ರೈತ ಜಾಗೃತಿ ಕಾರ್ಯಕ್ರಮ

7

ರೈತ ಜಾಗೃತಿ ಕಾರ್ಯಕ್ರಮ

Published:
Updated:
ಕುಮಾರಪಟ್ಟಣ ಸಮೀಪದ ಕರೂರು ಗ್ರಾಮದಲ್ಲಿ ನಡೆದ ಸಿರಿಧಾನ್ಯ ಬೆಳೆ ಪದ್ದತಿ ಹಾಗೂ ರೈತ ಜಾಗೃತಿ ತರಬೇತಿ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಎಂ.ಎಸ್. ಈಶ್ವರ್ ಮಾತನಾಡಿದರು

ಕುಮಾರಪಟ್ಟಣ: ‘ಸಾವಯವ ಕೃಷಿಪದ್ಧತಿ ಮೂಲಕ ಸಿರಿ ಧಾನ್ಯ ಬೆಳೆಯುವುದರಿಂದ ಖರ್ಚು ಕಡಿಮೆಯಾಗಿ ಹೆಚ್ಚು ಆದಾಯ ಸಿಗುತ್ತದೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಂ.ಎಸ್.ಈಶ್ವರ್ ಹೇಳಿದರು.

ಇಲ್ಲಿಗೆ ಸಮೀಪದ ಕರೂರು ಗ್ರಾಮದಲ್ಲಿ ಇತ್ತೀಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ‘ಸಿರಿಧಾನ್ಯ ಬೆಳೆ ಪದ್ಧತಿ ಹಾಗೂ ರೈತ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಈಗ ಪ್ರತಿಯೊಂದಕ್ಕೂ ರಾಸಾಯನಿಕಗಳನ್ನು ಬಳಕೆ ಸಾಮಾನ್ಯವಾಗಿದೆ. ಹೀಗಾಗಿ ಮಣ್ಣು ಸಾರ ಕಳೆದುಕೊಂಡು ಆಹಾರ ಕೂಡ ವಿಷಕಾರಿ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿ ಮಾರ್ಗದರ್ಶಕ ನೇಮನಗೌಡ, ಕೊಡಿಯಾಲ ವಲಯದ ಮೇಲ್ವಿಚಾರಕಿ ರೇಣುಕಾಬಾಯಿ, ಸೇವಾ ಪ್ರತಿನಿಧಿ ನಲಮ್ಮ ಹಾಗೂ ಒಕ್ಕೂಟದ ಪದಾಧಿಕಾರಿಗಳು ಇದ್ದರು.

**

‌ಮುದೇನೂರು: ವಿಶ್ವ ಯೋಗ ದಿನಾಚರಣೆ

ಕುಮಾರಪಟ್ಟಣ: ‘ಯೋಗ ಮಾಡಿ ಸದೃಢ ಆರೋಗ್ಯ ಹೊಂದಿರಿ’ ಎಂದು ನಿವೃತ್ತ ಉಪನ್ಯಾಸಕ ಚಂದ್ರಶೇಖರ್ ಹೇಳಿದರು.

ಇಲ್ಲಿಗೆ ಸಮೀಪದ ಮುದೇನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ
ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಶಿಕ್ಷಕಿ ಅನ್ನಪೂರ್ಣ ಪಾಟೀಲ, ರುದ್ರಮುನಿ ರಾಮಕ್ಕನವರ, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

**

ಉದಾಸಿಗೆ ಸನ್ಮಾನ

ಹಾನಗಲ್: ಪಟ್ಟಣದ ಸೋಮವಂಶಿ ಕ್ಷತ್ರಿಯ ಸಮಾಜದ ವತಿಯಿಂದ ಬುಧವಾರ ಇಲ್ಲಿನ ಕುಮಾರೇಶ್ವರ ನಗರದ ಅಂಬಾ ಭವಾನಿ ದೇಗುಲದಲ್ಲಿ ಶಾಸಕ ಸಿ.ಎಂ.ಉದಾಸಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಮಾತನಾಡಿದ ಶಾಸಕ ಉದಾಸಿ, ‘ಮೊದಲಿನಷ್ಟು ಕೆಲಸ ಮಾಡಲು ದೇಹ ಸ್ಪಂದಿಸುತ್ತಿಲ್ಲ. ಇದು ಕೊನೆ ಚುನಾವಣೆ ಎಂದು ಘೋಷಿಸಿಕೊಂಡಿದ್ದೇನೆ’ ಎಂದರು.

ಅಂಬಾ ಭವಾನಿ ದೇವಸ್ಥಾನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂಬ ಮನವಿಗೆ ಸ್ಪಂದಿಸಿದ ಅವರು ಅನುದಾನ ಬಿಡುಗಡೆ ಭರವಸೆ ನೀಡಿದರು.

ಸಮುದಾಯದ ಸುಭಾಸ ಮೆಹರವಾಡೆ, ಉಪಾಧ್ಯಕ್ಷ ಮಹದೇವ ಮೆಹರವಾಡೆ, ಮೋನಿಷ ಅಥಣಿ, ಹನುಮಂತಸಾ ಮೆಹರವಾಡೆ, ನಾರಾಯಣ ಅಥಣಿ, ಗೋಪಾಲ ಮೆಹರವಾಡೆ, ಸೂರ್ಯಕಾಂತ ಪೂಜಾರಿ, ಆನಂದ ಹಬೀಬ್‌ ಇದ್ದರು.

**

ಅರಣ್ಯ ರಕ್ಷಣೆಗೆ ಸಲಹೆ

ಹಂಸಭಾವಿ: ‘ಅರಣ್ಯನಾಶದಿಂದ ಜಾಗತಿಕ ತಾಪಮಾನದಲ್ಲಿ ಏರು–ಪೇರಾಗುತ್ತಿದೆ. ಹೀಗಾಗಿ ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ. ಜೊತೆಗೆ ಅತೀವೃಷ್ಟಿ, ಅನಾವೃಷ್ಟಿಗಳು  ಸಂಭವಿಸುತ್ತಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಅರಣ್ಯ ಬೆಳೆಸಲು ಒತ್ತು ನೀಡಬೇಕು’ ಎಂದು ಸ್ವಾಭಿಮಾನಿ ಕರವೇ ಸಂಸ್ಥಾಪಕ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಹೇಳಿದರು.

ಇಲ್ಲಿಗೆ ಸಮೀಪದ ಯೋಗಿಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಮೀನುಗಳಲ್ಲಿ ಮಳೆಗೆ ಮಣ್ಣು ಕೊಚ್ಚಿ ಹೋಗದಂತೆ ರೈತರು ಬದುಗಳಲ್ಲಿ ಗಿಡಗಳನ್ನು ಬೆಳೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರೈತರ ಜಮೀನುಗಳಲ್ಲಿಯೂ ಮರಗಳು ಕಾಣ ಸಿಗುತ್ತಿಲ್ಲ’ ಎಂದು ವಿಷಾದಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ನವೀನಕುಮಾರ ಜಾಧವ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತಕುಮಾರ, ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.

**

ಜಾತಿಯ ಮೇಲಾಟ ಬದಿಗೊತ್ತಿ: ಉದಾಸಿ

ಅಕ್ಕಿಆಲೂರ: ಇಲ್ಲಿಗೆ ಸಮೀಪದ ಕೋಡಿಯಲ್ಲಾಪುರ ಗ್ರಾಮದ ರೇವಣಸಿದ್ದೇಶ್ವರ ಬೃಹನ್ಮಠಕ್ಕೆ ಗುರುವಾರ ಭೇಟಿ ನೀಡಿದ ಶಾಸಕ ಸಿ.ಎಂ.ಉದಾಸಿ ಅವರನ್ನು ಕಣ್ವಕುಪ್ಪಿ ಗವಿಮಠದ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಶಾಸಕ ಉದಾಸಿ, ‘ಜಾಗತೀಕರಣದ ಬಿರುಗಾಳಿಯಲ್ಲಿ ಬದುಕುವ ರೀತಿ–ನೀತಿ ಕಳೆದುಕೊಂಡಿದ್ದೇವೆ. ನೈತಿಕತೆಯ ದಿವಾಳಿತನದಿಂದ ಬಸವಳಿದು ದಾರಿ ತಪ್ಪಿರುವ ಸಾಮಾಜಿಕ ವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ಅಗತ್ಯವಿದೆ. ಜಾತಿಯ ಮೇಲಾಟ ಬದಿಗೊತ್ತಿ ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಬೇಕಿದೆ’ ಎಂದರು.

ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಜಾತಿಗಳ ಮಧ್ಯದ ಕಚ್ಚಾಟ ಸ್ಥಗಿತಗೊಂಡರೆ ಇಂದಿನ ಎಲ್ಲ ಜಂಜಾಟ ಹಾಗೂ ಸಮಸ್ಯೆಗಳಿಗೆ ಮುಕ್ತಿ ಸಾಧ್ಯವಿದೆ’ ಎಂದರು.

ಸಿದ್ದಲಿಂಗಪ್ಪ ಶಂಕರಿಕೊಪ್ಪ, ಶಿವಾನಂದ ಸಂಗೂರಮಠ, ಶಾಂತಪ್ಪ ತಿಪಲಾಪೂರ, ಕೋಟೆಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !