ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿರುತೆರೆಯಿಂದ ಕಳೆಗುಂದಿದ ನಾಟಕ ರಂಗ’

Last Updated 3 ಫೆಬ್ರುವರಿ 2018, 6:21 IST
ಅಕ್ಷರ ಗಾತ್ರ

ವಿಜಯಪುರ: ಇಂದು ಗ್ರಾಮೀಣ ಪ್ರದೇಶದಲ್ಲಿ ನಾಟಕ ಪ್ರದರ್ಶನ ಕಳೆಗುಂದುತ್ತಿದೆ. ಹಳ್ಳಿಗಳಲ್ಲಿ ಯಾವುದೇ ಒಂದು ದೇವರ ಜಾತ್ರಾ ಮಹೋತ್ಸವ ಎಂದರೆ ಸಾಕು ಅಂದು ಪೌರಾಣಿಕ ನಾಟಕ ಪ್ರದರ್ಶನ ಇರುತ್ತಿತ್ತು. ಆದರೆ ಪ್ರಸ್ತುತ ಸಿನಿಮಾ, ಕಿರುತೆರೆಗಳ ಪ್ರಭಾವಗಳಿಂದ ನಾಟಕ ಆಡುವವರು, ಕಲಿಸುವವರು ಇಲ್ಲ ಎಂದು ರಾಜಗೋಪಾಲ್ ಹೇಳುತ್ತಾರೆ.

ಪೌರಾಣಿಕ ಚರಿತ್ರೆಗಳನ್ನು ಅಧ್ಯಯನ ಮಾಡಿ ನಾಟಕ ಬರೆಯುವುದು, ಆಡುವುದು ಕಷ್ಟದ ಕೆಲಸ. ಒಟ್ಟಾರೆ ಅಭಿನಯ ಎಂಬುದು ಎಲ್ಲರಿಗೂ ದಕ್ಕುವುದಿಲ್ಲ. ಇವೆಲ್ಲವನ್ನೂ ಮೈಗೂಡಿಸಿಕೊಂಡು ಮೂರು ತಿಂಗಳ ಕಾಲ ಸತತ ಅಭ್ಯಾಸ ಮಾಡಿ ಪ್ರದರ್ಶನ ನೀಡುತ್ತಿರುವುದು ಕಲಾವಿದರಿಗೆ ಎಷ್ಟು ಸಂತೋಷವೋ ಅದಕ್ಕಿಂತ ಹೆಚ್ಚು ವೀಕ್ಷಕರಿಗೆ ಹೆಚ್ಚು ಮನರಂಜನೆ ಸಿಗುತ್ತಿತ್ತು ಎಂದರು.

ನಾಟಕವೊಂದು ಪ್ರದರ್ಶಿತವಾದಾಗ ಗ್ರಾಮಗಳಲ್ಲಿ ನೂರಾರು ಮಂದಿ ಸೇರುತ್ತಾರೆ. ಚಪ್ಪಾಳೆ, ಸಿಳ್ಳೆ ಹೊಡೆದು ನಟರನ್ನು ಪ್ರೋತ್ಸಾಹಿಸುತ್ತಾ ಅದನ್ನು ಆಸ್ವಾದಿಸುತ್ತಾರೆ. ಈ ರೀತಿಯ ನಾಟಕವನ್ನು ಪ್ರದರ್ಶಿಸುವುದರ ಹಿಂದೆ ಹಲವು ತಿಂಗಳುಗಳ ಪರಿಶ್ರಮವಿರುತ್ತದೆ. ಸಾಮಾನ್ಯವಾಗಿ ನಟರು ಸ್ಥಳೀಯರೇ ಆಗಿದ್ದು, ನಾಟಕ ಕಲಿಸುವ ಗುರುವನ್ನು ಹೊರಗಿನಿಂದ ಕರೆ ತಂದು ಅವರಿಂದ ಹಾವ ಭಾವ, ಅಭಿನಯ, ಸಂಗೀತ, ಸಂಭಾಷಣೆಗಳನ್ನು ಕಲಿಯುತ್ತಾರೆ ಎಂದರು.

ವಿಜಯಪುರ, ಆವತಿ, ಹಾಗೂ ಸುತ್ತ ಮುತ್ತ ಗ್ರಾಮಗಳಲ್ಲಿ ವ್ಯವಸಾಯ, ರೇಷ್ಮೆ ಕಸುಬು, ಚಿಲ್ಲರೆ ಅಂಗಡಿ ಮುಂತಾದ ಕಸುಬುಗಳ ಹಿನ್ನೆಲೆ ಇರುವ ಸ್ನೇಹಿತರು ಒಂದೆಡೆ ಸೇರಿಕೊಂಡು ಪೌರಾಣಿಕ ನಾಟಕದ ತಯಾರಿ ನಡೆಸುತ್ತಾರೆ. ಜೀವನ ನಿರ್ವಹಣೆಗೆ ಹಗಲಿನಲ್ಲಿ ದುಡಿದು ರಾತ್ರಿ ವೇಳೆಯಲ್ಲಿ ನಾಟಕಕ್ಕೆ ತಾಲೀಮು ನಡೆಸಿಕೊಳ್ಳುತ್ತಾರೆ ಎಂದರು.

ಇವರು ಕಲಿಯುವ ನಾಟಕಕ್ಕೆ ಇವರೇ ಹೆಸರು ಸೂಚಿಸುತ್ತಾರೆ. ಕಲಾಸಕ್ತ ಸಮಾನಮನಸ್ಕ ಸ್ನೇಹಿತರ ತಂಡವು ವರ್ಷಕ್ಕೊಮ್ಮೆ ನಾಟಕ ಪ್ರದರ್ಶಿಸುತ್ತಾರೆ. ಈ ಪೌರಾಣಿಕ ನಾಟಕಕ್ಕೆ ಗುರುಗಳ ಉಪಸ್ಥಿತಿಯನ್ನು ನೋಡಿಕೊಂಡು ನಿದ್ರೆ ಕೆಟ್ಟು ತಡರಾತ್ರಿಯವರೆಗೂ ಕೆಲವೊಮ್ಮೆ ಬೆಳಗಿನ ಜಾವದವರೆಗೂ ತಾಲೀಮು ನಡೆಸುತ್ತಾರೆ ಎಂದು ಹೇಳಿದರು.

ಕಲಾವಿದ ಮೋಹನ್ ಬಾಬು ಮಾತನಾಡಿ, ನಾಟಕ ಪ್ರದರ್ಶನ ಮಾಡುವ ಒಂದು ವಾರ, ಅಥವಾ 15 ದಿನಗಳ ಮುಂಚೆ ಗೆಜ್ಜೆ ಪೂಜೆ ನಡೆಸುತ್ತಾರೆ. ಗೆಜ್ಜೆಪೂಜೆಯ ವೇಳೆಯಲ್ಲಿ ನಾಟಕದಲ್ಲಿ ಮಾಡುವಂತೆ ವೇಷಭೂಷಣಗಳನ್ನು ತೊಟ್ಟು ಪ್ರದರ್ಶನ ಮಾಡುತ್ತಾರೆ. ಈ ಪ್ರದರ್ಶನ, ಪಬ್ಲಿಕ್ ಪರೀಕ್ಷೆಗೆ ಮುನ್ನ ನಡೆಸುವ ಪೂರ್ವ ಸಿದ್ಧತಾ ಪರೀಕ್ಷೆಯಂತೆ ಇರುತ್ತದೆ. ಒಂದು ವೇಳೆ ಪ್ರದರ್ಶನದಲ್ಲಿ ಏರುಪೇರುಗಳಾದರೆ ಅಂತಿಮ ನಾಟಕ ಪ್ರದರ್ಶನದ ವೇಳೆ ಸರಿಪಡಿಸಿಕೊಳ್ಳುತ್ತಾರೆ ಎಂದರು.

‘ನಮಗೆ ಬೇರೆ ಬೇರೆ ಉದ್ಯೋಗಗಳಿದ್ದರೂ ರಂಗಭೂಮಿಯು ನಮ್ಮನ್ನು ಒಂದೆಡೆ ಸೇರಿಸಿದೆ. ನಾವೇನೂ ವೃತ್ತಿ ಕಲಾವಿದರಲ್ಲ. ಕಲಾಸಕ್ತಿಯಿಂದಾಗಿ ನಾವು ಗುರುವನ್ನು ಕರೆದುಕೊಂಡು ಬಂದು ಕಲಿಯುತ್ತೇವೆ. ಸಾಕಷ್ಟು ಸಂಭಾಷಣೆ, ರಾಗ, ಹಾಡು, ಅಭಿನಯವನ್ನು ನೆನಪಲ್ಲಿಟ್ಟುಕೊಂಡು ಕೊಂಚವೂ ತಪ್ಪಿಲ್ಲದೆ ನಟಿಸಬೇಕಿರುವುದರಿಂದ ನಿದ್ರೆಕೆಟ್ಟು ಕಲಿಯುತ್ತೇವೆ’ ಎಂದರು.

‘ಪೌರಾಣಿಕ ನಾಟಕದ ತಯಾರಿಯಿಂದ ಪ್ರಾರಂಭವಾಗಿ ಪ್ರದರ್ಶನದ ವರೆಗೂ ಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಈ ಹಣವನ್ನು ನಾವೇ (ನಟರು) ಭರಿಸುತ್ತೇವೆ. ಕಲೆಯ ಪೋಷಣೆಗಾಗಿ ವೆಚ್ಚ ಮಾಡುವ ಹಣ ಮತ್ತು ಪರಿಶ್ರಮ ನಮಗೆ ಸಿಗುವ ಸಂತೋಷದ ಮುಂದೆ ಹೆಚ್ಚಿನದ್ದಲ್ಲ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT