ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಯ ನಡುವೆಯೇ ಕುಡಿಯುವ ನೀರಿಗೆ ತತ್ವಾರ!

ಮುಳುಗಿದ ಬೋರ್‌ವೇಲ್‌ಗಳು, ಪ್ರವಾಹದ ನೀರು ಕುಡಿಯಲು ಬಳಕೆ
Last Updated 13 ಆಗಸ್ಟ್ 2019, 9:11 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಮಳೆರಾಯನ ಮುನಿಸು ಕೊಂಚ ಕಡಿಮೆಯಾಗಿದ್ದು ಭಾನುವಾರ ಇಡೀ ದಿನ ಬಿಸಿಲು ಝಳಪಿಸಿತು. ಜಲಾವೃತ ಗ್ರಾಮಗಳಲ್ಲಿ ನೀರಿನ ಪ್ರಮಾಣವೂ ಕಡಿಮೆ ಆಗುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ಆ ಊರುಗಳು ಸಹಜ ಸ್ಥಿತಿಗೆ ಮರಳುವ ಲಕ್ಷಣ ತೋರುತ್ತಿವೆ. ಆದರೆ, ನೆರೆಯ ನಡುವೆಯೇ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತಾತ್ಪಾರ ಉಂಟಾಗಿದೆ!

ಗಳಗನಾಥ,ಗೂಯಿಲಗೂಂದಿ, ಬೆಳವಗಿ, ಗುತ್ತಲ, ಕಂಚಾರಗಟ್ಟಿ, ಮೇವುಂಡಿ, ತೇರದಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ನದಿ ದಂಡೆಯಲ್ಲೇ ಮಾಡಲಾಗಿದ್ದ ಬೋರ್‌ವೇಲ್‌ಗಳೆಲ್ಲ ಮುಳುಗಿರುವುದರಿಂದ, ಬಹುತೇಕ ಮಂದಿಗೆ ಈಗ ಪ್ರವಾಹದ ನೀರೇ ಗಂಟಲು ಒಣಗಿಸುತ್ತಿದೆ.

‘ನಮ್ಮ ಮನೆಗಳು ಸ್ವಲ್ಪ ಎತ್ತರದ ಪ್ರದೇಶದಲ್ಲಿ ಇರುವುದರಿಂದ ನಾವಿನ್ನೂ ಪ್ರವಾಹಕ್ಕೆ ಸಿಲುಕಿಲ್ಲ. ಆದರೆ, ವಿದ್ಯುತ್ ಸಂಪರ್ಕವಿಲ್ಲದ ಹಾಗೂ ಬೋರ್‌ವೆಲ್‌ಗಳು ಬಂದ್ ಆಗಿರುವ ಕಾರಣ ನಾಲ್ಕೈದು ದಿನಗಳಿಂದ ಕುಡಿಯಲು ನೀರಿಲ್ಲ. ಹೀಗಾಗಿ ರಾಡಿಯಾಗಿರುವ ನೆರೆಯ ನೀರನ್ನೇ ಕೊಡಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದೇವೆ. ಇದನ್ನೇ ಫಿಲ್ಟರ್ ಮಾಡಿ ಕುಡಿಯಲು ಹಾಗೂ ಅಡುಗೆಗೆ ಬಳಸುತ್ತಿದ್ದೇವೆ’ ಎಂದು ಗಳಗನಾಥ ಗ್ರಾಮದ ನಿವಾಸಿಗಳು ಹೇಳಿದರು.‌

‘ಮಳೆ ನೀರು ತುಂಬ ರಾಡಿ ಇದೆ. ಆದರೆ, ಇದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ. ಅಧಿಕಾರಿಗಳು ಮನೆ ಕಳೆದುಕೊಂಡವರಿಗಷ್ಟೇ ಕುಡಿಯುವ ನೀರಿನ ಕ್ಯಾನ್‌ಗಳನ್ನು ಒದಗಿಸುತ್ತಿದ್ದಾರೆ. ಅವರ ಮಾನವೀಯತೆಗೆ, ಶ್ರಮಕ್ಕೆ ನಾವೂ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಆದರೆ, ನಮ್ಮ ಪಾಡನ್ನೂ ಯಾರಾದರೊಬ್ಬರು ಕೇಳಬೇಕಲ್ಲ’ ಎಂದು ಪ್ರಶ್ನಿಸುತ್ತಾರೆ ಗೊಯಿಲಗೊಂದಿಯ ಭರ್ಮಪ್ಪ ಬಸಣ್ಣೆನವರ.

‘ವರದಾ ಹಾಗೂ ಧರ್ಮಾ ನದಿಗಳು ಗಳಗನಾಥ ಕೂಡುತ್ತವೆ. ಅಲ್ಲಿಂದ ಸ್ವಲ್ಪ ಮುಂದೆಯೇ ತುಂಗಭದ್ರಾ ಕೂಡ ಈ ನದಿಗಳನ್ನು ಕೂಡುತ್ತದೆ. ಹೀಗಾಗಿ, ಅಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲಾಗುತ್ತಿದೆ.ರೈತರು ಹಾಗೂ ವಿವಿಧ ಸಂಘಸಂಸ್ಥೆಗಳಿಂದ ಆಹಾರ ಸಾಮಗ್ರಿಗಳು ಹಾಗೂ ಕುಡಿಯುವ ನೀರಿನ ಕ್ಯಾನ್‌ಗಳು ಬರುತ್ತಿದ್ದು, ಅವುಗಳನ್ನು ಗಂಜಿಕೇಂದ್ರಗಳಿಗೆ ಸ್ಥಳಾಂತರಿಸುತ್ತಿದ್ದೇವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಗೋಶಾಲೆ ಆರಂಭ: ‘ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆಹಿರೇಕೆರೂರಿನ ಮಾಸೂರ, ಶಿಗ್ಗಾವಿಯ ಚಟಾಪುರ ಹಾಗೂ ಹಾವೇರಿಯ ವರದಾಹಳ್ಳಿಯಲ್ಲಿ ಮೂರು ಗೋಶಾಲೆಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ 72 ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ. ನೆರೆಗೆ 20 ಕುರಿಗಳು, ಎರಡು ಎಮ್ಮೆ ಹಾಗೂ ಮೂರು ಹಸುಗಳು ಅಸುನೀಗಿವೆ’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದರು.

ಭಾನುವಾರ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ‘ಮಳೆ ಹಾನಿ ಪ್ರಮಾಣ ಹಾಗೂ ಬೇಕಾಗಬಹುದಾದ ಅನುದಾನದ ಕುರಿತು ಸಮಗ್ರ ವರದಿ ತಯಾರಿಸಬೇಕು.ಹಾನಿ ಪ್ರಮಾಣ ದಾಖಲು ಮಾಡುವಾಗ, ಆ ಸ್ಥಳಗಳ ಫೋಟೊಗಳನ್ನೂ ಕಡ್ಡಾಯವಾಗಿ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

‘ಪ್ರಾಥಮಿಕ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 188 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದು, 2,479 ಮನೆಗಳು ಬಾಗಶಃ ಹಾನಿಯಾಗಿವೆ. ₹ 8 ಕೋಟಿ ನಷ್ಟ ಎಂದು ಅಂದಾಜಿಸಲಾಗಿದೆ. ಹಾಗೆಯೇ 42,665 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ₹ 48 ಕೋಟಿ ನಷ್ಟವೆಂದು ಅಂದಾಜಿಸಲಾಗಿದೆ’ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ಒಪ್ಪಿಸಿದರು.

ಸಂಪರ್ಕ ಕಲ್ಪಿಸಲು ಕ್ರಮ: ‘ಕುಡಿಯುವ ನೀರು, ವಿದ್ಯುತ್ ಹಾಗೂ ರಸ್ತೆ ಸಂಪರ್ಕ ಕಡಿತ ಆಗಿರುವ ಪ್ರದೇಶಗಳಿಗೆ ತಕ್ಷಣ ಪುನರ್ವಸತಿ ಕಲ್ಪಿಸಬೇಕು. ಕುಡಿಯುವ ನೀರಿನ ಪೈಪ್‍ಲೈನ್‍ನಲ್ಲಿ ಕಲುಷಿತವಾದ ನೀರು ಮಿಶ್ರಣವಾಗದಂತೆ ಎಚ್ಚರ ವಹಿಸಬೇಕು. ತಕ್ಷಣ ಪೈಪ್‍ಗಳನ್ನು ಬದಲಾಯಿಸಬೇಕು’ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಪ್ರಮಾಣ ಪತ್ರ ಪಡೆದರಷ್ಟೇ ತರಗತಿ

‘ಲೋಕೋಪಯೋಗಿ ಇಲಾಖೆಯ ಸಹಕಾರ ಪಡೆದು, ನೆರೆಪೀಡಿತ ಗ್ರಾಮಗಳ ಪ್ರತಿ ಶಾಲೆಗಳನ್ನೂ ಪರಿಶೀಲಿಸಿ. ಗೋಡೆ ಶಿಥಿಲವಿದ್ದರೆ ಯಾವುದೇ ಕಾರಣಕ್ಕೂ ತರಗತಿ ನಡೆಸಲು ಬಿಡಬೇಡಿ. ಪ್ರತಿ ಶಾಲೆಯೂ, ‘ಕೊಠಡಿ ಯೋಗ್ಯವಾಗಿದೆ’ ಎಂಬ ಕುರಿತು ಪ್ರಮಾಣ ಪತ್ರ ಪಡೆಯಬೇಕು. ಆ ನಂತರವೇ ತರಗತಿ ಪುನರಾರಂಭ ಮಾಡಬೇಕು. ಈ ನಿಯಮ ಕಡ್ಡಾಯವಾಗಿ ಪಾಲನೆ ಆಗಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕೃಷ್ಣ ಬಾಜಪೇಯಿ ಹೇಳಿದ್ದಾರೆ.

ಸಂಚಾರ ಬಂದ್, ಹಿತ್ತಲಲ್ಲೇ ಅಂತ್ಯಸಂಸ್ಕಾರ!

ಜಲಪ್ರಳಯಕ್ಕೆ ಹಾನಗಲ್ ತಾಲ್ಲೂಕಿನ ಹರವಿ ಗ್ರಾಮ ಅಕ್ಷರಶಃ ದ್ವೀಪದಂತಾಗಿದೆ.ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಈ ಗ್ರಾಮದ ಯಲ್ಲವ್ವ ಗುರುಸಿದ್ದಪ್ಪ ಭದ್ರಣ್ಣನವರ (49), ಗುರುವಾರ ಸಂಜೆ ಅಸುನೀಗಿದ್ದರು. ನೆರೆಯಿಂದ ಸ್ಮಶಾನದ ರಸ್ತೆಗಳೆಲ್ಲ ಬಂದ್ ಆಗಿದ್ದರಿಂದ, ಕುಟುಂಬ ಸದಸ್ಯರು ಮನೆಯಮನೆಯ ಹಿತ್ತಲಲ್ಲೇ ಹೂತು ಅಂತಿಮಸಂಸ್ಕಾರ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT