ಸೋಮವಾರ, ಸೆಪ್ಟೆಂಬರ್ 23, 2019
24 °C
ಕೈದಿಗಳಿಗೆ ಸೋದರಿಯರಾದ ಬ್ರಹ್ಮಕುಮಾರಿಯರು; ಕಾರಾಗೃಹದ ಮುಂದೆ ಭಾವನಾತ್ಮಕ ಕ್ಷಣಗಳು

ಜೈಲಲ್ಲಿ ಅಣ್ಣ, ರಾಖಿ ಕಟ್ಟಲಾಗದೆ ಮರುಗಿದ ತಂಗಿ!

Published:
Updated:
Prajavani

ಹಾವೇರಿ: ಜೈಲಿನೊಳಗೆ ಬಂದಿಯಾಗಿದ್ದ ಅಣ್ಣ. ಆತನಿಗೆ ರಾಖಿ ಕಟ್ಟಲೆಂದು ಹೊರಗೆ ಕಾಯುತ್ತಿದ್ದ ತಂಗಿ. ಅದಕ್ಕೆ ಅವಕಾಶ ನೀಡಲು ಅಡ್ಡಿಯಾಗಿದ್ದ ಜೈಲು ನಿಯಮಗಳು. ಆ ಹೆಣ್ಣು ಮಗಳ ಕಣ್ಣೀರ ಕಂಡು ಮಮ್ಮಲ ಮರುಗಿದ ಜೈಲು ಸಿಬ್ಬಂದಿ. ಕೊನೆಗೆ ಆ ಬಂದಿಗೆ ಸೋದರಿಯರಾಗಿ ಬಂದ ನಾಲ್ವರು ಬ್ರಹ್ಮಕುಮಾರಿಯರು...!

ಹಾವೇರಿ ಉಪ ಕಾರಾಗೃಹದ ಆವರಣ ಗುರುವಾರ ಇಂತಹ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಪ್ರೀತಿ–ಮಮತೆಯನ್ನು ಸೇರಿಸಿ ತಾನೇ ಹೊಸೆದಿದ್ದ ರಕ್ಷಾ ಬಂಧನ ಅಣ್ಣನ ಕೈಗೆ ಬೀಳದಿದ್ದರೂ, ಬ್ರಹ್ಮಕುಮಾರಿಯರು ತಂದಿದ್ದ ನಾಲ್ಕು ರಾಖಿಗಳು ಸೋದರನ ಕೈಸೇರಿದ ವಿಷಯ ಕೇಳಿ ಆ ತಂಗಿಗೆ ಎಲ್ಲಿಲ್ಲದ ಖುಷಿ. ‘ಹೇಗೋ ನನ್ನಣ್ಣನಿಗೆ ಸೋದರಿಯರ ಪ್ರೀತಿ ಸಿಕ್ಕಿತಲ್ಲ. ಅಷ್ಟೇ ಸಾಕು. ಆತ ಬಿಡುಗಡೆಯಾಗಿ ಬಂದ ದಿನ, ಇದೇ ರಾಖಿ ಕಟ್ಟುತ್ತೇನೆ...’ ಎಂದು ಕಣ್ಣೊರೆಸಿಕೊಳ್ಳುತ್ತಲೇ ಊರಿನ ಕಡೆಗೆ ಹೊರಟರು.

ಶಿಗ್ಗಾವಿ ತಾಲ್ಲೂಕು ಶಿವಪುರ ತಾಂಡದ ಗೀತಾ, ಪ್ರತಿ ರಕ್ಷಾಬಂಧನಕ್ಕೂ ಅಣ್ಣ ಸೋಮಲಪ್ಪನಿಗೆ ರಾಖಿ ಕಟ್ಟಿ ಉಡುಗೊರೆ ಪಡೆಯುತ್ತಿದ್ದರು. ಗ್ರಾಮದಲ್ಲಿ ಎಮ್ಮೆಗಳನ್ನು ಕಳವು ಮಾಡಿದ ಆರೋಪ ಹೊತ್ತು ಸೋಮಲಪ್ಪ 15 ದಿನಗಳ ಹಿಂದೆ ಜೈಲು ಸೇರಿದ್ದಾರೆ. ‘ಹೇಗಾದರೂ ಸರಿ, ಈ ವರ್ಷವೂ ಅಣ್ಣನಿಗೆ ನಾನೇ ಮೊದಲ ರಾಖಿ ಕಟ್ಟಬೇಕು’ ಎಂದು ಗೀತಾ ಬೆಳಿಗ್ಗೆ 10 ಗಂಟೆಗೇ ಜೈಲಿನ ಬಳಿ ಬಂದಿದ್ದರು.

ರಾಖಿಯ ಜತೆಗೆ ನಾಗರ ಪಂಚಮಿ ಹಬ್ಬಕ್ಕೆ ಮಾಡಿದ್ದ ಉಂಡಿ, ಚಕ್ಕುಲಿ, ಕೋಡುಬಳಿ ಹಾಗೂ ಸಿಹಿತಿಂಡಿಗಳನ್ನೂ ತಂದಿದ್ದರು. ಸುಮಾರು ಒಂದೂವರೆ ತಾಸು ಸಿಬ್ಬಂದಿಗೆ ಗೋಗರೆದರೂ ಅವರು ಒಳಗೆ ಬಿಡಲಿಲ್ಲ. ‘ಸರ್ಕಾರಿ ರಜೆ ದಿನವಿರುವ ಕಾರಣ ಈ ದಿನ ಯಾರನ್ನೂ ಒಳಗೆ ಬಿಡುವಂತಿಲ್ಲ. ಹೊರಗಿನ ಆಹಾರವನ್ನೂ ಕೈದಿಗಳಿಗೆ ಕೊಡುವಂತಿಲ್ಲ. ಸಿ.ಸಿ ಟಿ.ವಿ ಕ್ಯಾಮೆರಾ ಬೇರೆ ಇದೆ. ದಯವಿಟ್ಟು ನಮ್ಮನ್ನು ಕ್ಷಮಿಸಮ್ಮ’ ಎಂದು ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ‘ಪ್ರಜಾವಾಣಿ’ ಜತೆ ಮಾತನಾಡಿದ ಗೀತಾ, ‘ಅಣ್ಣ ಯಾವತ್ತೂ ಪೊಲೀಸ್ ಠಾಣೆಯ ಮೆಟ್ಟಿಲು ಏರಿದವನಲ್ಲ. ಈಗ ಹಣೆಬರಹ ಅವನು ಜೈಲಿನೊಳಗೆ ಸೇರುವಂತೆ ಮಾಡಿದೆ. ಈ ಬೆಳವಣಿಗೆಯಿಂದ ಖಂಡಿತಾ ಅವನು ಹೆದರಿರುತ್ತಾನೆ. ಈ ರಾಖಿ ಕಟ್ಟಿ, ನಿನ್ನ ರಕ್ಷಣೆಗೆ ನಾನಿದ್ದೇನೆ ಎಂದು ಧೈರ್ಯ ತುಂಬಬೇಕಿತ್ತು’ ಎನ್ನುವಾಗ ಅವರ ಕಣ್ಣಾಲಿಗಳು ತುಂಬಿದ್ದವು.

‘ಒಳಗೆ ಬಿಡಬಹುದೆಂದು ಸುಮಾರು ಹೊತ್ತು ಕಾದೆ. ಆದರೆ, ಅವಕಾಶ ಸಿಗಲಿಲ್ಲ. ಜೈಲು ಸಿಬ್ಬಂದಿ ಸಹ ನಿಯಮ ಮೀರಿ ನಡೆದುಕೊಳ್ಳಲು ಆಗುವುದಿಲ್ಲ. ಹಾಗೆ ಮಾಡಿದರೆ, ಪಾಪಾ ಅವರ ಕೆಲಸ ಹೋಗುತ್ತದೆ. ಪ್ರತಿವರ್ಷ ಯಾರೋ ಕಾರಾಗೃಹಕ್ಕೆ ಬಂದು, ಎಲ್ಲ ಕೈದಿಗಳಿಗೂ ರಾಖಿ ಕಟ್ಟುತ್ತಾರಂತೆ. ನನ್ನ ಅಣ್ಣನ ಕೈಗೂ ಒಂದು ರಾಖಿ ಬಿದ್ದರೆ ಸಾಕು’ ಎನ್ನುತ್ತ ಭಾವುಕರಾದರು. ಇದೇ ವೇಳೆ ಮಳೆ ಶುರುವಾಗಿದ್ದರಿಂದ ಗೀತಾ ಜೈಲು ಆವರಣದಿಂದ ಹೊರಟರು.

165 ಕೈದಿಗಳಿಂದ ಪ್ರತಿಜ್ಞೆ!

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಲೀಲಾಜಿ ನೇತೃತ್ವದ ಅಕ್ಕಂದಿರ ತಂಡವು, ಎಲ್ಲ ವಿಚಾರಣಾದೀನ ಕೈದಿಗಳಿಗೂ ರಾಖಿ ಕಟ್ಟಲೆಂದೇ ಹಿರಿಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆದಿತ್ತು.

ಎಲ್ಲ 165 ಕೈದಿಗಳಿಗೂ ರಾಖಿ ಕಟ್ಟಿ ಸಿಹಿ ಹಂಚಿದ ಅವರು, ‘ದುರ್ನಡತೆ ತೋರುವುದಿಲ್ಲ. ದುಶ್ಚಟಗಳಿಗೆ ದೂರ ಇರುತ್ತೇವೆ. ದುರ್ಜನರ ಸಂಗ ಮಾಡುವುದಿಲ್ಲ. ದುರ್ಮಾರ್ಗಗಳಲ್ಲಿ ನಡೆಯುವುದಿಲ್ಲ’ ಎಂಬ ಪ್ರತಿಜ್ಞೆಗಳನ್ನೂ ಮಾಡಿಸಿಕೊಂಡರು.

ಕೈದಿಗಳಿಗೆ ನಾವೇ ಸೋದರಿಯರು

‘ರಕ್ಷಾಬಂಧನದ ದಿನ ಸಹೋದರನ ಮುಂಗೈಗೆ ರಾಖಿ ಕಟ್ಟುವ ಸಹೋದರಿ, ಆರತಿ ಮಾಡಿ ಆಶೀರ್ವಾದ ಪಡೆಯುತ್ತಾಳೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ಈ ಹಬ್ಬ ದಟ್ಟಗೊಳಿಸುತ್ತದೆ. ಅಣ್ಣ–ತಂಗಿಯರ ನಡುವಿನ ಬಾಂಧವ್ಯವನ್ನು ಪ್ರತಿಯೊಬ್ಬರು ಸ್ಮರಿಸುವ ದಿನವಿದು. ‘ಈ ಸಲ ತಂಗಿಯಿಂದ ರಾಖಿ ಕಟ್ಟಿಸಿಕೊಳ್ಳಲು ಆಗಲಿಲ್ಲ’ ಎಂಬ ಬೇಸರ ಯಾವ ಕೈದಿಗೂ ಬರಬಾರದೆಂದು ನಾವೇ ಸೋದರಿಯರಾಗಿ ಬಂದಿದ್ದೇವೆ’ ಎಂದು ಲೀಲಾಜಿ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)