ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಟ್ರಾನ್ಸ್‌ಜೆಂಡರ್‌ ಮಾಲೀಕತ್ವದಲ್ಲಿ ರೆಸ್ಟೋರೆಂಟ್‌ ಸ್ಥಾಪನೆ

ಹಾವೇರಿ ಜಿಲ್ಲೆಯಲ್ಲಿ ಪೈಲಟ್‌ ಯೋಜನೆ: ಸಿಇಒ ಮೊಹಮ್ಮದ್‌ ರೋಶನ್‌ ಹೇಳಿಕೆ
Last Updated 15 ಸೆಪ್ಟೆಂಬರ್ 2022, 14:42 IST
ಅಕ್ಷರ ಗಾತ್ರ

ಹಾವೇರಿ:ಲಿಂಗತ್ವ ಅಲ್ಪಸಂಖ್ಯಾತರಿಗೆ (ಟ್ರಾನ್ಸ್‌ಜೆಂಡರ್‌) ಉದ್ಯೋಗಾವಕಾಶ ದೊರಕಿಸಲು ಜಿಲ್ಲೆಯಲ್ಲಿ ವಿನೂತನ ಹಾಗೂ ವಿಶೇಷವಾದ ಮಾದರಿ ಯೋಜನೆ ರೂಪಿಸಲಾಗಿದೆ. ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮಾಲೀಕತ್ವದಲ್ಲಿ ‘ರೆಸ್ಟೋರೆಂಟ್’ ಆರಂಭಿಸಲು ಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಹೇಳಿದರು.

ಜಿಲ್ಲಾ ಪಂಚಾಯಿತಿಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಆಯೋಜಿಸಲಾದ ಕರ್ನಾಟಕ ಟ್ರಾನ್ಸ್‌ಜೆಂಡರ್‌ ನೀತಿ-2017ರ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಕಾರವಾರ ಜಿಲ್ಲೆಗೆ ಕಳುಹಿಸಿ ತರಬೇತಿ ನೀಡಲಾಗಿದೆ. ಶಿಗ್ಗಾವಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಾಗ ಗುರುತಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಂದಾಜು ₹1 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲು ರೂಪುರೇಷೆ ತಯಾರಿಸಲಾಗಿದೆ. ಶೀಘ್ರವೇ ಕಟ್ಟಡ ಕಾಮಗಾರಿ ಆರಂಭಿಸಿ ಬೇಸಿಗೆ ಆರಂಭದಲ್ಲಿ ರೆಸ್ಟೋರೆಂಟ್ ಆರಂಭಿಸಲಾಗುವುದು.ಇದು ರಾಜ್ಯದಲ್ಲೇ ಪೈಲೆಟ್ ಯೋಜನೆಯಾಗಲಿದೆ. ಇದರೊಂದಿಗೆ ಈ ಸಮುದಾಯಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಒಂದು ಎಕರೆ ಜಮೀನು ಮಂಜೂರು:

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರಿಗೆ ಎಲ್ಲ ರಂಗಗಳಲ್ಲಿ ಮುಕ್ತವಾದ ಪ್ರವೇಶ ಕಲ್ಪಿಸಲಾಗಿದೆ. ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸಮುದಾಯದ ಆರ್ಥಿಕ ಸ್ವಾವಲಂಬನೆಗೆ ಆರ್ಥಿಕ ಚಟುವಟಿಕೆ ನಡೆಸಲು ಹೆದ್ದಾರಿಗೆ ಹೊಂದಿಕೊಂಡಂತೆ ಶೀಘ್ರವೇ ಒಂದು ಎಕರೆ ಜಮೀನು ಮಂಜೂರಾತಿ ನೀಡಲಾಗುವುದು’ ಎಂದು ಹೇಳಿದರು.

ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿವಿಧ ವಸತಿ ಯೋಜನೆಯಡಿ ನಿವೇಶನ ಮತ್ತು ವಸತಿ ಹಂಚಿಕೆಯಲ್ಲಿ ಈ ವರ್ಗಕ್ಕೆ ಆದ್ಯತೆ ನೀಡಲು ನಿರ್ದೇಶನ ನೀಡಲಾಗುವುದು. ಆಸ್ಪತ್ರೆಗಳಲ್ಲಿ ಪ್ರತ್ಯೇಕ ತಪಾಸಣೆಗೆ ಸೂಚಿಸಲಾಗುವುದು, ಈ ವರ್ಗದ ಸಂಪರ್ಕಕ್ಕೆ ಬರುವ ವಿವಿಧ ಇಲಾಖೆ ಅಧಿಕಾರಿಗಳು ಗೌರವಯುತವಾಗಿ ಟ್ರಾನ್ಸ್ ಜೆಂಡರ್‌ಗಳನ್ನು ನಡೆಸಿಕೊಳ್ಳಬೇಕು. ಯೋಜನೆಗಳ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಸಮಾನವಾಗಿ ಬದುಕುವ ಹಕ್ಕನ್ನು ರೂಪಿಸಿಕೊಡಬೇಕು, ಸಹಾನುಭೂತಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಸೌಲಭ್ಯಗಳು ಸಾಕಾಗುತ್ತಿಲ್ಲ: ಅಕ್ಷತಾ

ಸಂಜೀವಿನಿ ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷೆ ಅಕ್ಷತಾ ಕೆ.ಸಿ. ಮಾತನಾಡಿ, ‘ಸರ್ಕಾರ ನೀಡುವ ಸೌಲಭ್ಯಗಳು ಸಾಕಾಗುತ್ತಿಲ್ಲ. ಕೇವಲ ₹600 ಗೌರವಧನ ನೀಡಲಾಗುತ್ತಿದೆ. ಸ್ವ ಉದ್ಯೋಗಕ್ಕಾಗಿ ₹30 ಸಾವಿರ ನೀಡಲಾಗುತ್ತದೆ. ರೇಷನ್ ಕಾರ್ಡ್ ನೀಡುತ್ತಿಲ್ಲ. ವಸತಿ ಸೌಕರ್ಯ ನೀಡುತ್ತಿಲ್ಲ, ಆಸ್ಪತ್ರೆಗಳಲ್ಲಿ ಅವಮಾನಿಸಲಾಗುತ್ತಿದೆ. ವಿವಿಧ ಇಲಾಖೆಗಳ ಸೌಲಭ್ಯಗಳು ದೊರಕುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ನೀಗಿಸಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿಕೊಂಡರು.

ಅಕ್ಷತಾ ಕೆ.ಸಿ., ಮಹಮ್ಮದ್ ಹುಸೇನ್ ನರೇಗಲ್ ಹಾಗೂ ಸಾಕ್ಷಿ ಸಿದ್ದಪ್ಪ ಅವರಿಗೆ ‘ಟ್ರಾನ್ಸ್ ಜೆಂಡರ್’ ಗುರುತು ಪತ್ರ ವಿತರಿಸಲಾಯಿತು. ಹಿರಿಯ ಸಿವಿಲ್‌ ನ್ಯಾಯಾಧೀಶ ಪುಟ್ಟರಾಜು ಮಾತನಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಹಾಗೂ ಸಂಜೀವಿನಿ ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆ ಕಾರ್ಯದರ್ಶಿ ಆರಾಧನಾ ಜೆ.ವಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT