ಶುಕ್ರವಾರ, ಫೆಬ್ರವರಿ 28, 2020
19 °C

ಹಾವನೂರ ಗ್ರಾಮದೇವಿ ಜಾತ್ರೆ: ಒಂದೇ ದಿನ ದ್ಯಾಮವ್ವ ದೇವಿ ದರ್ಶನ

ದುರಗಪ್ಪ ಪಿ. ಕೆಂಗನಿಂಗಪ್ಪನವರ Updated:

ಅಕ್ಷರ ಗಾತ್ರ : | |

Prajavani

ಗುತ್ತಲ: ವರ್ಷಕ್ಕೆ ಒಂದು ದಿನ ದರ್ಶನ ನೀಡುವ ಹಾವನೂರ ಗ್ರಾಮದೇವತೆಯ ಜಾತ್ರೆ ಫೆ.5 ರಂದು ಅದ್ಧೂರಿಯಾಗಿ ನಡೆಯಲಿದೆ. ಜಾತ್ರೆಗೆ ಲಕ್ಷಾಂತರ ಜನ ಸೇರುವ ಸಾಧ್ಯತೆ ಇದೆ.

ಜಾತ್ರೆಯ ಸಲುವಾಗಿ ತುಂಗಭದ್ರ ನದಿಗೆ ಭದ್ರ ಜಲಾಶಯದಿಂದ 1 ಟಿಎಂಸಿ ನೀರು ಹರಿಸಲಾಗಿದ್ದು, ನದಿ ಮೈದುಂಬಿ ಹರಿಯುತ್ತಿದೆ. ಬನವಾಸಿಯ ಕದಂಬರು ಹಾವನೂರ ಗ್ರಾಮವನ್ನು ನಿರ್ಮಿಸಿ ಇಲ್ಲಿ ತ್ರಿಪುರಾಂತಕೇಶ್ವರ ದೇವಸ್ಥಾನ ನಿರ್ಮಿಸಿ ಹೋದರು ಎನ್ನುವ ಉಲ್ಲೇಖವಿದೆ.

ಕ್ರಿ.ಶ.1517-1595 ರವರಗೆ 5 ನೇ ಹನುಮಂತಗೌಡನ ಆಡಳಿತದಲ್ಲಿ ತುಂಗಭದ್ರ ನದಿಯ ಪಕ್ಕದಲ್ಲಿ 200 ಮೀಟರ್ ಉದ್ದ ಕೋಟೆ ನಿರ್ಮಾಣ ಮಾಡಿದ್ದಾರೆ. ಈ ಕೋಟೆ ನಿರ್ಮಾಣಕ್ಕಾಗಿ ಭೂಮಿ ಅಗೆಯುತ್ತಿದ್ದಾಗ ದೊಡ್ಡ ಗಾತ್ರದ ಹಾವಿನ ಹುತ್ತ ಕಂಡಿತು ಅದನ್ನು ಲೆಕ್ಕಿಸದೆ ಅಗೆದಾಗ ಒಂದು ಹುತ್ತದಲ್ಲಿ ‘ನೂರು ಹಾವು’ ಹೊರಕ್ಕೆ ಬಂದ ಹಿನ್ನಲೆಯಲ್ಲಿ ಅಂದಿನಿಂದ ‘ಹಾವನೂರ’ ಎಂದು ಹೆಸರಿಡಲಾಯಿತು.

ದೇವಿಯ ಮೂರ್ತಿಯು ರಕ್ತಚಂದನ ಕಟ್ಟಿಗೆಯಿಂದ ಮಾಡಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ದೇವಸ್ಥಾನ ನಿರ್ಮಾಣ ಮಾಡಿ ದೇವತೆಯನ್ನು ಇಡಲಾಗಿತ್ತು. ನಂತರ ಗ್ರಾಮದಲ್ಲಿ ದಿನಕ್ಕೆ 10ರಿಂದ 15 ಜನ ಸಾವಿಗೀಡಾದರು. ಈ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಮದ ಹಿರಿಯರು ಪೆಟ್ಟಿಗೆಯಲ್ಲಿ ಹಾಕಿ ತುಂಗಭದ್ರಾ ನದಿಗೆ ಹಾಕಿದ್ದರು ಎಂಬ ಐತಿಹ್ಯವಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಾನಂದಯ್ಯ ಕರಸ್ಥಳ ಹೇಳುತ್ತಾರೆ.

ಪೇಶ್ವೆಯರ ಆಳ್ವಿಕೆಯ ಕಾಲದಲ್ಲಿ ಧಾರವಾಡ ಪ್ರಾಂತದಲ್ಲಿ ಹಾವನೂರ ಹನುಮಂತಗೌಡ ದೇಸಾಯಿ ಪಾಳೇಗಾರನಾಗಿ ಆಳ್ವಿಕೆ ನಡೆಸುತ್ತಿದ್ದ. ಇತನಿಗೆ ಕನಸಿನಲ್ಲಿ ದೇವಿಯು ಪ್ರತ್ಯಕ್ಷಳಾಗಿ ನಾನು ಗಜ ಗೌರಿ ತುಂಗಭದ್ರಾ ನದಿಯಲ್ಲಿ ಕಟ್ಟಿಗೆಯ ಪೆಟ್ಟಿಗೆಯಲ್ಲಿ ನನ್ನ ಸಹೋದರಿಯ ಜೊತೆಗೆ ಬರುತ್ತಿದ್ದೇನೆ. ನನಗೆ ನಿನ್ನ ಊರಿನಲ್ಲಿ ನೆಲೆಸುವ ಆಸೆಯಾಗಿದೆ ಎಂದು ಹೇಳಿ ಅದೃಶ್ಯಳಾದಳು.

ಇದರಿಂದ ವಿಚಲಿತನಾದ ಹನುಮಂತಗೌಡ ಕುಲ ಗುರು ನೆಗಳೂರಿನ ಸಂಸ್ಥಾನ ಹಿರೇಮಠದ ತಪಸ್ವಿ ಲಿಂ.ಗುರು ಶಾಂತ ಶಿವಯೋಗಿ ಶಿವಾಚಾರ್ಯರಲ್ಲಿ ಕನಸಿನಲ್ಲಿ ನಡೆದ ಸಂಗತಿಯನ್ನು ತಿಳಿಸಿದೆ. ಪಾರ್ವತಿ ಸ್ವರೂಪಳಾದ ಗಜ ಗೌರಿ ನಿನ್ನ ಕ್ಷೇತ್ರದಲ್ಲಿ ನೆಲೆ ನಿಂತರೆ ನಿನ್ನ ಪ್ರಾಂತ್ಯ ಸೂರ್ಯ–ಚಂದ್ರ ಇರುವವರೆಗೂ ಸುಭೀಕ್ಷೆಯಿಂದ ಕೂಡಿರುತ್ತದೆ ಎಂದರು.

ದಿ.ವಿರುಪಾಕ್ಷಯ್ಯ ಕರಸ್ಥಳ ಅವರ ನೇತೃತ್ವದಲ್ಲಿ 1950 ರಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಯಿತು. ಫೆ.3 ಸ ಗರಿಬಂಡಿ ಕಾರ್ಯಕ್ರಮ ನಡೆಯುತ್ತದೆ. ಅಂದು ರಾತ್ರಿ ಚೌತಮನೆ ಕಟ್ಟೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತವೆ. ನಂತರ ಬುಟ್ಟಿ ಊರಮ್ಮನನ್ನು ಪ್ರತಿಷ್ಠಾಪನೆ ಮಾಡಲಾಗುವುದು. ಫೆ.4 ರಂದು ಮಧ್ಯರಾತ್ರಿ 12 ಗಂಟೆಗೆ ದೇವಿಯನ್ನು ಪೆಟ್ಟಿಗೆಯಿಂದ ಹೊರ ತೆಗೆಯಲಾಗುವುದು. ಬಳಿಕ ಮೂರ್ತಿಗೆ ಬಣ್ಣ ಹಚ್ಚಿ ಅಲಂಕರಿಸುವುದು. ದೇವಿಯನ್ನು ಸಂಪೂರ್ಣ ಜೋಡಿಸಲಾಗುವುದು.

ಫೆ 5 ರಂದು ಬೆಳಿಗ್ಗೆ 4 ಕ್ಕೆ ದೇವಿಯನ್ನು ದೇವಸ್ಥಾನದಿಂದ ಹೊರಗಡೆ ತಂದು ಹಳಿ ಬಂಡಿಯ ಮೇಲೆ ಇಟ್ಟು ಚೌತಮನೆಯವರೆಗೆ ಮೆರವಣಿಗೆ ಮೂಲಕ ತರಲಾಗುವುದು. ಮೆರವಣಿಗೆ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವುದು, ಡೊಳ್ಳು ಕುಣಿತ ನಡೆಯಲಿದೆ. ಅದೇ ದಿನ ದೇವಿಯ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಉಡಿ ತುಂಬುವುದು, ನೈವೇದ್ಯ ಹರಕೆ ತೀರಿಸಿಕೊಳ್ಳುವವರೆಗೂ ಈ ದಿನ ಮಾತ್ರ ದೇವಿ ದರ್ಶನವಾಗುತ್ತದೆ. ಸಂಜೆ 4ಕ್ಕೆ ದೇವಿಯನ್ನು ಗಡಿಗೆ ಕಳುಹಿಸಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು