‘ಮೈತ್ರಿ’ಯಲ್ಲಿ ಅಸಮಾಧಾನ; ಉಪಚುನಾವಣೆಯಲ್ಲಿ ಸ್ಫೋಟ, ಬಿಎಸ್‌ವೈ ಸಿಎಂ–ಈಶ್ವರಪ್ಪ

7

‘ಮೈತ್ರಿ’ಯಲ್ಲಿ ಅಸಮಾಧಾನ; ಉಪಚುನಾವಣೆಯಲ್ಲಿ ಸ್ಫೋಟ, ಬಿಎಸ್‌ವೈ ಸಿಎಂ–ಈಶ್ವರಪ್ಪ

Published:
Updated:

ಹಾವೇರಿ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಲ್ಲಿ ಮೊದಲಿನಿಂದಲೇ ಆಂತರಿಕ ಅಸಮಾಧಾನವಿದ್ದು, ಉಪಚುನಾವಣೆಯಲ್ಲಿ ಸ್ಫೋಟಗೊಳ್ಳಲಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

‘ಈಗಾಗಲೇ ಬಹಿರಂಗವಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರವೇ ಬಿದ್ದು ಹೋಗಿ, ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಇಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಭವಿಷ್ಯ ನುಡಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗೆಲುವು ಖಚಿತ ಎಂದ ಅವರು, ‘ಮಧು ಬಂಗಾರಪ್ಪ ಅಭ್ಯರ್ಥಿ’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು ಹೇಳುತ್ತಿದ್ದಾರೆ. ಆದರೆ, ಮಧು ವಿದೇಶ ಪ್ರವಾಸದಲ್ಲಿದ್ದಾರೆ. ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಇಲ್ಲ ಎಂದು ವ್ಯಂಗ್ಯವಾಡಿದರು. 

ಮುಂದಿನ ಬಾರಿಯೂ ಮುಖ್ಯಮಂತ್ರಿಯಾಗಿ ದಸರಾ ಉದ್ಘಾಟಿಸುವುದಾಗಿ ಕಳೆದ ವರ್ಷ ಹೇಳಿಕೆ ನೀಡಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮ್ಯಯನವರು ನಾಪತ್ತೆಯಾಗಿದ್ದಾರೆ. ಅವರನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹುಡುಕಿ ತರಬೇಕು ಎಂದು ಟಾಂಗ್ ನೀಡಿದರು. 

ರೈತರ ಸಾಲಮನ್ನಾ ಮಾಡುವುದಾಗಿ ಸ್ವತಃ ಘೋಷಣೆ ಮಾಡಿಕೊಂಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈಗ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ಗೆ ಗತಿ ಇಲ್ಲದ ಕಾರಣ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಕುಮಾರಸ್ವಾಮಿ, ದೇವೇಗೌಡರು ಮತ್ತು ರೇವಣ್ಣ ಅಧಿಕಾರ ನಡೆಸುತ್ತಿದ್ದಾರೆ ಎಂದರು.

ಗದಗದ ಲಕ್ಷ್ಮೇಶ್ವರದಲ್ಲಿ ನಡೆಯುತ್ತಿರುವ ‘ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ’ಕ್ಕೆ ತೆರಳುತ್ತಿದ್ದ ಶಿವಮೊಗ್ಗ ಜಿಲ್ಲೆಯ ಭಕ್ತರು ಶನಿವಾರ ನಗರದ ಸಿಂಧಗಿ ಮಠಕ್ಕೆ ಭೇಟಿ ನೀಡಿದರು. ಅವರನ್ನು ಭೇಟಿಯಾದ ಕೆ.ಎಸ್. ಈಶ್ವರಪ್ಪ ಶುಭ ಹಾರೈಸಿದರು. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !