ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ ಆಟೊ ಚಾಲಕರಿಗೆ ‘ಆಟೊ ಉನ್ನತಿ’ ಸೌಲಭ್ಯ

Last Updated 19 ಫೆಬ್ರುವರಿ 2018, 19:50 IST
ಅಕ್ಷರ ಗಾತ್ರ

ಬೆಂಗಳೂರು: ಓಲಾ ಕ್ಯಾಬ್ ಕಂಪನಿಯು ತನ್ನ ಆಟೊ ಚಾಲಕರಿಗೆ ‘ಆಟೊ ಉನ್ನತಿ’ ಯೋಜನೆಯನ್ನು ನಗರದಲ್ಲಿ ಜಾರಿಗೊಳಿಸಿದೆ.

ಈ ಯೋಜನೆಯಲ್ಲಿ ‘ಚಲೊ ಬೇಫಿಕರ್’ (ಆಟೊ ಚಾಲಕರಿಗೆ ವಿಮೆ ಸೌಲಭ್ಯ) ಹಾಗೂ ‘ದುಡಿಮೆ ಖಾತರಿ’ ಎಂಬ ಕಾರ್ಯಕ್ರಮಗಳಿವೆ.

‘ಚಲೊ ಬೇಫಿಕರ್’ ಕಾರ್ಯಕ್ರಮದಡಿ, ಆಟೊ ಚಾಲಕರಿಗೆ ₹5 ಲಕ್ಷ ವಿಮೆ ಸೌಲಭ್ಯ ಒದಗಿಸಲಾಗಿದೆ. ವಿಮೆಯ ಕಂತುಗಳನ್ನು ಕಂಪನಿಯೇ ಪಾವತಿಸಲಿದೆ. ಕೆಲಸ ಮಾಡುವಾಗ ಚಾಲಕ ಅಪಘಾತಕ್ಕೀಡಾಗಿ ಮೃತಪಟ್ಟರೆ, ವಿಮೆ ಹಣವನ್ನು ಕುಟುಂಬಕ್ಕೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಓಲಾ ಆಟೊ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಅಗರ್‌ವಾಲ್ ತಿಳಿಸಿದರು.

ಅಪಘಾತದಿಂದ ಗಾಯಗೊಂಡು ಆಸ್ಪತ್ರೆ ಸೇರುವ ಚಾಲಕರಿಗೆ ವಿಮೆ ಕಂಪನಿಯು, ಮೂರು ತಿಂಗಳ ವರೆಗೆ ಪ್ರತಿದಿನದ ವಹಿವಾಟು ನಷ್ಟ ₹ 750 ಅನ್ನು ಭರಿಸಲಿದೆ. ವಾಹನ ಸಾಲ ಹಾಗೂ ಚಾಲಕರ ಮಕ್ಕಳ ಶಿಕ್ಷಣ ವೆಚ್ಚವನ್ನೂ (ವಾರ್ಷಿಕ ₹24 ಸಾವಿರ) ತುಂಬಲಿದೆ ಎಂದರು.

ದುಡಿಮೆ ಖಾತರಿ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಆಟೊ ಚಾಲಕರಿಗೆ ತಿಂಗಳಿಗೆ ಕನಿಷ್ಠ ₹ 44 ಸಾವಿರ ದುಡಿಮೆಯ ಖಾತರಿಯನ್ನು ಕಂಪನಿ ಒದಗಿಸಿದೆ. ನಗರದಲ್ಲಿ ಮೊದಲ ಬಾರಿಗೆ ಈ ಸೇವೆ ಪರಿಚಯಿಸಿದ್ದು, ಮುಂದಿನ ದಿನಗಳಲ್ಲಿ 73 ನಗರಗಳ ಸುಮಾರು 2 ಲಕ್ಷ ಚಾಲಕರಿಗೂ ವಿಸ್ತರಿಸಲಾಗುತ್ತದೆ ಎಂದು ಹೇಳಿದರು.

ಕ್ಯಾಬ್ ಮತ್ತು ಆಟೊ ಚಾಲಕರ ದುಡಿಮೆ ವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲು ಈ ಯೋಜನೆ ಜಾರಿಗೆ ತರಲಾಗಿದೆ. ಚಾಲಕರು ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶ ಎಂದು ಹೇಳಿದರು.

ಓಲಾ ಆಟೊ ಚಾಲಕ ಕ್ರಿಸ್ಟಿ ಥಾಮ್ಸನ್‌, ‘ವಾಹನ ಚಾಲನೆ ವೇಳೆ ಅಪಘಾತ ಸಂಭವಿಸಿ ಜೀವಕ್ಕೆ ತೊಂದರೆಯಾದರೆ ಕುಟುಂಬದ ಭವಿಷ್ಯವೇನು ಎಂಬ ಆತಂಕದಲ್ಲಿ ಆಟೊ ಚಲಾಯಿಸುತ್ತಿದ್ದೆ. ಆ ಚಿಂತೆಯನ್ನು ಕಂಪನಿಯು ದೂರ ಮಾಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT