ಹಾವೇರಿ: ‘ಮಳೆ ಕೊರತೆಯಿಂದ ಬೆಳೆ ಒಣಗಿ, ರೈತರು ಸಂಕಷ್ಟಕ್ಕೀಡಾದರೂ ಬರಗಾಲ ಘೋಷಣೆಗೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಪರಿಹಾರ ನೀಡಬೇಕಾಗುತ್ತದೆ ಎಂದು ದಿನಾಂಕವನ್ನು ಮುಂದೂಡುತ್ತಿದೆ. ಬರಗಾಲ ಘೋಷಣೆ ಮಾಡಲು ಸರ್ಕಾರ ಮುಹೂರ್ತಕ್ಕೆ ಕಾಯುತ್ತಿದೆಯೇ?’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ತಾಲ್ಲೂಕಿನ ಆಲದಕಟ್ಟಿ ಸಮೀಪ ಪಟಾಕಿ ಅವಘಡದಲ್ಲಿ ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಸ್ಥರಿಗೆ ಶನಿವಾರ ಬಿಜೆಪಿಯಿಂದ ತಲಾ ₹1 ಲಕ್ಷ ಪರಿಹಾರ ವಿತರಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
‘ಕೇಂದ್ರ ಸರ್ಕಾರ ನೈಸರ್ಗಿಕ ವಿಪತ್ತು ಪರಿಹಾರ ನಿಧಿಯ ಮೊದಲನೇ ಕಂತು ₹300 ಕೋಟಿಯನ್ನು ಈಗಾಗಲೇ ರಾಜ್ಯಕ್ಕೆ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳ ಪಿ.ಡಿ ಅಕೌಂಟ್‌ಗಳಲ್ಲಿ ಸಾಕಷ್ಟು ಹಣವಿದೆ. ಅದನ್ನು ಬಳಕೆ ಮಾಡುತ್ತಿಲ್ಲ. ಮುಂಗಾರು ಹಂಗಾಮಿನ ಅವಧಿ ಮುಗಿಯುತ್ತಾ ಬಂದಿದೆ. ರೈತರಿಗೆ ಯಾವಾಗ ಸಹಾಯ ಮಾಡುತ್ತೀರಿ? ಇದೊಂದು ಜಡತ್ವದ ಸರ್ಕಾರ, ರೈತ ವಿರೋಧಿ ಸರ್ಕಾರ’ ಎಂದು ಕುಟುಕಿದರು.
ವಿದ್ಯುತ್ ಖರೀದಿಗೆ ಮುಂದಾಗಲಿ
‘ಬರಗಾಲ ನಿರ್ವಹಣೆ ಮತ್ತು ಅಂತರರಾಜ್ಯ ನದಿ ವಿವಾದ ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ರೈತರ ಕಷ್ಟ ಪರಿಹರಿಸಲು ಸರ್ಕಾರ ಧಾವಿಸುತ್ತಿಲ್ಲ. ರೈತರಿಗೆ ಅಲ್ಪಾವಧಿ ಮತ್ತು ಧೀರ್ಘಾವಧಿಯ ಹೊಸ ಸಾಲಗಳನ್ನು ಕೊಡಬೇಕಿತ್ತು. ಸರ್ಕಾರ ಹಣಕಾಸು ಕೊರತೆ ಎದುರಿಸುತ್ತಿದೆ. ಲೋಡ್ ಶೆಡ್ಡಿಂಗ್‌ನಿಂದ ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ 3 ಗಂಟೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದೆ. ಕೂಡಲೇ ವಿದ್ಯುತ್ ಉತ್ಪಾದನೆ ಮತ್ತು ಖರೀದಿಗೆ ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.
‘ನಾನು ಸದನದಲ್ಲಿ ರೈತರ ಆತ್ಮಹತ್ಯೆಯ ವಿಚಾರವನ್ನು ಪ್ರಸ್ತಾಪಿಸಿದಾಗ ಕೃಷಿ ಸಚಿವರು ಅಂಕಿ ಅಂಶಗಳನ್ನು ಅಲ್ಲಗಳೆದರು. ಕೃಷಿ ಮಾರುಕಟ್ಟೆ ಸಚಿವರು ರೈತರ ಆತ್ಮಹತ್ಯೆ ಬಗ್ಗೆ ಹಗುರ ಹೇಳಿಕೆ ನೀಡಿದ್ದಾರೆ. ಇದು ಸರ್ಕಾರದ ರೈತ ವಿರೋಧಿ ನೀತಿ ತೋರಿಸುತ್ತದೆ. ಎಫ್‌ಎಸ್‌ಎಲ್ ವರದಿ ಬಂದ ತಕ್ಷಣ ಮೃತ ರೈತರ ಕುಟುಂಬಸ್ಥರಿಗೆ ಪರಿಹಾರ ಕೊಡಬೇಕು. ಬಿಜೆಪಿಯಿಂದ ಸಾಂತ್ವನ ಹೇಳುವ ಜತೆಗೆ ಆರ್ಥಿಕ ನೆರವು ನೀಡಲು ತೀರ್ಮಾನಿಸಿದ್ದೇವೆ’ ಎಂದರು.
ಕೃಷಿ ಯೋಜನೆಗಳು ರದ್ದು
‘ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಭೂಸಿರಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಬೆಳೆವಿಮೆ ಇದೆ, ಆದರೆ, ರೈತನಿಗೆ ಲೈಫ್ ಇನ್ಸುರೆನ್ಸ್ ಇಲ್ಲ. ನಾವು ಬಜೆಟ್‌ನಲ್ಲಿ ₹180 ಕೋಟಿ ಮೀಸಲಿರಿಸಿ, ಎಲ್ಲ ರೈತರಿಗೆ ಜೀವವಿಮೆ ಮಾಡಬೇಕು ಎಂದು ‘ಜೀವನ ಜ್ಯೋತಿ’ ಕಾರ್ಯಕ್ರಮ ರೂಪಿಸಿದ್ದೆವು. ಕಾಂಗ್ರೆಸ್‌ನವರು ಬಜೆಟ್‌ನಲ್ಲಿ ತೆಗೆದುಹಾಕಿದ್ದಾರೆ. ಇದರಿಂದ ರೈತರ ಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ’ ಎಂದರು.
ನಿಯಮ ಉಲ್ಲಂಘನೆ
‘ಮುಖ್ಯರಸ್ತೆ ಮತ್ತು ಜನವಸತಿ ಪ್ರದೇಶಗಳ ಬಳಿ ಇಷ್ಟು ದೊಡ್ಡ ಪ್ರಮಾಣದ ಪಟಾಕಿಗಳನ್ನು ಶೇಖರಣೆ ಮಾಡಿದ್ದೇ ದೊಡ್ಡ ತಪ್ಪು. ಈ ಗೋದಾಮಿನಲ್ಲಿ ಪಟಾಕಿ ಸಂಗ್ರಹಣೆ ಮಾಡಲು ಅನುಮತಿ ಪಡೆದಿರಲಿಲ್ಲ. ಹಲವಾರು ಲೋಪದೋಷಗಳು ಮೇಲ್ನೋಟಕ್ಕೆ ಕಂಡುಬಂದಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ದುರ್ಘಟನೆಗಳು ಸಂಭವಿಸುತ್ತವೆ. ಜಿಲ್ಲಾಡಳಿತ ಲೈಸೆನ್ಸ್ ನೀಡುವಾಗ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದರು.
‘ರಾಣೆಬೆನ್ನೂರಿನ ಅಗ್ನಿ ಅವಘಡದಲ್ಲಿ ಇಬ್ಬರು, ಆಲದಕಟ್ಟಿಯಲ್ಲಿ ನಾಲ್ವರು ಮೃತಪಟ್ಟಿರುವುದು ದುರ್ದೈವದ ಸಂಗತಿ. ಲೈಸೆನ್ಸ್ ಇಲ್ಲದೆ ಹಾವೇರಿ–ಹಾನಗಲ್ ಮುಖ್ಯರಸ್ತೆಯ ಪಕ್ಕ ಪಟಾಕಿ ಗೋದಾಮಿಗೆ ಅವಕಾಶ ಕೊಟ್ಟಿದ್ದು ಏಕೆ? ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರ ಕೂಡಲೇ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.