ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಕನಿಷ್ಠ ವೇತನ ಜಾರಿಗಾಗಿ ಹೋರಾಡಿ

ಗ್ರಾಮ ಪಂಚಾಯಿತಿ ನೌಕರರ ಸಂಘದ ವಿಭಾಗ ಮಟ್ಟದ ವಿಸ್ತೃತ ಸಭೆ
Last Updated 11 ಜೂನ್ 2022, 13:49 IST
ಅಕ್ಷರ ಗಾತ್ರ

ಹಾವೇರಿ: ಪಂಚಾಯಿತಿಗಳಲ್ಲಿ ಅತ್ಯಂತ ಕಡಿಮೆ ಸಂಬಳ ಪಡೆಯುತ್ತಿದ್ದ ಸಿಬ್ಬಂದಿ, ಸಿಐಟಿಯು ಸಂಯೋಜಿತ ಪಂಚಾಯಿತಿ ನೌಕರರ ಸಂಘಟನೆಯು ಐಕ್ಯ ಹೋರಾಟ ನಡೆಸಿರುವ ಫಲವಾಗಿ ಇಂದು ಹತ್ತಾರು ಸಾವಿರ ವೇತನ ಪಡೆಯಲು ಸಾಧ್ಯವಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಜಿ. ರಾಮಕೃಷ್ಣ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿಭಾಗ ಮಟ್ಟದ ವಿಸ್ತೃತ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಾಸಕರ ವೇತನ ಹೆಚ್ಚಳ ಐವತ್ತರಿಂದ ಅರವತ್ತು ಪ್ರತಿಶತ ಹೆಚ್ಚಾಯಿತು. ಆದರೆ ಗ್ರಾಮ ಪಂಚಾಯಿತಿ ನೌಕರರ ವೇತನ ಹೆಚ್ಚಾಗಲಿಲ್ಲ. ಸಿಪಾಯಿ, ನೀರಗಂಟಿ ಸೇರಿದಂತೆ ಸಿಬ್ಬಂದಿಯ ವೇತನ ಅತ್ಯಂತ ಕಡಿಮೆಯಿದೆ. ಇದನ್ನು ಕನಿಷ್ಠ ವೇತನ ನೀಡಬೇಕಾಗಿತ್ತು. ಡಿ.ಎ ಹೊರತುಪಡಿಸಿದರೆ ವೇತನ ಹೆಚ್ಚಳವಾಗಲೇ ಇಲ್ಲ. ಇಂಧನ ಮತ್ತು ದಿನಸಿ ವಸ್ತುಗಳ ಬೆಲೆ ಏರಿಕೆಗೆ ತಕ್ಕಂತೆ ಪಂಚಾಯಿತಿ ಸಿಬ್ಬಂದಿಯ ವೇತನ ಹೆಚ್ಚಿಸದಿರುವ ಪರಿಣಾಮ ಪಂಚಾಯಿತಿ ನೌಕರರು ಅತ್ಯಂತ ದಯನೀಯ ಸ್ಥಿತಿ ತಲುಪಿದ್ದಾರೆ ಎಂದರು.

ಕೊರೊನಾ ಸಂದರ್ಭದಲ್ಲಿ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದಾಗಲೂ ಸರಿಯಾದ ವೇತನ ಕೊಡದೇ ಸರ್ಕಾರ ಸತಾಯಿಸಿತು. ಅಧಿಕಾರಿಗಳು ಕೂಡ ವೇತನ ಹೆಚ್ಚಳ ಕುರಿತು ಸಭೆ ಕರೆಯುವುದಾಗಿ ಹೇಳಿದವರು ಸಭೆ ನಿಗದಿ ಮಾಡಲೇ ಇಲ್ಲ. ಹೀಗೆ ಬಡಪಾಯಿ ಸಿಬ್ಬಂದಿಯನ್ನು ಸರ್ಕಾರವೇ ಸ್ವತಃ ಸಂಕಷ್ಟಗಳಿಗೆ ದೂಡಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸಮಿತಿ ಖಜಾಂಚಿ ಆರ್.ಎಸ್ ಬಸವರಾಜ ಮಾತನಾಡಿ,ಯಾರೂ ಕೂಡ ಹಸಿವಿನಿಂದ ಸಾಯಬಾರದು. ದುಡಿವ ಜನರ ಬದುಕು ಹಸನಾಗಬೇಕು. ಶ್ರಮಿಕರ ಏಳಿಗೆಯೇ ಸಿಐಟಿಯು ಸಂಘಟನೆಯ ಧ್ಯೇಯವಾಗಿದೆ. ಹೀಗಾಗಿ ಸಿಬ್ಬಂದಿಗಳು ತಮ್ಮ ಹಕ್ಕುಗಳನ್ನು ಅರಿತು ಜಾಗೃತಗೊಳ್ಳಬೇಕು ಎಂದರು.

‘ಎಲ್ಲ ಸಿಬ್ಬಂದಿಗೂ ಪಿಂಚಣಿ ನೀಡಿ’

ರಾಜ್ಯ ಉಪಾಧ್ಯಕ್ಷ ಎಂಬಿ ನಾಡಗೌಡ ಮಾತನಾಡಿ, ಪಂಚಾಯಿತಿ ಸಿಬ್ಬಂದಿಗೆ ಕನಿಷ್ಠ ವೇತನ ನೀಡಬೇಕಾದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಜೊತೆಗೆ ಪಂಚಾಯಿತಿಯಡಿ ಹೊರಗುತ್ತಿಗೆ ಕೆಲಸದವರನ್ನು ಸೇರಿಸಿಕೊಂಡು ಹಲವಾರು ವರ್ಷಗಳಿಂದ ದುಡಿದ, ದುಡಿಯುತ್ತಿರುವ ಸಿಬ್ಬಂದಿಗಳನ್ನೇ ಕೆಲಸದಿಂದ ತೆಗೆದು ಹಾಕುವ ದುಷ್ಟತನಕ್ಕೆ ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಈ ದುಷ್ಟ ನೀತಿಯ ವಿರುದ್ಧ ಸಿಬ್ಬಂದಿ‌ ಕೆಲಸ ಉಳಿಸಿಕೊಳ್ಳುವುದಕ್ಕಾಗಿ ಸಂಘಟಿತರಾಗಿ ಪ್ರಬಲ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಅನುಮೋದನೆಗೊಂಡ ಸಿಬ್ಬಂದಿಗೆ ಮಾತ್ರ ಪಿಂಚಣಿ ಕೊಡುವುದಾಗಿ ಸರ್ಕಾರ ವಾದ ಹೂಡಿದೆ. ಪಿಂಚಣಿ ಸೌಲಭ್ಯ ಪಂಚಾಯಿತಿಯಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗಳಿಗೂ ದೊರೆಯಲೇಬೇಕು ಎಂಬುದು ನಮ್ಮ ಪ್ರಬಲ ವಾದವಾಗಿದೆ ಎಂದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಉಪಾಧ್ಯಕ್ಷ ಬಿಐ ಈಳಗೇರ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಅಂದಾನೆಪ್ಪ ಹೆಬಸೂರು ವಹಿಸಿದ್ದರು. ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ಧಾರವಾಡ ಜಿಲ್ಲಾ ನಾಯಕಿ ಪುಷ್ಪಾ ಘಾರ್ಗೆ, ಉತ್ತರ ಕನ್ನಡ ಜಿಲ್ಲಾ ಮುಖಂಡ ಮುತ್ತು ಪೂಜಾರಿ, ಮೋಹನ, ಮಲ್ಲೇಶಣ್ಣ ಶಿಗ್ಗಾವಿ, ಮುತ್ತು, ಕುಮಾರ ಬ್ಯಾಡಗಿ, ಆಂಜನೇಯ ರಟ್ಟಿಹಳ್ಳಿ, ಅಜ್ಜಪ್ಪ ಬಾರ್ಕಿ, ಗಣೇಶ್, ಸುಭಾಸ್ ಹಾವೇರಿ, ಪರಮೇಶ ಪುರದ ಇದ್ದರು ಜಿಲ್ಲಾ ಕಾರ್ಯದರ್ಶಿ ಜಗದೀಶ ಕೋಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT