ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಸರ್ಕಾರದ ವಿರುದ್ಧ ರೈತರ ರಣಕಹಳೆ, ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬಾಗಿಲು ಮುಚ್ಚಿದ್ದ ಅಂಗಡಿ ಮಳಿಗೆಗಳು
Last Updated 28 ಸೆಪ್ಟೆಂಬರ್ 2020, 13:25 IST
ಅಕ್ಷರ ಗಾತ್ರ

ಹಾವೇರಿ: ರೈತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ‘ಹಾವೇರಿ ಬಂದ್‌’ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ರೈತ ಸಂಘದ ಕಾರ್ಯಕರ್ತರು ರಣಕಹಳೆ ಮೊಳಗಿಸಿದರು.

ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಎಂದಿನಂತೆಯೇ ಇತ್ತು. ಆದರೆ, ಆಟೊ ಮತ್ತು ಟ್ಯಾಕ್ಸಿಗಳ ಸಂಚಾರ ಬಂದ್‌ ಆಗಿತ್ತು. ಹಾಲು, ತರಕಾರಿ, ಔಷಧ ಮಳಿಗೆಗಳು, ಆಸ್ಪತ್ರೆ, ಬ್ಯಾಂಕ್‌ ಹಾಗೂ ಸರ್ಕಾರಿ ಕಚೇರಿಗಳು ಬಾಗಿಲು ತೆರೆದಿದ್ದವು. ನಗರದ ಎಂ.ಜಿ.ರಸ್ತೆ, ಹಳೇ ಪಿ.ಬಿ.ರಸ್ತೆಯ ವಾಣಿಜ್ಯ ಮತ್ತು ವ್ಯಾಪಾರ ಮಳಿಗೆಗಳು ಬಹುತೇಕ ಬಂದ್‌ ಆಗಿದ್ದವು. ಅಲ್ಲಲ್ಲಿ ಕಿರಾಣಿ ಅಂಗಡಿಗಳು ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದ ದೃಶ್ಯ ಕಂಡು ಬಂದಿತು.

ಪ್ರತಿಭಟನಾ ಜಾಥಾ:

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ನೇತೃತ್ವದಲ್ಲಿನಗರದ ಮುರುಘಾ ಮಠದಿಂದ ತಮಟೆ ಬಾರಿಸುವ ಮೂಲಕ ಆರಂಭವಾದ ಪ್ರತಿಭಟನಾ ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರೈತರು ಅರೆಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆದರು. ಕುತ್ತಿಗೆಗೆ ನೇಣಿನ ಕುಣಿಕೆ ಹಾಕಿಕೊಂಡು, ರೈತರ ಪಾಲಿಗೆ ಮರಣ ಶಾಸನ ಎನಿಸಿರುವ ಭೂಸುಧಾರಣೆ, ಎಪಿಎಂಸಿ ಹಾಗೂ ವಿದ್ಯುತ್‌ ವಲಯ ಖಾಸಗೀಕರಣ ತಿದ್ದುಪಡಿ ಕಾಯ್ದೆಗಳನ್ನು ತೀವ್ರವಾಗಿ ಖಂಡಿಸಿದರು.

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಮಾವೇಶಗೊಂಡ ರೈತಸಂಘ, ದಲಿತ ಸಂಘರ್ಷ ಸಮಿತಿ, ಎಸ್‌ಎಫ್‌ಐ, ಜಯಕರ್ನಾಟಕ, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ಕಿಡಿಕಾರಿದರು.

ಭೂಮಿ ಕಸಿಯಲು ಬಿಡಲ್ಲ:

ರೈತ ಸಂಘದ ರಾಜ್ಯ ಸಂಚಾಲಕ ಮಾಲತೇಶ ಪೂಜಾರ ಮಾತನಾಡಿ,ದೇಶ ಅಂದ್ರೆ ರೈತರು, ರೈತರು ಅಂದ್ರೆ ದೇಶ ಎಂಬುದನ್ನು ಅರ್ಥ ಮಾಡಿಕೊಳ್ಳದ ಕೇಂದ್ರ ಸರ್ಕಾರ ಅಂಬಾನಿಗಳ ಪರ, ಬಂಡವಾಳಶಾಹಿಗಳ ಪರ ನಿಂತು ರೈತರ ಹಿತವನ್ನು ಬಲಿ ಕೊಡುತ್ತಿದೆ. ಅನ್ನ ಕೊಡುವ ರೈತರಿಂದ ಕೃಷಿ ಭೂಮಿ ಕಸಿದು, ಜೀತದಾಳು ಮಾಡಲು ಹೊರಟಿದೆ. ಕೃಷಿ ಭೂಮಿಯನ್ನು ಸರ್ಕಾರದ ಹುನ್ನಾರ ಫಲಿಸುವುದಿಲ್ಲ. ರೈತರಿಗೆ ವಿಷವಿಕ್ಕುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಸಂಚಾಲಕ ಆಸೀಫ್‌‌ ಜಗಳೂರ, ಎಂ.ಎನ್‌.ನಾಯಕ, ಚನ್ನಪ್ಪ ಮರಡೂರ, ಮುತ್ತು ಗುಡಗೇರಿ, ಗೋಣೆಪ್ಪ ಕರಿಗಾರ, ರಾಜು ತರ್ಲಘಟ್ಟ, ಹಾಲೇಶ್‌ ಕೆರೋಡಿ, ನೂರ್‌ ಅಹಮದ್ ಮುಲ್ಲಾ, ಬಸವರಾಜ ತಳವಾರ, ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಅಕ್ಷತಾ ಕೆ.ಸಿ., ಜಯಕರ್ನಾಟಕ ಸಂಘಟನೆಯ ಮುಖಂಡ ರಮೇಶ ಆನವಟ್ಟಿ, ಕಾಂಗ್ರೆಸ್‌ ಮುಖಂಡರಾದ ಎಂ.ಎಂ.ಹಿರೇಮಠ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಎಸ್‌ಎಫ್‌ಐ ಸಂಘಟನೆಯ ಬಸವರಾಜ ಭೋವಿ, ದಲಿತ ಸಂಘರ್ಷ ಸಮಿತಿಯ ಉಡಚಪ್ಪ ಮಾಳಗಿ ಸೇರಿದಂತೆ ಸಂಘ–ಸಂಸ್ಥೆಗಳ ಹಲವಾರು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT