ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ನೆರೆಯ ಬರೆ, ರೋಗದ ಬಾಧೆ!

ಬೆಳೆನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ ಅನ್ನದಾತರು: ಕೂಡಲೇ ಪರಿಹಾರ ನೀಡಲು ರೈತರ ಆಗ್ರಹ
Last Updated 12 ಸೆಪ್ಟೆಂಬರ್ 2022, 8:55 IST
ಅಕ್ಷರ ಗಾತ್ರ

ಹಾವೇರಿ: ಅತಿವೃಷ್ಟಿ ಮತ್ತು ನೆರೆಯಿಂದ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್‌ ಬೆಳೆ ನೀರುಪಾಲಾಗಿದೆ. ಕೆಲವು ಕಡೆ ಕೆರೆ, ಕಟ್ಟೆ, ಕಾಲುವೆಗಳ ನೀರು ನುಗ್ಗಿ ಬೆಳೆಗಳು ಕೊಚ್ಚಿ ಹೋಗಿದ್ದು, ರೈತರು ಕಣ್ಣೀರು ಸುರಿಸುವಂತಾಗಿದೆ. ಒಂದು ಕಡೆ ನೆರೆಯ ಬರೆಯಾದರೆ, ಮತ್ತೊಂದು ಕಡೆ ಬೆಳೆಗಳಿಗೆ ವಿವಿಧ ರೋಗಗಳ ಬಾಧೆ ತಲೆದೋರಿದೆ.

ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಮಳೆಗೆ 89,955 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಭತ್ತ– 1099 ಹೆಕ್ಟೇರ್‌, ಗೋವಿನ ಜೋಳ– 76,901 ಹೆಕ್ಟೇರ್‌, ಶೇಂಗಾ– 2256 ಹೆಕ್ಟೇರ್‌, ಸೋಯಾಬಿನ್‌– 2227 ಹೆಕ್ಟೇರ್‌, ಹತ್ತಿ– 7247 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಜಿಲ್ಲೆಯಲ್ಲಿ 1799 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ₹19.76 ಕೋಟಿ ನಷ್ಟವಾಗಿದೆ. ಎನ್‌ಡಿಆರ್‌ಎಫ್‌ ಪ್ರಕಾರ 2.43 ಕೋಟಿ ಪರಿಹಾರವು 3508 ರೈತರಿಗೆ ಬಿಡುಗಡೆಯಾಗಬೇಕಿದೆ’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಪ್ರದೀಪ ಎಲ್‌. ಮಾಹಿತಿ ನೀಡಿದರು.

ಮೆಕ್ಕೆಜೋಳ ಅಪಾರ ನಷ್ಟ
ಹಿರೇಕೆರೂರು:
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಬಹುತೇಕ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ.

ಹಿರೇಕೆರೂರು ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದ 8892 ಹೆಕ್ಟೇರ್ ಮೆಕ್ಕೆಜೋಳ, 631 ಹೆಕ್ಟೇರ್ ಹತ್ತಿ ಬೆಳೆ ನಾಶವಾಗಿದೆ ಎಂದು.ಸಹಾಯಕ ಕೃಷಿ ನಿರ್ದೇಶಕ ಎಂ.ವಿ ಮಂಜುನಾಥ್ ತಿಳಿಸಿದರು. 485.95 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಳಾಗಿದೆ ಎಂದು ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ ಲಕ್ಷ್ಮಿಕಾಂತ್ ಬೊಮ್ಮಣ್ಣವರ್ ತಿಳಿಸುತ್ತಾರೆ.

ನೆಲಕಚ್ಚಿದ ಶುಂಠಿ, ಅಡಿಕೆ ಬೆಳೆ
ಬ್ಯಾಡಗಿ:
ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ಶೇ 90ರಷ್ಟು ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ನಿರಂತರ ಮಳೆಯಿಂದ ಭೂಮಿ ಜೌಗು ಹಿಡಿದಿದೆ. ಕಾಗಿನೆಲೆ ಹೋಬಳಿಯಲ್ಲಿ ಶುಂಠಿ ಮತ್ತು ಅಡಿಕೆ ಬೆಳೆ ನೆಲಕಚ್ಚಿದೆ.

‘ಬ್ಯಾಡಗಿ ಹಾಗೂ ಕಾಗಿನೆಲೆ ಹೋಬಳಿಯಲ್ಲಿ 12,140 ಹೆಕ್ಟೇರ್ ಮುಂಗಾರು ಕೃಷಿ ಬೆಳೆ ನಾಶವಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎ.ಡಿ.ವೀರಭದ್ರಪ್ಪ ಮಾಹಿತಿ ನೀಡಿದರು.

‘ತಾಲ್ಲೂಕಿನಲ್ಲಿ 648 ಮನೆಗಳಿಗೆ ಹಾನಿಯಾಗಿದ್ದು, 457 ಅನ್ನು ಪರಿಹಾರಕ್ಕೆ ಪರಿಗಣಿಸಲಾಗಿದೆ. ₹1.34 ಕೋಟಿ ಹಣವನ್ನು ಅವರ ಖಾತೆಗಳಿಗೆ ಸಂದಾಯ ಮಾಡಲಾಗಿದೆ’ ಬ್ಯಾಡಗಿ ತಹಶೀಲ್ದಾರ್ ವೈ.ತಿಪ್ಪೇಸ್ವಾಮಿ ವಿವರಿಸುತ್ತಾರೆ

ಅತಿವೃಷ್ಟಿ: ಬೆಳೆ ಹಾನಿ
ರಟ್ಟೀಹಳ್ಳಿ:
ನಿರಂತರವಾಗಿ ಮಳೆ ಸುರಿದ ಪರಿಣಾಮವಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡು ಸಾಕಷ್ಟು ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ. ಕಳೆದ ಎರಡು ತಿಂಗಳಿಂದ ಮಳೆಯ ಅಬ್ಬರ ಈ ಭಾಗದಲ್ಲಿ ಹೆಚ್ಚಾಗಿತ್ತು. ಬೆಳೆದು ನಿಂತ ಫಸಲು ಕಳೆದುಕೊಂಡು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

‘ತಾಲ್ಲೂಕಿನಲ್ಲಿ ಮೆಕ್ಕೆಜೋಳ, ಶೇಂಗಾ, ಹತ್ತಿ, ಸೋಯಾ, ಅವರೆ, ಬೆಳೆಗೆ ಹಾನಿಯಾಗಿದೆ. ರೈತರ ಜಮೀನು ಜೌಗು ಹಿಡಿದಿದ್ದು, ಶೀತ ಹೆಚ್ಚಾಗಿ ರೋಗ ಕಾಣಿಸಿಕೊಂಡಿದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ವಿ. ಮಂಜುನಾಥ.

ಮೂರು ಬಾರಿ ಬಿತ್ತಿದರೂ ಪ್ರಯೋಜನವಿಲ್ಲ
ಹಾನಗಲ್:
ನಿರಂತರ ಮಳೆಗೆ ಹಾನಗಲ್ ತಾಲ್ಲೂಕಿನಲ್ಲಿ ಕೃಷಿಕರ ಬದುಕು ಕಂಗೆಟ್ಟಿದೆ. ಕೆಲವೆಡೆ ರೈತರು ಮೂರು ಬಿತ್ತನೆ ಮಾಡಿದರೂ ಬೆಳೆಯೂ ಕೊಚ್ಚಿಹೋಗಿದೆ. ತಾಲ್ಲೂಕಿನಲ್ಲಿ ಸುಮಾರು 800 ಕೆರೆಗಳಿವೆ. ವಾಡಿಕೆ ಮೀರಿ ಸುರಿದ ಮಳೆಗೆ ಕೆರೆ–ಕಟ್ಟೆಗಳು ಭರ್ತಿಯಾಗಿವೆ. ಇನ್ನು ಕೆಲವೆಡೆ ಕೆರೆಗಳು ಕೋಡಿ ಬಿದ್ದು ಬೆಳೆಗಳು ಜಲಾವೃತಗೊಂಡಿವೆ.

ತಾಲ್ಲೂಕಿನಲ್ಲಿ 23 ಕೆರೆಗಳು ಒಡೆದು ಹೋಗಿವೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಒಟ್ಟು 11520 ಹೆಕ್ಟರ್‌ ಕೃಷಿ ಹಾನಿಗೊಂಡಿದೆ. ಅಪಾರ ಪ್ರಮಾಣದಲ್ಲಿ ಮೆಕ್ಕೆಜೋಳ ಹಾನಿಯಾಗಿದೆ. ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.

‘ಮುಂಗಡವಾಗಿ ಶೇ 25ರಷ್ಟು ಬೆಳೆವಿಮೆ ಪರಿಹಾರ ವಿತರಣೆಗೆ ಸಿದ್ಧತೆ ನಡೆದಿದೆ. ಅತಿವೃಷ್ಟಿಗೆ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. 255 ಹೆಕ್ಟರ್‌ನಷ್ಟು ಬೆಳೆ ಹಾನಿಯಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ದೇವಿಂದ್ರಪ್ಪ ಕಡ್ಲೇರ ಹಾಗೂ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ತಿಳಿಸಿದ್ದಾರೆ.

ಹತೋಟಿಗೆ ಬಾರದ ರೋಗ
ಸವಣೂರು:
ನಿರಂತರ ಸುರಿದ ಮಳೆಗೆ ತಾಲ್ಲೂಕಿನ ರೈತರು ಸೇರಿದಂತೆ ಸಾಮಾನ್ಯ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ರೈತರು ಬೆಳೆದ ಮೆಕ್ಕೆಜೋಳ, ಹತ್ತಿ, ಶೇಂಗಾ, ಸೋಯಾಬಿನ್ ಬೆಳೆಗಳು ಹಾನಿಯಾಗಿದ್ದು, ₹13 ಕೋಟಿ ನಷ್ಟವಾಗಿದೆ. ಇದುವರೆಗೂ 10,850 ಬೆಳೆಹಾನಿ ಅರ್ಜಿಗಳನ್ನು ಸ್ವೀಕರಿಸಿ ಮುಂದಿನ ಕ್ರಮಕ್ಕೆ ಕಂದಾಯ ಇಲಾಖೆ ರವಾನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಟಿ ಮಂಜುನಾಥ ತಿಳಿಸುತ್ತಾರೆ.

‘ತೋಟಗಾರಿಕೆ ಬೆಳೆ ಸೇರಿದಂತೆ ತರಕಾರಿ ಬೆಳೆಗಳು ಕೂಡ ಹಾಳಾಗಿ ಸುಮಾರು 284 ಹೆಕ್ಟರ್ ಪ್ರದೇಶದಲ್ಲಿ ₹3 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದುವರೆಗೂ 460 ಬೆಳೆಹಾನಿ ಅರ್ಜಿ ಸ್ವೀಕರಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿನೋದ ಬೋಕಳೆ ಮಾಹಿತಿ ನೀಡಿದ್ದಾರೆ.

ರೈತರಿಗೆ ಗಾಯದ ಮೇಲೆ ಬರೆ
ಶಿಗ್ಗಾವಿ:
‘ಮಳೆ ನೀರು ನುಗ್ಗಿ ಬೆಳೆಗಳೆಲ್ಲ ಜಲಾವೃತಗೊಂಡು ಸಂಪೂರ್ಣ ಹಾನಿಯಾಗಿದೆ. ಸರ್ಕಾರ ನೀಡುವ ಪರಿಹಾರಧನ ಮತ್ತೇ ಬೀಜಗೊಬ್ಬರ ಖರೀದಿಗೆ ಸಾಲದು. ಹೀಗಾಗಿ ರೈತ ಮತ್ತೆ ಮತ್ತೆ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾನೆ. ಕುಟುಂಬ ನಿರ್ವಹಣೆ ಸಾಧ್ಯವಿಲ್ಲದಾಗಿದೆ’ ಎಂದು ರೈತರಾದ ದೇವೇಂದ್ರಪ್ಪ ಹಳವಳ್ಳಿ, ಶಂಭು ಕುರಗೋಡಿ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಈವರೆಗೆ ಸುಮಾರು 13,115 ಹೆಕ್ಟೇರ್ ಪ್ರದೇಶದಷ್ಟು ಜಮೀನು ಮಳೆಯಿಂದ ಹಾನಿಯಾಗಿದ್ದು, ಪರಿಶೀಲನೆ ಕಾರ್ಯ ಮುಂದುವರಿದಿದ್ದು, ಹಾನಿಯಾದ ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ವರದಿ ಕಳುಹಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶಬಾಬು ದಿಕ್ಷೀತ್ ಹೇಳಿದರು.

ಸಾಲಬಾಧೆ: ರೈತರ ಆತ್ಮಹತ್ಯೆ
ರಾಣೆಬೆನ್ನೂರು:
ತಾಲ್ಲೂಕಿನಾಧ್ಯಂತ ಸತತ ಮಳೆಗೆ ಮೆಕ್ಕೆಜೋಳ, ಹತ್ತಿ, ಭತ್ತ, ಸೋಯಾಬೀನ್‌, ದ್ವಿದಳ ಧಾನ್ಯ ಸೇರಿದಂತೆ ಒಟ್ಟು 16,855 ಹೆಕ್ಟೇರ್‌ ಬೆಳೆ ಹಾನಿಗೊಂಡಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಎಚ್‌.ಬಿ.ಗೌಡಪ್ಪಳವರ ತಿಳಿಸಿದರು.

ಈರುಳ್ಳಿ, ಬೆಳ್ಳುಳ್ಳಿ, ಎಲೆಬಳ್ಳಿ ಮತ್ತು ತರಕಾರಿ ಬೆಳೆ ಸೇರಿದಂತೆ ಒಟ್ಟಾರೆ 491 ಹೆಕ್ಟೇರ್‌ ಬೆಳೆ ಹಾನಿಗೊಂಡಿದೆ. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಸರ್ವೆ ಮಾಡಿ ಕಂದಾಯ ಇಲಾಖೆಗೆ ಸಂಪೂರ್ಣ ಹಾನಿ ವರದಿಯನ್ನು ಸಲ್ಲಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ತಿಳಿಸಿದರು.

ಅತಿವೃಷ್ಟಿಯಿಂದ ಬೆಳೆ ಹಾಳಾಗಿ ಸಾಲಬಾಧೆ ತಾಳಲಾರದೇ ತಾಲ್ಲೂಕಿನ ಮುಷ್ಟೂರಿನ ರೈತ ಪರಮೇಶಪ್ಪ ಮಷ್ಟೂರುನಾಯಕ (58) ಹಾಗೂ ಹೊಸ ಚಂದಾಪುರದ ಬಸವರಾಜ ನೀಲಪ್ಪ ಗಂಟಿ (32) ಮೃತಪಟ್ಟಿದ್ದಾರೆ. ಸರ್ಕಾರ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ ಒತ್ತಾಯಿಸುತ್ತಾರೆ.

**

ಮಳೆ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ ₹597 ಕೋಟಿ ನಷ್ಟ ಉಂಟಾಗಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ₹113 ಕೋಟಿ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ.
– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ, ಹಾವೇರಿ

**

ಮಳೆ ಹಾನಿ ಜತೆಗೆ ಬೆಳೆಗಳಿಗೆ ವಿವಿಧ ರೋಗಗಳು ಬಾಧಿಸುತ್ತಿವೆ. ಅನೇಕ ಬಾರಿ ಔಷಧ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ.
– ಚನ್ನಪ್ಪ ಮರಡೂರ, ರೈತ ಮುಖಂಡ, ಸವಣೂರು

**

ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸರ್ವೆ ಕಾರ್ಯ ವಿಳಂಬವಾಗಿದ್ದು ಇನ್ನಷ್ಟು ಚುರುಕಾಗಬೇಕು. ‘ಹಸಿ ಬರಗಾಲ’ ಎಂದು ಘೋಷಿಸಬೇಕು.
‌ – ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಸಂಘ

**

ಅತಿವೃಷ್ಟಿ– ಅನಾವೃಷ್ಟಿಯಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳು ಧೃತಿಗೆಡಿಸುತ್ತಿವೆ.
– ಅಡಿವೆಪ್ಪ ಆಲದಕಟ್ಟಿ, ರೈತ ಮುಖಂಡ

***

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ. ಹಳ್ಳಿ, ಎಂ.ವಿ.ಗಾಡದ, ಮುಕ್ತೇಶ್ವರ ಪಿ.ಕೂರಗುಂದಮಠ, ಮಾರುತಿ ಪೇಟಕರ, ಪ್ರದೀಪ ಕುಲಕರ್ಣಿ, ಪ್ರಮೀಳಾ ಹುನಗುಂದ, ಗಣೇಶಗೌಡ ಪಾಟೀಲ, ಶಂಕರಪ್ಪ ಕೊಪ್ಪದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT