ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ ಮಾಡಿ, ಸಮಸ್ಯೆ ಪರಿಹರಿಸಿ

ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಖಡಕ್ ಸೂಚನೆ
Last Updated 7 ಜನವರಿ 2019, 14:38 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಆಗಾಗ್ಗೆ ಪ್ರವಾಸ ಮಾಡಿ, ತಳಮಟ್ಟದ ಸ್ಥಿತಿಗತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ತುರ್ತು ಇಲ್ಲದೇ ರಜೆ ಹಾಕಬಾರದು ಎಂದು ‘ಬರ ಪೀಡಿತ, ಪ್ರವಾಹ ಪ್ರದೇಶಗಳ ಅಧ್ಯಯನ ಪ್ರದೇಶಗಳ ಅಧ್ಯಯನ, ಪರಿಹಾರ, ನಿರ್ವಹಣೆ’ಯ ಬೆಳಗಾವಿ ಕಂದಾಯ ವಿಭಾಗದ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಸೋಮವಾರ ಬರ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

‘ನೀರು, ಮೇವು ಹಾಗೂ ಉದ್ಯೋಗ ಸೃಷ್ಟಿಯು ಪ್ರಥಮ ಆದ್ಯತೆ ಆಗಬೇಕು. ವಾರಕ್ಕೊಮ್ಮೆ ಟಾಸ್ಕ್‌ಫೋರ್ಸ್‌ ಸಮಿತಿ ಸಭೆ ನಡೆಸಬೇಕು. ಎಂಟು ದಿನಗಳ ಒಳಗಾಗಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿಕೊಂಡು, ಒಪ್ಪಂದ ಮಾಡಿಕೊಳ್ಳಬೇಕು. ಮೇವನ್ನು ಬೇರೆ ರಾಜ್ಯಕ್ಕೆ ಸಾಗಾಟ ಮಾಡಲು ಬಿಡಬಾರದು. ಜನ ಗುಳೆ ಹೋಗಬಾರದು. ನರೇಗಾ ಅಡಿ 150 ದಿನ ಕೂಲಿ ನೀಡಬೇಕು’ ಎಂದು ಸೂಚನೆ ನೀಡಿದರು.

ರೈತರಿಗೆ ಮೇವಿನ ಬೀಜಗಳನ್ನು ವಿತರಿಸಿ, ನೀರು ಲಭ್ಯವಿರುವೆಡೆ ಹಸಿರು ಬೆಳೆಸಬೇಕು. ಈಗಾಗಲೇ ಪ್ರತಿ ತಾಲ್ಲೂಕಿಗೆ ಕುಡಿಯುವ ನೀರಿಗಾಗಿ ₹50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾಡಳಿತದ ಬಳಿ ಒಟ್ಟು 7.5 ಕೋಟಿ ಅನುದಾನ ಇದೆ. ಅನುದಾನದ ಕೊರತೆ ಇಲ್ಲ ಎಂದರು.

ಕೊಳವೆಬಾವಿ ಕೊರೆಯಿಸುವುದು ಕೊನೆಯ ಆದ್ಯತೆಯಾಗಬೇಕು. ಖಾಸಗಿ ಕೊಳವೆಬಾವಿಗಳ ನೆರವು ಪಡೆದುಕೊಳ್ಳಿ. ಪೈಪ್‌ಲೈನ್‌ಗಳ ಅಳವಡಿಕೆ, ಮೋಟಾರ್‌ಗಳ ಅಳವಡಿಕೆ ಮಾಡಿ ಎಂದರು.

ಕಳಪೆ ಕಾಮಗಾರಿ, ಬೋಗಸ್ ಬಿಲ್, ಸುಳ್ಳು ಖರೀದಿ, ಕೊಳವೆ ಬಾವಿ ಆಳವನ್ನು ಸುಳ್ಳು ದಾಖಲಿಸುವ ಪ್ರಕರಣಗಳು ಪತ್ತೆಯಾದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

15 ದಿನಗೊಳಗಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಬೆಳೆಹಾನಿ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ರಾಜ್ಯವು ಕಳೆದ 18 ವರ್ಷದಲ್ಲಿ 14 ವರ್ಷ ಬರ ಎದುರಿಸಿದೆ. ಹೀಗಾಗಿ, ಜಿಲ್ಲೆಯ ಇತಿಹಾಸದ ಆಧಾರದ ಮೇಲೆ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ, ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಿ ಎಂದರು.

ಕೇಂದ್ರ ಸರ್ಕಾರದ ಮಾನದಂಡದಂತೆ ಬರ ಘೋಷಣೆ ಹಾಗೂ ಪರಿಹಾರ ಹಣದ ವಿತರಣೆ ಮಾಡಲಾಗುತ್ತಿದೆ. ಈ ನಿಯಮಾವಳಿ ಅನುಸಾರವೇ ಎಲ್ಲರೂ ಕೆಲಸ ಮಾಡಬೇಕಾಗುತ್ತದೆ. ಮುಂಗಾರಿನಲ್ಲಿ ₹16,600 ಕೋಟಿ ಬೆಳೆ ನಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಮಾತನಾಡಿ, ‘ಜಿಲ್ಲೆಯ 14 ಹಳ್ಳಿಗಳಲ್ಲಿ 34 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಎಲ್ಲಿಯೂ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿಲ್ಲ’ ಎಂದರು.

ಶಾಸಕ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಮಾತನಾಡಿ, ಕೆರೆ ಹೂಳೆತ್ತುವುದು, ಬರ ಪರಿಹಾರ ಕಾಮಗಾರಿ, ಬೆಳೆವಿಮೆ, ಭೂಸ್ವಾಧೀನ ಪರಿಹಾರ ಹಾಗೂ ಬರ ಘೋಷಣೆ ಮಾನದಂಡಗಳ ಕುರಿತು ಪ್ರಸ್ತಾಪಿಸಿದರು.

ಸಂಪುಟ ಉಪ ಸಮಿತಿಯ ಸದಸ್ಯರಾದ ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ ಬಡೇರಿಯಾ, ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಲೀಲಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT