ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ದೇವರೇ ನಿಂತರೂ ಪಕ್ಕಾ ಲೆಕ್ಕ ಬೇಕು- ವೆಚ್ಚ ವೀಕ್ಷಕ ಹಸನ್ ಅಹ್ಮದ್

'ಖರ್ಚು ವೆಚ್ಚವು ನಿಗದಿಗಿಂತ ಮೀರಿದರೆ ಅನರ್ಹತೆಯ ಅಪಾಯ'
Last Updated 20 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಹಾವೇರಿ:ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಗಳ ಪ್ರಚಾರಕ್ಕಿಂತ, ವೀಕ್ಷಕರ ಕ್ರಮಗಳೇ ಸುದ್ದಿ ಮಾಡುತ್ತಿವೆ. ಈ ಪೈಕಿ ನಸುಕಿನಲ್ಲೂ ಚೆಕ್‌ ಪೋಸ್ಟ್ ಭೇಟಿ, ಕ್ಷೇತ್ರ ಭೇಟಿ, ತರಬೇತಿ, ಸರಳತೆ, 24X7 ಕಾರ್ಯತತ್ಪರತೆಯಿಂದ ವೆಚ್ಚ ವೀಕ್ಷಕರಾದ ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿಯ ಐ.ಆರ್.ಎಸ್. ಅಧಿಕಾರಿ ಹಸನ್ ಅಹ್ಮದ್ ಗುರುತಿಸಿಕೊಂಡಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ವೀಕ್ಷಕರ ಕಾರ್ಯವೇನು?

–ಆಯೋಗವು ಸಾಮಾನ್ಯ, ವೆಚ್ಚ ಹಾಗೂ ಪೊಲೀಸ್‌ ವೀಕ್ಷಕರನ್ನು ನಿಯೋಜಿಸಿರುತ್ತದೆ. ಸಾಮಾನ್ಯ ವೀಕ್ಷಕರು ಎಲ್ಲ ವ್ಯವಸ್ಥೆಗಳ ಮೇಲೆ ನಿಗಾ ಇರಿಸಿದರೆ, ಪೊಲೀಸ್ ವೀಕ್ಷಕರು ಕಾನೂನು ಸುವ್ಯವಸ್ಥೆ, ತೋಳ್ಬಲ ಪ್ರಯೋಗಗಳ ಬಗ್ಗೆ ನಿಗಾ ವಹಿಸುತ್ತಾರೆ. ವೆಚ್ಚ ವೀಕ್ಷಕರು ನಗದು ವಹಿವಾಟು, ವಸ್ತು, ಮದ್ಯ, ಭರವಸೆಯ ಚೀಟಿಗಳು ಮತ್ತಿತರ ರೂಪದಲ್ಲಿ ನೀಡುವ ಆರ್ಥಿಕ ಅಕ್ರಮಗಳ ಮೇಲೆ ನಿಗಾ ಇರಿಸುತ್ತಾರೆ.

*ಖರ್ಚು– ವೆಚ್ಚದ ಮಹತ್ವವೇನು?

–ಮಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಆಯೋಗವು ವೆಚ್ಚ ನಿಗದಿ ಪಡಿಸಿದೆ. ಅಭ್ಯರ್ಥಿ ನಿಗದಿಗಿಂತ (₹70 ಲಕ್ಷ) ಒಂದು ರೂಪಾಯಿ ಹೆಚ್ಚು ಖರ್ಚು ಮಾಡಿದರೂ, ಆಯೋಗಕ್ಕೆ ಶಿಫಾರಸು ಮಾಡುತ್ತೇವೆ. ಆತ ಗೆದ್ದರೂ, ಆಯೋಗವುಅನರ್ಹತೆಗೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಮೊದಲೇ ವೆಚ್ಚದ ಮಿತಿ ತಲುಪಿದರೆ, ಆಯೋಗವು ಅಭ್ಯರ್ಥಿ ಪ್ರಚಾರದ ಮೇಲೆ ನಿರ್ಬಂಧನೆ ಅಥವಾ ಅನರ್ಹತೆಗೂ ಶಿಫಾರಸು ಮಾಡಬಹುದು.

*ವೆಚ್ಚ ವೀಕ್ಷಕರು ಏಕೆ ಬೇಕು?

–ಅನಕ್ಷರತೆ ಹಾಗೂ ಮತದಾನದ ಮಹತ್ವ ಅರಿಯದ ಮತದಾರ ಆಮಿಷಕ್ಕೆ ಬಲಿಯಾಗಬಹುದು. ಇದು ಪ್ರಜಾಪ್ರಭುತ್ವಕ್ಕೆ ಅಪಾಯ. ಅದನ್ನು ತಡೆಯುವುದೇ ನಮ್ಮ ಉದ್ದೇಶ. ಇಲ್ಲಿ ದೇವರೇ ಅಭ್ಯರ್ಥಿಯಾದರೂ, ಹದ್ದಿನ ಕಣ್ಣಿಡುತ್ತೇವೆ. ಆಯೋಗದ ನಿರ್ದೇಶನದಂತೆ ಕೆಲಸ ಮಾಡುತ್ತೇವೆಯೇ ಹೊರತು, ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಡಿ ಅಲ್ಲ.

ಹಿಂದೆ ತೋಳ್ಬಲ, ದಬ್ಬಾಳಿಕೆಗಳಿದ್ದು ಪೊಲೀಸ್ಸಿಂಗ್ ಜವಾಬ್ದಾರಿ ಅಧಿಕವಾಗಿತ್ತು. ಅದೀಗ ಹಣದ ಆಮಿಷಕ್ಕೆ ತಿರುಗಿದೆ. ಹೀಗಾಗಿ, ‘ಆರ್ಥಿಕ ವ್ಯವಹಾರ’ದ ಮೇಲೆ ನಿಗಾ ಬೇಕಾಗಿದೆ.

*ತಂತ್ರಜ್ಞಾನ ಆಧರಿತ ವ್ಯವಹಾರದ ಮೇಲೆ ನಿಗಾ ಹೇಗೆ?

ಸಾಧ್ಯವಾದ ಎಲ್ಲ ತಂತ್ರಜ್ಞಾನಗಳನ್ನು ಬಳಸಿಕೊಂಡು, ವಿವಿಧ ಇಲಾಖೆ ಹಾಗೂ ಬ್ಯಾಂಕ್‌ಗಳ ನೆರವಿನ ಮೂಲಕ ನಿಗಾ ಇಟ್ಟಿದ್ದೇವೆ. ಆದರೆ, ಇ–ವ್ಯಾಲೆಟ್, ಇ–ಕಾಮರ್ಸ್‌ ಮೂಲಕ ಹಣ, ವಸ್ತುಗಳ ರವಾನೆ ಮೇಲೆ ನಿಗಾ ಇರಿಸುವ ಬಗ್ಗೆ ಆಯೋಗಕ್ಕೆ ಮನವಿ ಮಾಡಲಾಗುವುದು.

*ವೆಚ್ಚ ಪರಿಶೀಲನೆ ಹೇಗೆ ಮಾಡುತ್ತೀರಿ?

–ಅಭ್ಯರ್ಥಿಗಳು ಕಾರ್ಯಕ್ರಮಗಳಿಗೆ ಪರವಾನಗಿ ಪಡೆಯಬೇಕು. ಆಗ ಲೆಕ್ಕ ಸಿಗುತ್ತದೆ. ಉಳಿದಂತೆ ನಮ್ಮ ವಿಡಿಯೋ, ಸ್ಥಿರ, ಮೊಬೈಲ್ ಸರ್ವೇಕ್ಷಣಾ ತಂಡಗಳು, ಪೊಲೀಸ್‌ ವಿಶೇಷ ಘಟಕಗಳು ಸೇರಿದಂತೆ ವಿವಿಧ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ವಿವಿಧ ಇಲಾಖೆಗಳ ಗುಪ್ತಚರ ತಂಡಗಳಿವೆ. ಸೂಕ್ಷ್ಮ ಮಾಹಿತಿದಾರರು ಇದ್ದಾರೆ. ಸಣ್ಣ ಹಣಕಾಸು ಸಂಸ್ಥೆ, ಸ್ವಸಹಾಯ ಸಂಘಗಳ ಮೇಲೂ ನಿಗಾ ಇಡಲಾಗುವುದು. ಯಾವುದಾದರು ಸಂಘದವರು ಆಣೆ, ಪ್ರಮಾಣ, ಹಣ, ಭರವಸೆ ನೀಡಿದರೆ ದೂರು ನೀಡಿ. ಕ್ರಮ ಕೈಗೊಳ್ಳಲಾಗುವುದು.

*ಅಭ್ಯರ್ಥಿಯ ಎಲ್ಲ ವೆಚ್ಚಗಳು ಸಿಗಲು ಸಾಧ್ಯವೇ?

–ಅಭ್ಯರ್ಥಿ ಎಲ್ಲ ವ್ಯವಹಾರಗಳನ್ನು ಖಾತೆ ಮೂಲಕವೇ ನಡೆಸಬೇಕಾಗಿಲ್ಲ. ಅವರ ಏಜೆಂಟ್‌ಗಳು ಮೂರು ಲೇವಾದೇವಿ ಪುಸ್ತಕ ನಿರ್ವಹಿಸಿದರೆ, ನಾವೂ ಛಾಯಾ ಲೆಕ್ಕಪತ್ರ ಇಟ್ಟಿರುತ್ತೇವೆ. ಚುನಾವಣಾಧಿಕಾರಿ (ಜಿಲ್ಲಾಧಿಕಾರಿ) ತಂಡವು ನಿಗದಿ ಪಡಿಸಿದ ದರದ ಆಧಾರದಲ್ಲಿ ವೆಚ್ಚ ಹಾಕುತ್ತೇವೆ. ಈ ಕುರಿತು ಆರಂಭದಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಿದ್ದೇವೆ. ಈಗ ಕಾರ್ಯನಿರ್ವಹಿಸುತ್ತಿದ್ದೇವೆ. ಫಲಿತಾಂಶದ 25 ದಿನಗಳ ಬಳಿಕ ಬಂದು, ಲೆಕ್ಕಪತ್ರ ಪರಿಶೀಲಿಸುತ್ತೇವೆ.

*ಹಾವೇರಿ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ?

–ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಎಸ್ಪಿ ಕೆ.ಪರಶುರಾಂ ಉತ್ತಮ ಸಹಕಾರ ನೀಡುತ್ತಿದ್ದಾರೆ. ಯಾವುದೇ ಸಿಬ್ಬಂದಿ ವಿರುದ್ಧ ದೂರುಗಳಿಲ್ಲ. ಇಲ್ಲಿನ ಜನ ಕಾನೂನು ಮತ್ತು ಮಾನವೀಯತೆಯನ್ನು ಗೌರವಿಸುತ್ತಾರೆ. ಇದರಿಂದ ಎಲ್ಲ ಅಭ್ಯರ್ಥಿಗಳೂ ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೆಲದ ಗುಣ ಖುಷಿ ನೀಡಿದೆ.

*ಮತದಾರರಿಗೆ ಏನು ಹೇಳುತ್ತೀರಿ?

– ಮತದಾನ ಮಾಡಿ ಪ್ರಜಾಪ್ರಭುತ್ವ ಭದ್ರಗೊಳಿಸಿ. ನಿಮ್ಮ ಹಾಗೂ ದೇಶದ ಭವಿಷ್ಯವನ್ನು ನೀವೇ ನಿರ್ಧರಿಸಿ. ಹಣ, ಜಾತಿ, ಭರವಸೆಗಳ ಆಮಿಷ ಕೆಲ ದಿನಗಳಿಗೆ ಮಾತ್ರ. ಅದಕ್ಕಾಗಿ ನಿಮ್ಮನ್ನು ನೀವು ಮಾರಿಕೊಳ್ಳಬೇಡಿ. ಅಲ್ಲದೇ, ಅಕ್ರಮಗಳಲ್ಲಿ ಪಾಲ್ಗೊಳ್ಳಬೇಡಿ, ಪ್ರೋತ್ಸಾಹಿಸಬೇಡಿ, ಅದರ ಬಗ್ಗೆ ಮೌನವಾಗಿರಬೇಡಿ. ಅಕ್ರಮ ಕಂಡುಬಂದಲ್ಲಿ ನನ್ನ ಮೊಬೈಲ್‌ ಸಂಖ್ಯೆ(8277371892) ಅಥವಾ ವ್ಯಕ್ತಿಗತವಾಗಿ ದೂರು ನೀಡಿ. ಗೌಪ್ಯವಾಗಿಡಲಾಗುವುದು. ಪ್ರಜಾಪ್ರಭತ್ವ ನಿಮ್ಮ ಕೈಯಲ್ಲಿದೆ. ನಿರ್ಭೀತರಾಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT