ಶನಿವಾರ, ಮೇ 28, 2022
26 °C
ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಲು ಆಗ್ರಹ

ಅಂಗವಿಕಲ ಮಕ್ಕಳಿಗೆ ಸೌಲಭ್ಯ ಕಲ್ಪಿಸಿ: ಸಾಮಾಜಿಕ ಪರಿವರ್ತನಾ ಜನಾಂದೋಲನ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕಿಶೋರಿಯರ, ಅಂಗವಿಕಲರ ಹಾಗೂ ಅಪೌಷ್ಟಿಕ ಮಕ್ಕಳ ವಿಕಸನ ಮತ್ತು ಶಿಕ್ಷಣದ ಹಕ್ಕುಗಳನ್ನು ಸಂರಕ್ಷಿಸಲು ಒತ್ತಾಯಿಸಿ ಸಾಮಾಜಿಕ ಪರಿವರ್ತನಾ ಜನಾಂದೋಲನದ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್‌ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. 

ಸಾಮಾಜಿಕ ಪರಿವರ್ತನಾ ಜನಾಂದೋಲನ ಜಿಲ್ಲಾ ಮುಖ್ಯಸ್ಥೆ ಹಸೀನಾ ಹೆಡಿಯಾಲ ಮಾತನಾಡಿ, ‘ಮಕ್ಕಳ ಜೀವನದಲ್ಲಿ ತಾರುಣ್ಯಾವಸ್ಥೆಯು ಪರಿವರ್ತನೆಯ ಹಂತವಾಗಿದೆ. ಈ ವಯೋಮಾನವು ಮಕ್ಕಳ ಭವಿಷ್ಯದ ಅಡಿಗಲ್ಲಾಗಿದ್ದು ಅವರಿಗೆ ಅಗತ್ಯ ಗಮನಹರಿಸಿ ಬೆಂಬಲ ನೀಡಬೇಕಿರುವುದು ಅಗತ್ಯವಾಗಿದೆ ಎಂದು ಮನವಿ ಮಾಡಿದರು. 

ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ‘ಮಕ್ಕಳ ಹಕ್ಕುಗಳು ಮತ್ತು ನೀವು’ ಸಂಸ್ಥೆಯು ತನ್ನ ಸಹಭಾಗಿ ಸಂಘಟನೆಗಳ ಜೊತೆಗೂಡಿ ತಳಮಟ್ಟದ ಈ ಧ್ವನಿಗಳನ್ನು ಮುನ್ನೆಲೆಗೆ ತಂದು ದೇಶದ ಭವಿಷ್ಯದ ಹಿತದೃಷ್ಟಿಗೆ ಪೂರಕವಾದ ರೀತಿಯಲ್ಲಿ ಸಂಘಟಿತ ಪ್ರಯತ್ನವನ್ನು ಮಾಡಲು ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು. 

12ರಿಂದ 18 ವರ್ಷದ ಕಿಶೋರಿಯರಿಗೆ ಕೊಡಬೇಕಿದ್ದ ಸಾನಿಟೈರಿ ಪ್ಯಾಡ್‌ಗಳನ್ನು ಕೋವಿಡ್ ಕಾರಣಕ್ಕೆ ಎರಡು ವರ್ಷದಿಂದ ಕೊಡುತ್ತಿಲ್ಲ. ಕೂಡಲೇ ಎಲ್ಲಾ ಕಿಶೋರಿಯರಿಗೆ ಪ್ಯಾಡ್‌ ವ್ಯವಸ್ಥೆ ಮಾಡಬೇಕು. ಥಲಸ್ಸಿಮಿಯಾ ಕಾಯಿಲೆ ಪೀಡಿತ ಮಕ್ಕಳಿಗೆ ಅವಶ್ಯಕವಾಗಿ ನೀಡುತ್ತಿದ್ದ ಔಷಧ ಮತ್ತು ವೈದ್ಯಕೀಯ ಪ್ರಮಾಣಪತ್ರವನ್ನು ಜಿಲ್ಲಾ ವೈದ್ಯಕೀಯ ಸಂಸ್ಥೆ ವಿತರಿಸುತ್ತಿಲ್ಲ. ಕೂಡಲೇ ಅಗತ್ಯ ಆರೋಗ್ಯ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಅನುದಾನದ ನೆಪವೊಡ್ಡಿ ಸೈಕಲ್ ವಿತರಣೆ ಸ್ಥಗಿತಗೊಂಡಿದೆ. ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದ ಜೊತೆಗೆ ಮಕ್ಕಳಿಗೆ ಮೊಟ್ಟೆ ಕೊಡಬೇಕು. ಜಿಲ್ಲೆಯಲ್ಲಿ ಅನೇಕ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಕೂಡಲೇ ಸ್ವಂತ ಕಟ್ಟಡ ನಿರ್ಮಿಸಿ, ಮಕ್ಕಳಿಗೆ ಆಟದ ಮೈದಾನ, ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಒದಗಿಸಬೇಕು ಎಂದು ಆಗ್ರಹಿಸಿದರು.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಹತ್ಯೆಯಂತಹ ಹೇಯ ಕೃತ್ಯಗಳು ನಿತ್ಯ ವರದಿಯಾಗುತ್ತಿದ್ದು, ನಿರ್ಜನ ಪ್ರದೇಶದಲ್ಲಿ ಬದುಕುತ್ತಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದರು. 

ಜಿಲ್ಲೆಯ ಅಂಗವಿಕಲ ಹಾಗೂ ಅಪೌಷ್ಟಿಕ ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಒಳಗೊಂಡ ಬೇಡಿಕೆ ಪಟ್ಟಿಯನ್ನು ಅಧಿಕಾರಿಗಳಿಗೆ ಸಲ್ಲಿಸಿದರು. ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವುದಾಗಿ ಭರವಸೆ ನೀಡಿದರು. 

ಡಿವೈಎಫ್‌ಐ ಸಂಘಟನೆಯ ಬಸವರಾಜ ಪೂಜಾರ, ರೇಣುಕಾ ಕಹಾರ, ಖಲಂದರ್ ಅಲ್ಲಿಗೌಡರ, ಶಶಿಧರ ಬಂಗಾರಿ, ಶೆಟ್ಟಿ ವಿಭೂತಿ ಹಾಗೂ ಅಂಗವಿಕಲ ಮಕ್ಕಳು ಮತ್ತು ಕಿಶೋರಿಯರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು