ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟ ಸಮಿತಿ ಅಧ್ಯಕ್ಷ ಅಸ್ವಸ್ಥ

5ನೇ ದಿನಕ್ಕೆ ಕಾಲಿಟ್ಟ ರೈತರ ಸತ್ಯಾಗ್ರಹ: ಬೇಡಿಕೆ ಈಡೇರಿಕೆಗೆ ಪಟ್ಟು
Last Updated 5 ಡಿಸೆಂಬರ್ 2020, 3:28 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಶಿಕಾರಿಪುರ ತಾಲ್ಲೂಕಿನ ಉಡುಗಣಿ –ತಾಳಗುಂದ, ಹೊಸೂರು ಗ್ರಾಮಗಳಿಗೆ ತುಂಗಭದ್ರಾ ನದಿ ನೀರು ಪೂರೈಸಲು ತಾಲ್ಲೂಕಿನ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ ಹಾಗೂ ರೈತಪರ ಸಂಘಟನೆ ನಡೆಸುತ್ತಿರುವ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದೆ.

ತೀವ್ರವಾಗಿ ಅಸ್ವಸ್ಥಗೊಂಡ ಹೋರಾಟ ಸಮಿತಿ ಅಧ್ಯಕ್ಷ ರಂಗಪ್ಪ ಬಡಪ್ಪಳವರ ಅವರಿಗೆ ಸ್ಥಳದಲ್ಲಿದ್ದ ಆಂಬುಲೆನ್ಸ್‌ನಲ್ಲಿ ಚಿಕಿತ್ಸೆ ನೀಡಲಾಯಿತು.

ಈ ವೇಳೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಬಿ.ಡಿ ಹಿರೇಮಠ, ಸರ್ಕಾರಿ ಯೋಜನೆ ಜಾರಿಗೆ ಆಸಕ್ತಿ ತೋರುವ ಸರ್ಕಾರಗಳು, ರೈತರನ್ನು ಬದುಕಿಸಬೇಕು ಎಂಬ ಇಚ್ಛಾಶಕ್ತಿಯನ್ನು ಸಹ ಹೊಂದಿರಬೇಕು. ಈಗಾಗಲೇ ಸತ್ಯಾಗ್ರಹ ಉಗ್ರರೂಪ ಪಡೆದುಕೊಳ್ಳುತ್ತಿದ್ದು, ಸಮಿತಿ ಅಧ್ಯಕ್ಷ ಅಸ್ವಸ್ಥರಾಗಿದ್ದಾರೆ. ರೈತರು ಇಲ್ಲಿ ಜೀವನ- ಮರಣದ ನಡುವೆ ಹೋರಾಟ ನಡೆಸಿದ್ದಾರೆ. ಈಗಾಗಲೇ ಹಲವಾರು ಸರ್ಕಾರಿ ಯೋಜನೆಗೆ ರೈತರು ಭೂಮಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಮತ್ತೆ ಈ ಯೋಜನೆಗಾಗಿ ಭೂಮಿ ಕಳೆದುಕೊಂಡರೆ ಅವರು ಬದುಕು ಬೀದಿಗೆ ಬರುತ್ತದೆ ಎಂದರು.

ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸದಿದ್ದರೆ ಕಾಮಗಾರಿ ಜಾಗದಲ್ಲಿ ರೈತರು ಹಾಗೂ ಕುಟುಂಬದವರು ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಸರ್ಕಾರ ಇನ್ನೆರಡು ದಿನಗಳಲ್ಲಿ ನಿರ್ಣಯ ಕೈಗೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು. ಸತ್ಯಾಗ್ರಹದಲ್ಲಿ ರೈತ ಪ್ರಮುಖರಾದ ಸಿದ್ಧನಗೌಡ ಪಾಟೀಲ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳಿ, ಸಿನಿಮಾ ನಿರ್ದೇಶಕ ಕೆ. ನರೇಂದ್ರಬಾಬು, ಉಜನೆಪ್ಪ ಕೋಡಿಹಳ್ಳಿ, ಹರೀಶ ಇಂಗಳಗೊಂದಿ, ವಿನಯ ಪಾಟೀಲ, ಎಸ್.ಡಿ. ಹಿರೇಮಠ, ಹನುಮಂತಪ್ಪ ದಿವಿಗೀಹಳ್ಳಿ, ವೀರನಗೌಡ ಪ್ಯಾಟೀಗೌಡ್ರ, ವಸಂತ ದ್ಯಾವಕ್ಕಳವರ, ಲೀಲಾವತಿ ಗೋಣಗೇರಿ, ರಂಗಪ್ಪ ಬಡಪ್ಪಳವರ, ಪರಮೇಶಪ್ಪ ಕಟ್ಟೇಕಾರ, ಇಸೂಫ್ ಸೈಕಲಗಾರ, ನಾಸೀರಸಾಬ ಸೈಕಲಗಾರ ಇದ್ದರು.

ಕರ್ನಾಟಕ ರಕ್ಷಣೆ ವೇದಿಕೆ, ಜಯಕರ್ನಾಟಕ ಸಂಘಟನೆ, ಉತ್ತರ ಕರ್ನಾಟಕ ರೈತ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ಸೂಚಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT