ಬುಧವಾರ, ಮಾರ್ಚ್ 3, 2021
18 °C
ಹಾವೇರಿ ಜಿಲ್ಲಾಡಳಿತ ಭವನದ ಮುಂಭಾಗ ರೈತ ಸೇನಾ ಕರ್ನಾಟಕ ಸಂಘದಿಂದ ಪ್ರತಿಭಟನೆ

‘ಅನ್ನದಾತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ರಾಜ್ಯದಲ್ಲೇ ಅತಿಹೆಚ್ಚು ಮೆಕ್ಕೆಜೋಳವನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಉತ್ತಮ ದರ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಅನುಕೂಲ ಕಲ್ಪಿಸಲು ಕೂಡಲೇ ಖರೀದಿ ಕೇಂದ್ರ ತೆರೆಯಬೇಕು’ ಎಂದು ರೈತ ಸೇನಾ ಕರ್ನಾಟಕ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ರೈತ ಸೇನಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹1850 ದರ ನಿಗದಿಪಡಿಸಿದೆ. ಇದರಲ್ಲಿ ದಲ್ಲಾಳಿಗಳಿಗೆ ಮತ್ತು ಅಧಿಕಾರಿಗಳಿಗೆ ಕಮಿಷನ್‌ ಸಿಗುತ್ತದೆ. ಆದರೆ, ರೈತರನಿಗೆ ಅಪಾರ ನಷ್ಟ ಉಂಟಾಗುತ್ತಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ಅನ್ನದಾತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು. 

ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಲಿಂಗೇಶ (ವರುಣಗೌಡ) ಎಂ. ಪಾಟೀಲ ಮಾತನಾಡಿ, ‘ಈಗಾಗಲೇ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಈವರೆಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ರೈತರು ಮೆಕ್ಕೆಜೋಳವನ್ನು ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ. ಇನ್ನು ಹೆಚ್ಚಿನ ದಿನದವರೆಗೆ ಅದನ್ನು ಸಂಗ್ರಹಿಸಿಕೊಂಡರೆ ಸಾಲಗಾರರ ಕಾಟ ಹೆಚ್ಚಳವಾಗುತ್ತಿದೆ. ಹೀಗಾಗಿ ರೈತರು ಕಡಿಮೆ ದರಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದು, ರೈತರ ಸಮಸ್ಯೆ ಪರಿಹಾರಕ್ಕೆ ಪರಸ್ಪರ ದೂರದೆ ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಈ ಕುರಿತು ಸರ್ಕಾರಗಳ ಮೇಲೆ ಒತ್ತಡ ತಂದು ರೈತರ ನೆರವಿಗೆ ಧಾವಿಸಬೇಕು. ಅದು ಬಿಟ್ಟು ಕೇಂದ್ರ ಸರ್ಕಾರ ಮೆಕ್ಕೆಜೋಳವನ್ನು ಪಿಡಿಎಸ್‍ನಿಂದ ಹೊರಗಿಟ್ಟಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಾ ಕುಳಿತುಕೊಳ್ಳಬಾರದು ಎಂದರು. 

ರೈತ ಮುಖಂಡರಾದ ಪಿ.ಬಿ. ದುಂಡಿಗೌಡ್ರ, ಎಫ್.ಆರ್ ಕೊಂಡಾಯಿ, ಕೊಟೇಪ್ಪಾ ಸಂಜಿವಣ್ಣನವರ, ಮಹ್ಮದ ಮುಲ್ಲಾ, ರಾಮಜಿ ಸಿಂಧೆ, ಫಕ್ಕೀರಪ್ಪ ಬಿಸೆಟ್ಟಿ, ಸಿದ್ದಯ್ಯ ಹಿರೇಮಠ, ಶಿವಾನಂದ ಹೊಸಮನಿ, ಮಲ್ಲಣ್ಣ ಆಲೇಕರ, ಫಕ್ಕೀರಪ್ಪ ವಾಲ್ಮೀಕಿ, ಬಸವರಾಜ ದೊಡ್ಡಗೌಡ್ರ ಮುಂತಾದವರು ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು