ರೈತರ ಸಾಲಮನ್ನಾ ಸಮಸ್ಯೆ ಬಗೆಹರಿಸಲು ಆಗ್ರಹ

7
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ರೈತರ ಸಾಲಮನ್ನಾ ಸಮಸ್ಯೆ ಬಗೆಹರಿಸಲು ಆಗ್ರಹ

Published:
Updated:

ಹಾವೇರಿ: ರೈತರ ಸಾಲಮನ್ನಾದ ಪ್ರಕ್ರಿಯೆಯಲ್ಲಿನ ಗೊಂದಲಗಳನ್ನು ಬಗೆಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ₹1 ಲಕ್ಷ ತನಕದ ಸಾಲಮನ್ನಾ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜುಲೈ 10ರಂದು ಘೋಷಿಸಿದ್ದಾರೆ. ಆದರೆ, ಫಲಾನುಭವಿ ರೈತರು ಹಾಗೂ ಸಾಲ ಮನ್ನಾದ ಮೊತ್ತವನ್ನು ಗುರುತಿಸಲು ಪ್ರತ್ಯೇಕ ಆದೇಶ ನೀಡಲಾಗುವುದು ಎಂದು ಆಗಸ್ಟ್ 9ರ ಸಚಿವ ಸಂಪುಟ ಸಭೆಯ ನಡಾವಳಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಆ.16ರಂದು ಆದೇಶ ಹೊರಡಿಸಿದ್ದು, ಇದರ ಉದ್ದೇಶವನ್ನು ಸ್ಪಷ್ಟ ಪಡಿಸಬೇಕು. ಸಾಲಮನ್ನಾಕ್ಕೆ ಸಮರ್ಪಕ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ರೈತರಿಗೆ ಪ್ರಯೋಜನ ತಲುಪುವುದಲ್ಲ ಎಂದರು.

ಬೆಳೆವಿಮೆ:
2016–17 ಮತ್ತು 2017–18ರ ಮುಂಗಾರು ಮತ್ತು ಹಿಂಗಾರು ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಜಿಲ್ಲೆಯ ರೈತರ ಅನ್ಯಾಯವಾಗಿದೆ. ಈ ಕುರಿತು ಹಲವಾರು ಸಭೆ ನಡೆದರೂ, ವಿಮಾ ಕಂಪೆನಿಗಳು ರೈತರ ಜೊತೆ ಚಲ್ಲಾಟವಾಡುತ್ತಿದೆ ಎಂದು ಆರೋಪಿಸಿದ ಅವರು, 2016–17ರ ಮುಂಗಾರಿನ ಮಕ್ಕೆಜೋಳದ ವಿಮೆಗೆ ಮಳೆಯಾಶ್ರಿತ ಎನ್ನುವ ಬದಲಾಗಿ ನೀರಾವರಿ ಎಂದು ದಾಖಲಿಸಿದ್ದಾರೆ. ಆ ಮೂಲಕ ಸುಮಾರು 200 ರೈತರಿಗೆ ವಂಚನೆಯಾಗಿದೆ. ಹಾನಗಲ್‌ನಲ್ಲಿ ಭತ್ತ ವಿಮೆ ತುಂಬಿದ 4 ಸಾವಿರ ರೈತರಿಗೆ ಸುಮಾರು ₹13 ಕೋಟಿ ವಂಚನೆಯಾಗಿದೆ. ಕೆಲವೆಡೆ ಬೆಳೆಯನ್ನು ‘ಮೇಜರ್’ ಮತ್ತು ‘ಮೈನರ್’ ಎಂದು ಗುರುತಿಸುವಲ್ಲಿ ವ್ಯತ್ಯಯ ಮಾಡಿದ್ದು, ವಂಚನೆಯಾಗಿದೆ. ಇದನ್ನು 15ದಿನಗಳ ಒಳಗಾಗಿ ಬಗೆಹರಿಸುವುದಾಗಿ ಭರವಸೆ ನೀಡಿದ್ದು, ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಯುಟಿಪಿ ಪರಿಹಾರ:
2001ರಲ್ಲಿ ಜಾರಿಯಾದ ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಸುಮಾರು ₹249 ಕೋಟಿ ಪರಿಹಾರವನ್ನು ಇನ್ನೂ ನೀಡಿಲ್ಲ. ಅದನ್ನು ಕೂಡಲೇ ಕೊಡಿಸಬೇಕು ಎಂದು ಆಗ್ರಹಿಸಿದರು.

ಹೊಸದಾಗಿ ರಚಿಸಿ ರಟ್ಟೀಹಳ್ಳಿ ತಾಲ್ಲೂಕು ಕೇಂದ್ರ ಹಾಗೂ ಎಲ್ಲ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಜಿಲ್ಲೆಯ ಎಲ್ಲ ಕೆರೆಗಳನ್ನು ನದಿ ನೀರಿನಿಂದ ತುಂಬಿಸಬೇಕು. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಸಿದ್ಧತೆ ನಡೆಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಸಂಚಾಲಕ ಮಹ್ಮದ್ ಗೌಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !