ರೈತರ ಸಾಲ ಮನ್ನಾ: ಬಿಜೆಪಿ ಟೀಕೆಯಲ್ಲಿ ಹುರುಳಿಲ್ಲ

7

ರೈತರ ಸಾಲ ಮನ್ನಾ: ಬಿಜೆಪಿ ಟೀಕೆಯಲ್ಲಿ ಹುರುಳಿಲ್ಲ

Published:
Updated:

ಹಾವೇರಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿದ ‘ರೈತರ ಸಾಲಮನ್ನಾ’ವನ್ನು ಬಿಜೆಪಿಯು ಅನಗತ್ಯವಾಗಿ ಟೀಕಿಸುತ್ತಿದ್ದು, ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರ ಹೇಳಿದರು.

ಖಾಸಗಿ ಕಂಪೆನಿಗಳು, ದೊಡ್ಡ ದೊಡ್ಡ ಉದ್ಯಮಿಗಳ ಸಾಲಮನ್ನಾ ಮಾಡುವ ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ರೈತರ ಸಾಲಮನ್ನಾ ಮಾಡುತ್ತಿಲ್ಲ. ಆದರೆ, ಸಂಸದ ಶಿವಕುಮಾರ್ ಉದಾಸಿ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ಅವರು ರೈತರಿಗೆ ಸ್ಪಂದಿಸುತ್ತಿರುವ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ. 

ಇದು ರೈತ ವಿರೋಧಿ ಧೋರಣೆಯಾಗಿದೆ ಎಂದು ದೂರಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಸ್ಪಂದಿಸುವ ಬದಲು, ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಸಂಜಯ ಡಾಂಗೆ ಮಾತನಾಡಿ, ‘ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣೆ 

ವೇಳೆಯಲ್ಲಿ ಭರವಸೆ ನೀಡಿದ್ದರು. ಆದರೆ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಮನ್ವಯ ಸಮಿತಿ ಒಪ್ಪಿಗೆ ಪಡೆಯುವುದು ಅವಶ್ಯವಾಗಿದೆ. ಹೀಗಾಗಿ, ಸಾಲಮನ್ನಾವು ಸ್ವಲ್ಪ ವಿಳಂಬ ಆಗಿರಬಹುದು. ಆದರೆ, ಬಿಜೆಪಿ ಟೀಕೆಗಳಲ್ಲಿ ಹುರುಳಿಲ್ಲ ಎಂದರು.

ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಎಚ್‌.ಡಿ.ಕುಮಾರ ಸ್ವಾಮಿ ತಲಾ ₹ 50 ಸಾವಿರ ಪರಿಹಾರ ನೀಡಿದ್ದರು. ಬಿಜೆಪಿ ಸರ್ಕಾರ ನಡೆಸಿದ್ದ ಗೋಲಿಬಾರ್‌ನಿಂದ ಹುತಾತ್ಮರಾದ ಹಾಗೂ ನೊಂದ ರೈತರಿಗೆ ಜೆಡಿಎಸ್ ವರಿಷ್ಠ 

ಎಚ್‌.ಡಿ.ದೇವೇಗೌಡರು ಸಾಂತ್ವನ ಹೇಳಿ ನೆರವು ನೀಡಿದ್ದರು. ಆಗ, ಬಿಜೆಪಿಗೆ ರೈತರು ಕಂಡಿರಲಿಲ್ಲ ಎಂದು ಅವರು ಕುಟುಕಿದರು.

ಕೇಂದ್ರ ಸರ್ಕಾರದ ಅಮೃತ್‌ ಸಿಟಿ, ಉದ್ಯೋಗ ಸೃಷ್ಟಿ ಮತ್ತಿತರ ಯಾವುದೇ ಭರವಸೆಗಳು ಜಿಲ್ಲೆಯಲ್ಲಿ ಅನುಷ್ಠಾನಗೊಂಡಿಲ್ಲ. ಕನಿಷ್ಠ ಪಕ್ಷ ನರೇಂದ್ರ ಮೋದಿ ಭರವಸೆ ನೀಡಿದಂತೆ ಪ್ರತಿ ಖಾತೆಗೆ ₹ 15 ಲಕ್ಷವನನ್ನೂ ಹಾಕಿಲ್ಲ. ಬದಲಾಗಿ ಜನರ 

ನಗದು ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿದ್ದಾರೆ. ಬ್ಯಾಂಕಿನಿಂದ ಸಾಲ ಪಡೆದು ಓಡಿ ಹೋದ ಮಲ್ಯ ಮತ್ತಿತರರನ್ನು ವಾಪಸ್ ಕರೆತರುತ್ತಿಲ್ಲ  ಎಂದು ಲೇವಡಿ ಮಾಡಿದರು. ಮುಖಂಡರಾದ ಉಮೇಶ ತಳವಾರ, ಶೇಖಪ್ಪ ಕಳ್ಳಿಮನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !