ಮಂಗಳವಾರ, ಮಾರ್ಚ್ 9, 2021
31 °C
ನಗರಸಭೆ: ಚುರುಕುಗೊಂಡ ಕಾಮಗಾರಿ

ನಗರ ಸೌಂದರ್ಯ ಹೆಚ್ಚಿಸುವ ‘ಫೇವರ್ಸ್’

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣ ಎದುರಿನ ಪಾದಚಾರಿ ರಸ್ತೆಗೆ ಫೇವರ್ಸ್ ಹಾಕಿರುವುದು.

ಹಾವೇರಿ: ವಿಧಾನಸಭಾ ಚುನಾವಣೆಯ ಸಮಯದಲ್ಲಿ ನನೆಗುದಿಗೆ ಬಿದ್ದಿದ್ದ ನಗರದ ರಸ್ತೆ ಕಾಮಗಾರಿಗಳು ಈಚೆಗೆ ಚುರುಕುಗೊಂಡಿವೆ. ರಸ್ತೆಯ ಜೊತೆ ಪಾದಚಾರಿ ಹಾದಿಗೆ ಫೇವರ್ಸ್ ಹಾಕುವ ಕಾರ್ಯವು ಸೌಂದರ್ಯ ಹೆಚ್ಚಿಸಿದೆ.

ಈ ಹಿಂದೆ ನಗರದ ರಸ್ತೆಗಳು ಹದಗೆಟ್ಟಿದ್ದು, ‘ಹಾವೇರಿಯಲ್ಲಿ ಹಾಯ್‌ ಬಾರ್‍ದು...’ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಿ.ಬಿ. ರಸ್ತೆ ಹೊರತು ಪಡಿಸಿದರೆ, ಬೇರೆ ಯಾವುದೇ ರಸ್ತೆಗಳಿಗೆ ಪಾದಚಾರಿ ಹಾದಿಯೇ ಇರಲಿಲ್ಲ. ಇದ್ದ ಕೆಲವು ರಸ್ತೆಗಳ ಪಾದಚಾರಿ ಹಾದಿಗಳು ಒತ್ತುವರಿ, ಬಂಡಿ, ದುರಸ್ತಿ ಮತ್ತಿತರ ಕಾರಣಕ್ಕೆ ಸುಸ್ಥಿತಿಯಲ್ಲಿ ಇರಲಿಲ್ಲ.

ಶಾಸಕರಾಗಿದ್ದ ರುದ್ರಪ್ಪ ಲಮಾಣಿ ಮತ್ತು ಬಸವರಾಜ ಶಿವಣ್ಣನವರ ಪ್ರಯತ್ನದ ಫಲವಾಗಿ ಡಿ.ಸಿ. ಕಚೇರಿಗೆ ಹೋಗುವ ರಸ್ತೆ ಅಭಿವೃದ್ಧಿ ಕಂಡಿತ್ತು. ಉಳಿದಂತೆ ಬಹುತೇಕ ರಸ್ತೆಗಳು ಬಹುತೇಕ ಅಸ್ತವ್ಯಸ್ತಗೊಂಡಿತ್ತು. ಅಲ್ಪಸ್ವಲ್ಪ ಸುಸ್ಥಿತಿಯಲ್ಲಿದ್ದ ರಸ್ತೆಗಳಿಗೂ ಹಂಪ್ಸ್‌ ಹಾಕಲಾಗಿದ್ದು, ಸಂಚಾರವೇ ದುಸ್ತರವಾಗಿತ್ತು.

ಜೆ.ಪಿ. ವೃತ್ತದಿಂದ ಜೆ.ಎಚ್. ಪಟೇಲ್ ವೃತ್ತದ ತನಕ ರಸ್ತೆಯು ನಗರದ ಪ್ರಮುಖ ರಸ್ತೆಯಾಗಿದ್ದರೂ, ಅಲ್ಲಲ್ಲಿ ಅಗಲ ಕಿರಿದಾಗಿದೆ. ಪರ್ಯಾಯವಾಗಿ ಭಂಗಿ ರಸ್ತೆಗಳಿದ್ದರೂ ಅಭಿವೃದ್ಧಿ ಪಡಿಸಿಲ್ಲ. ಇದರಿಂದ ವಾಹನ ನಿಲುಗಡೆಗೆ (ಪಾರ್ಕಿಂಗ್) ಪರ್ಯಾಯ ಇಲ್ಲದಂತಾಗಿದೆ. ಇಂತಹ ಸಮಸ್ಯೆಗಳಿಂದಾಗಿ ನಗರದಲ್ಲಿ ಪಾದಚಾರಿಗಳೂ ಸಂಚರಿಸುವುದು ದುಸ್ತರವಾಗಿತ್ತು.

ರುದ್ರಪ್ಪ ಲಮಾಣಿ ಶಾಸಕರಾಗಿದ್ದ ಅವಧಿಯಲ್ಲಿ ಹಾವೇರಿ ನಗರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 2016–17ರ ಬಜೆಟ್‌ನಲ್ಲಿ  ₹50 ಕೋಟಿ ವಿಶೇಷ ಅನುದಾನ ಘೋಷಿಸಿದ್ದರು. ಇದರ ಜೊತೆ ಹಲವು ಯೋಜನೆಗಳನ್ನೂ ನೀಡಿದ್ದರು. ಈ ಪೈಕಿ ₹28.5 ಕೋಟಿಯ ವಿವಿಧ ಕಾಮಗಾರಿಗಳಿಗೆ 2017ರ ಅಕ್ಟೋಬರ್ 2ರಂದು ಚಾಲನೆ ದೊರಕಿತ್ತು.

₹50 ಕೋಟಿ ಪೈಕಿ ಸಿಂಧಗಿ ಮಠದ ಮುಂಭಾಗದ ರಸ್ತೆ, ತಹಶೀಲ್ದಾರ್‌ ನಿವಾಸದಿಂದ ಜೆ.ಎಚ್. ಪಟೇಲ್ ವೃತ್ತ, ಅಲ್ಲಿಂದ ಜೆ.ಪಿ. ಸರ್ಕಲ್‌ ಹಾಗೂ ಸುಭಾಸ್ ವೃತ್ತವಾಗಿ ರೈಲು ನಿಲ್ದಾಣ ತನಕದ ಎರಡು ರಸ್ತೆ ಕಾಮಗಾರಿಗಳು ಆರಂಭಗೊಂಡಿದ್ದವು. ಇದು ರಸ್ತೆ ಬದಿಗೆ ಫೇವರ್ಸ್‌ ಹಾಕುವ ಕಾಮಗಾರಿಗಳನ್ನೂ ಒಳಗೊಂಡಿತ್ತು. ನಗರ ಸೌಂದರ್ಯೀಕರಣಕ್ಕೆ ಪೂರಕವಾಗಿತ್ತು.

ಆದರೆ, ಚುನಾವಣಾ ಹೊಸ್ತಿಲಲ್ಲಿ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದವು. ಈ ಕಾಮಗಾರಿಗಳು ಮತ್ತೆ ಪುನಶ್ಚೇತನಗೊಂಡಿವೆ. ರಸ್ತೆ ಬದಿಯ ಫೇವರ್ಸ್ ಗಮನ ಸೆಳೆಯುತ್ತಿವೆ. ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡಲು ಸ್ಥಳ ಇಡಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.

ನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಹಾಗೂ ಶಾಸಕ ನೆಹರು ಓಲೇಕಾರ ಈಚೆಗೆ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಅಗತ್ಯ ಸಲಹೆ– ಸೂಚನೆ ನೀಡಿದ್ದರು. ಗುಣಮಟ್ಟದ ಕಾಮಗಾರಿ ನಡೆಯುವಂತೆ ಎಚ್ಚರಿಕೆ ವಹಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ. ಜನರ ನಿರೀಕ್ಷೆಯೂ ಹೆಚ್ಚಿದೆ.

ಸಮೀಪಿಸಿದ ನಗರಸಭೆ ಚುನಾವಣೆ
ನಗರಸಭೆಯ ಚುನಾವಣೆ ಸಮೀಪಿಸುತ್ತಿದೆ. ಆದರೆ, ಬಹುತೇಕ ವಾರ್ಡ್ ಬದಲಾವಣೆ, ಮೀಸಲಾತಿ ಬದಲಾವಣೆ ಕಾರಣ ಹಳೇ ಕೆಲಸಗಳು ಅಭ್ಯರ್ಥಿಗಳ ಫಲಿತಾಂಶದ ಮೇಲೆ ಪ್ರಭಾವ ಬೀಳುವ ಸಾಧ್ಯತೆ ಕಡಿಮೆ ಇದೆ. ಆದರೆ, ಪಕ್ಷಗಳ ಸಾಧನೆಯ ಮೇಲೆ ಪ್ರಭಾವ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ ಕಾಮಗಾರಿಯು ಜನಪ್ರತಿನಿಧಿಗಳ ಮೇಲೂ ಪ್ರಭಾವ ಬೀರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು