ಶುಕ್ರವಾರ, ಡಿಸೆಂಬರ್ 4, 2020
21 °C
180 ಸ್ಫೋಟಕ ಟ್ಯೂಬ್‌ ಹಾಗೂ ಬೈಕ್‌ ವಶ: ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲು

ಸ್ಫೋಟಕ ಅಕ್ರಮ ಸಾಗಣೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಜಾರ್ಖಂಡ್‌ ಮೂಲದ 24 ವರ್ಷದ ಅಜಯಕುಮಾರ ಯಾದವ ಎಂಬ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬ್ಯಾಡಗಿ ಠಾಣಾ ವ್ಯಾಪ್ತಿಯ ಛತ್ರದಿಂದ ಆಲಗೇರಿ ಕಡೆಗೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಆರೋಪಿಯು ಒಂದು ರಟ್ಟಿನ ಬಾಕ್ಸ್‌ನಲ್ಲಿ 180 ಸ್ಫೋಟಕ ಟ್ಯೂಬ್‌ ಮತ್ತು ವೈರುಗಳನ್ನು ಕಾನೂನುಬಾಹಿರವಾಗಿ ಸಾಗಿಸುತ್ತಿದ್ದ. ಇದನ್ನು ಗಮನಿಸಿದ ಆಂತರಿಕ ಭದ್ರತಾ ವಿಭಾಗದ ಹಾವೇರಿ-ಗದಗ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಆತನನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಜಾರ್ಖಂಡ ರಾಜ್ಯದ ಕೊಡೆರ್ಮಾ ತಾಲ್ಲೂಕಿನ ಚೋಪ್ನಾದಿ ವಾಸಿಯಾಗಿದ್ದು, ವೆಂಕಟಾಪುರ ಗುತ್ತಿಗೆದಾರ ಕುಮಾರ ಕೆ.ಕಬ್ಬೂರ ಅವರ ಕ್ರಷರ್ ಉಸ್ತುವಾರಿ ನೋಡಿಕೊಳ್ಳುವ ರಾಣೆಬೆನ್ನೂರಿನ ಮಾಲತೇಶ ಎಂಬುವವರಿಂದ ಪಡೆದುಕೊಂಡಿದ್ದು, ಕ್ವಾರಿಗಳಲ್ಲಿ ಸ್ಪೋಟಕಗಳನ್ನು ಬಳಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ. 

ಸ್ಥಳದಲ್ಲಿ ದೊರೆತ ಸ್ಫೋಟಕ ಸಾಮಗ್ರಿಗಳನ್ನು ಹಾಗೂ ಸಾಗಾಣಿಕೆಗೆ ಬಳಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ದಾಳಿಯಲ್ಲಿ ಆಂತರಿಕ ಭದ್ರತಾ ವಿಭಾಗದ ಹಾವೇರಿ-ಗದಗ ಘಟಕದ ಪೊಲೀಸ್ ನಿರೀಕ್ಷಕ ಈರಯ್ಯಾ ಎಂ.ಮಠಪತಿ, ಸಿಬ್ಬಂದಿ ಅನಿಲ್‍ಕುಮಾರ ಬಿಜಾಪುರ, ಎಂ.ಎಚ್.ಗುಡಗೂರ, ಸುನಿಲ್ ಹುಚ್ಚಣ್ಣವರ, ಶಿವಮೂರ್ತಿ ಕುರಿ, ದುರ್ಗಪ್ಪ ಕೊಡ್ಲೇರ ಭಾಗವಹಿಸಿದ್ದರು. 

ವಿವಿಧ ಅಂಗಡಿಗಳ ಮೇಲೆ ದಾಳಿ

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ಶನಿವಾರ ರಟ್ಟೀಹಳ್ಳಿ ಪಟ್ಟಣ ಹಾಗೂ ಚಿಕ್ಕಬಾಸೂರ ಗ್ರಾಮದ ವಿವಿಧ 23 ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಸೂಲಿ ಮಾಡಿದೆ.

ತಂಬಾಕು ನಿಯಂತ್ರಣ ಕಾಯ್ದೆ-2003ರ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮತ್ತು ನೇರ-ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶಾಲಾ-ಕಾಲೇಜು ಆವರಣದ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿ, ಬೇಕರಿ, ಹೋಟೆಲ್ ಮತ್ತು ಹೋಲ್‍ಸೇಲ್ ಅಂಗಡಿ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ತಂಬಾಕು ನಿಯಂತ್ರಣ ಕಾಯ್ದೆಯಡಿ ₹2150 ದಂಡ ವಸೂಲಿ ಮಾಡಲಾಗಿದೆ.

ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರರಾದ ಡಾ.ಸಂತೋಷ ದಡ್ಡಿ, ದಾದಾಪೀರ ಹುಲಿಕಟ್ಟಿ, ವೈದ್ಯಾಧಿಕಾರಿ ಡಾ.ಕೋಲೇಶಕುಮಾರ, ಆರೋಗ್ಯ ಸಹಾಯಕ ಬಿ.ಎಚ್.ದುಗ್ಗತ್ತಿ, ಪ್ರಭು ಕೆಂಚೆಳ್ಳೆರ, ಪ್ರಶಾಂತ ಎಚ್., ಬಸವನಗೌಡ ಎಚ್.ಎಲ್., ವೈ.ಎಂ.ಹಿರೆಯಕ್ಕನವರ ಹಾಗೂ ನಾಗರಾಜ ಪ್ಯಾಟಿ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.