ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

220 ಟ್ರಾಕ್ಟರ್‌ಗಳಿಂದ ಬೃಹತ್‌ ರ‍್ಯಾಲಿ: ಹಾವೇರಿ ನಗರದಲ್ಲಿ ಮೊಳಗಿದ ರೈತ ಕಹಳೆ

ಕೇಂದ್ರದ ವಿರುದ್ಧ ಅನ್ನದಾತರ ಆಕ್ರೋಶ
Last Updated 26 ಜನವರಿ 2021, 16:01 IST
ಅಕ್ಷರ ಗಾತ್ರ

ಹಾವೇರಿ: ನಗರದಲ್ಲಿ ಮಂಗಳವಾರ ಎತ್ತ ನೋಡಿದರೂ ಹಸಿರು ಶಾಲುಗಳು ರಾರಾಜಿಸಿದವು. ಪ್ರಮುಖ ಬೀದಿಗಳಲ್ಲಿ 200ಕ್ಕೂ ಅಧಿಕ ಟ್ರಾಕ್ಟರ್‌ಗಳು ಸದ್ದು ಮಾಡಿದವು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತಾ ಅನ್ನದಾತರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ತಾಲ್ಲೂಕುಗಳಿಂದ ನಗರಕ್ಕೆ ಬಂದ ರೈತರ ಟ್ರಾಕ್ಟರ್‌ಗಳು ಮುರುಘಾಮಠದ ಬಳಿ ಒಗ್ಗೂಡಿದವು. ಅಲ್ಲಿಂದ ಹಳೇ ಪಿ.ಬಿ.ರಸ್ತೆಯಲ್ಲಿ ಸಾಗಿ, ಗುತ್ತಲ ರಸ್ತೆ ಮೂಲಕ ರೈಲ್ವೆ ನಿಲ್ದಾಣ, ಸುಭಾಷ್‌ ಸರ್ಕಲ್‌ ಮುಖಾಂತರ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ದೂಳೆಬ್ಬಿಸುತ್ತಾ ಜಮಾವಣೆಗೊಂಡವು. ದೆಹಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ರೈತ ಮುಖಂಡರಾದ ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ,ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗಿರುವ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್‌ ಬಿಲ್‌ ಖಾಸಗೀಕರಣ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಇಡೀ ದೇಶದ ರೈತರು ಬೀದಿಗೆ ಬೀಳುವಂತೆ ಮಾಡಿದೆ. ಕೃಷಿ ಪ್ರಧಾನವಾದ ದೇಶದಲ್ಲಿ ಅನ್ನದಾತರಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಜೀವಕ್ಕೆ ಬೆಲೆ ಇಲ್ಲವೇ?

ಎರಡು ತಿಂಗಳಿಂದ ಕೊರೆಯುವ ಚಳಿಯಲ್ಲಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಕೇಂದ್ರ ಸರ್ಕಾರ ಜಲಫಿರಂಗಿ, ಅಶ್ರುವಾಯು, ಲಾಠಿಚಾರ್ಜ್ ಮೂಲಕ ಹೋರಾಟದ ಸದ್ದಡಿಗಿಸುವ ಕೆಲಸ ಮಾಡುತ್ತಿದೆ. ಹೋರಾಟದ ಸಮಯದಲ್ಲಿ ಹಲವಾರು ರೈತರು ಪ್ರಾಣ ಕಳೆದುಕೊಂಡರೂ ಅವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ಹಠಮಾರಿ ಧೋರಣೆ ಕೈಬಿಟ್ಟು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರೈತರಿಗೆ ನಷ್ಟ:ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರ ನಿಗದಿ ಮಾಡಿದ ಕನಿಷ್ಠ ಬೆಂಬಲ ಬೆಲೆ₹1860 ಇದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹1200ಕ್ಕೆ ಮಾರಾಟವಾಗುತ್ತಿರುವುದರಿಂದ ಪ್ರತಿ ಕ್ವಿಂಟಲ್‌ಗೆ ₹660 ರೈತರಿಗೆ ನಷ್ಟವಾಗುತ್ತಿದೆ ಎಂದು ರೈತ ಮುಖಂಡರು ಬೇಸರ ವ್ಯಕ್ತಪಡಿಸಿದರು.

6 ತಿಂಗಳಿಂದ ರಾಜ್ಯ ಸರ್ಕಾರ ಹಾಲಿನ ಸಹಾಯಧನ ಪ್ರತಿ ಲೀಟರ್‌ಗೆ ₹6 ಬಾಕಿ ಉಳಿಸಿದ್ದು, ಹಾಲಿನ ಸಹಾಯಧನವನ್ನು ಕೊಟ್ಟಿಲ್ಲ. ಹಾಲು ಉತ್ಪಾದಕರು ಸಂಕಷ್ಟ ಎದುರಿಸುತ್ತಿದ್ದು, ಕೂಡಲೇ ಸಹಾಯಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮೊಹಮ್ಮದ್‌ಗೌಸ್‌ ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಶಿವಬಸಪ್ಪ ಗೋವಿ, ಮರಿಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಪ್ರಭುಗೌಡ ಬ.ಪ್ಯಾಟಿ, ಶಂಕ್ರಪ್ಪ ಶಿರಗಂಬಿ, ದಿಳ್ಳೆಪ್ಪ ಮಣ್ಣೂರ, ಚಂದ್ರಶೇಖರ ಜಾವಗಲ್‌, ಕರಬಸಪ್ಪ ಅಗಸಿಬಾಗಿಲು ಹಾಗೂ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT