲ್ಲಿ 100 ಕೋಟಿ ಲಸಿಕೆ ನೀಡಲಾಗಿದೆ ಎಂದು ಬಿಜೆಪಿಯವರು ಸಂಭ್ರಮಿಸುತ್ತಿದ್ದಾರೆ. ಆದರೆ ಎರಡೂ ಡೋಸ್ ಲಸಿಕೆ ಕೊಟ್ಟಿರುವುದು ಶೇ 21ರಷ್ಟು ಮಂದಿಗೆ ಮಾತ್ರ. ಕೋವಿಡ್‍ನಿಂದ ಜನರನ್ನು ರಕ್ಷಿಸಿ, ಉಳಿಸಿಕೊಂಡಿದ್ದರೆ ಸಂಭ್ರಮ ಪಡಬಹುದಿತ್ತು. ಈ ಸರ್ಕಾರ ಸತ್ತವರಿಗೆ ಪರಿಹಾರ ಕೊಡದಿರುವುದಕ್ಕೆ ಈ ಸಂಭ್ರಮಾಚರಣೆಯೇ?, ರೈತ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿರುವುದಕ್ಕೆ ಈ ಸಂಭ್ರಮಾಚರಣೆಯೇ? ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು