ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥಕ್ಕಾಗಿ ರೈತ ಚಳವಳಿ ಬಲಿಕೊಟ್ಟ ಆರೋಪ: ಕೋಡಿಹಳ್ಳಿಯ ಅಣಕು ಶವಯಾತ್ರೆ

ರೈತಸಂಘ ಪ್ರತಿಭಟನೆ
Last Updated 28 ಮೇ 2022, 13:38 IST
ಅಕ್ಷರ ಗಾತ್ರ

ಹಾವೇರಿ: ರೈತ ಮತ್ತು ಕಾರ್ಮಿಕರ ಹಿತಾಸಕ್ತಿ ಬಲಿಕೊಟ್ಟು, ಕೋಟ್ಯಂತರ ರೂಪಾಯಿ ಎಂಜಲು ಕಾಸಿಗೆ ಕೈ ಹಾಕಿದ್ದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿ, ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರ ಅಣಕು ಶವಯಾತ್ರೆ ನಡೆಸುವ ಮೂಲಕ ಹಾವೇರಿ ನಗರದಲ್ಲಿ ಶನಿವಾರ ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ನೇತೃತ್ವದಲ್ಲಿನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಅಣಕು ಶವಯಾತ್ರೆ ನಡೆಸಲಾಯಿತು. ನಂತರ ಸಿದ್ದಪ್ಪ ವೃತ್ತದಲ್ಲಿ ರೈತರು ಒಗ್ಗೂಡಿ ರಸ್ತೆತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಕೋಡಿಹಳ್ಳಿ ಚಂದ್ರಶೇಖರ ಅವರು ರೈತ ಚಳವಳಿಯನ್ನು ಸ್ವಾರ್ಥಕ್ಕಾಗಿ ಬಲಿಕೊಟ್ಟು, ರೈತರಿಗೆ ವಿಷ ಕೊಡುವ ಕಾರ್ಯದಲ್ಲಿ ತೊಡಗಿದ್ದಾರೆ. ರೈತಸಂಘಕ್ಕೆ ಅವಮಾನ ಮಾಡಿದ ಇಂತಹ ಖಳನಾಯಕನ ವಿರುದ್ಧ ಸರ್ಕಾರ ತನಿಖೆ ಮಾಡಿ, ಸತ್ಯವನ್ನು ಬಹಿರಂಗಪಡಿಸಬೇಕು. ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ‘ರೈತ ಚಳವಳಿ ಕರ್ನಾಟಕದಲ್ಲಿ ಜನ್ಮ ತಾಳಿ ನಾಲ್ಕು ದಶಕಗಳು ಕಳೆದಿವೆ. ವಿವಿಧ ಹೋರಾಟಗಳಲ್ಲಿ 157 ರೈತರು ಹುತಾತ್ಮರಾಗಿದ್ದಾರೆ. ರೈತ ಕುಲದ ಏಳಿಗೆಗಾಗಿ ಲಕ್ಷಾಂತರ ರೈತರು ಹೋರಾಡಿ, ಸಂಕಷ್ಟ ಅನುಭವಿಸಿದ್ದಾರೆ. ರೈತ ನಾಯಕರಾದ ಎಚ್.ಎಸ್.ರುದ್ರಪ್ಪ, ಪ್ರೊ.ಎಂ.ವಿ. ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ , ಕೆ.ಎಸ್. ಪುಟ್ಟಣ್ಣಯ್ಯ ಮುಂತಾದವರು ಭ್ರಷ್ಟಾಚಾರ ಕಂಡರೆ ಸಿಡಿದೇಳುತ್ತಿದ್ದರು. ಚಳವಳಿಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದರು. ರೈತ ಸಂಘಕ್ಕೆ ಅಪಮಾನಿಸುವುದನ್ನು ಸಹಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಅಡಿವೆಪ್ಪ ಆಲದಕಟ್ಟಿ, ಮಹಮ್ಮದಗೌಸ್‌ ಪಾಟೀಲ್, ಶಿವಬಸಪ್ಪ ಗೋವಿ, ರುದ್ರಗೌಡ ಕಾಡನಗೌಡ್ರ, ಗಂಗಣ್ಣ ಎಲಿ, ಬಸವನಗೌಡ ಗಂಗಪ್ಪಳವರ, ದಿಳ್ಳೆಪ್ಪ ಮಣ್ಣೂರ, ಮರಿಗೌಡ ಪಾಟೀಲ, ಶಂಕರಗೌಡ ಶಿರಿಗುಂಬಿ, ಪ್ರಭುಗೌಡ ಪಾಟೀಲ, ಸುರೇಶ ಹೊನ್ನಪ್ಪನವರ, ಮಲ್ಲೇಶಪ್ಪ ಪರಪ್ಪನವರ, ಸುರೇಶ ಛಲವಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT