ಭಾನುವಾರ, ಆಗಸ್ಟ್ 25, 2019
28 °C
ಸೂರು ಕಳೆದುಕೊಂಡ ಸಂತ್ರಸ್ತರ ಸಂಕಟ

ಇದೇನಾ ನಮ್ಮನೆ, ಕೊಟ್ಟಿಗೆ ಎಲ್ಲೋಯ್ತು...ಗಂಜಿಕೇಂದ್ರ ಬಿಟ್ಟ ಕೆಲ ಕುಟುಂಬಗಳು

Published:
Updated:
Prajavani

ಹಾವೇರಿ:‌ ಅಯ್ಯೋ ನಮ್ ಮನೇನಾ ಇದು. ಪಕ್ಕದಲ್ಲಿದ್ದ ಕೊಟ್ಟಿಗೇನೇ ಕಾಣಿಸ್ತಿಲ್ಲ. ಅಯ್ಯೋ ಪಾಪಾ.. ಹುಸೇನ್ ಸಾಬ್‌ರ ಮನೆಯೇ ಬಿದ್ದು ಹೋಗಿದೆ. ಗೋಡೆ ಪೂರ್ತಿ ತೋಯ್ದು ಹೋಗಿರುವ ಈ ಮನೆಯಲ್ಲಿ ಯಾವ ಧೈರ್ಯದಲ್ಲಿ ಇರೋದಪ್ಪಾ. ಅದೆಷ್ಟು ಹಾವು–ಚೇಳುಗಳು ಒಳಗೆ ಸೇರಿಕೊಂಡಿದ್ದಾವೋ...

ನೆರೆ ಪ್ರಮಾಣ ಕಡಿಮೆಯಾದ ಬೆನ್ನಲ್ಲೇ ಗಂಜಿಕೇಂದ್ರದಿಂದ ನಾಗನೂರಿಗೆ ಮರಳಿದ ಶಾಂತಮ್ಮ, ತಮ್ಮ ಮನೆಯ ಸ್ಥಿತಿ ಕಂಡು ಪ್ರತಿಕ್ರಿಯಿಸಿದ ಪರಿ ಇದು. ನಾಗನೂರು ಮಾತ್ರವಲ್ಲದೆ ಪಕ್ಕದ ವರದಹಳ್ಳಿ ಹಾಗೂ ಕುಣಿಮೆಳ್ಳಿಹಳ್ಳಿ ಗ್ರಾಮಗಳಲ್ಲೂ ಸೋಮವಾರ ಇದೇ ಪರಿಸ್ಥಿತಿ ಇತ್ತು.

ಊರುಗಳು ಜಲಾವೃತವಾಗಿದ್ದರಿಂದ ಹಳೆ ಮನೆಗಳು ಹಾಗೂ ಗುಡಿಸಲುಗಳು ಕೊಚ್ಚಿ ಹೋಗಿದ್ದವು. ಸಂತ್ರಸ್ತರು ತಮ್ಮ ಗೂಡುಗಳಿದ್ದ ಸ್ಥಳಕ್ಕೆ ಬಂದು ನೋವು ತೋಡಿಕೊಳ್ಳುತ್ತಿದ್ದರು. ಕೊನೆಗೆ, ಆಶ್ರಯಕ್ಕೆ ಬೇರೆ ಮಾರ್ಗವಿಲ್ಲದೆ ಗಂಜಿಕೇಂದ್ರದ ದಾರಿಯನ್ನೇ ಹಿಡಿದರು. ಗಟ್ಟಿ ಗೋಡೆವುಳ್ಳ ಹಾಗೂ ಹೊಸದಾಗಿ ಕಟ್ಟಿಸಿದ ಮನೆಗಳು ಮಾತ್ರ ಪ್ರವಾಹದ ಸವಾಲನ್ನು ಗೆದ್ದು ನಿಂತಿದ್ದವು. ಅವರೆಲ್ಲ ಸೋಮವಾರ ತಮ್ಮ ತಮ್ಮ ಮನೆಗಳಿಗೆ ಮರಳಿ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದರು.

‘ನಾಲ್ಕು ದಿನಗಳಿಂದ ಮನೆ ಮುಳುಗಿತ್ತು. ಆದರೆ, ಅದು ಬಿದ್ದಿರಬಹುದು ಎಂದು ಊಹಿಸಿರಲಿಲ್ಲ. ಶನಿವಾರ ಸಂಜೆಯಿಂದ ಹಂತ ಹಂತವಾಗಿ ನೆರೆ ಪ್ರಮಾಣ ತಗ್ಗುತ್ತಾ ಬಂತು. ನೀರು ಎಷ್ಟೇ ಕಡಿಮೆಯಾದರೂ, ಮನೆ ಮಾತ್ರ ಕಾಣಿಸುತ್ತಲೇ ಇರಲಿಲ್ಲ. ಆದರೆ, ಸೋಮವಾರ ಬೆಳಿಗ್ಗೆ ನನಗೆ ಅರಿವಾಯಿತು. ಮನೆ ಪೂರ್ತಿ ಕುಸಿದು ಗೋಡೆ, ಹಂಚುಗಳೂ ಕೊಚ್ಚಿ ಹೋಗಿದ್ದವು. ಜಾನುವಾರುಗಳನ್ನು ಸಂಬಂಧಿಕರ ಮನೆಗೆ ಬಿಟ್ಟು ಬರಲು ಕುಂದೂರಿಗೆ ಹೊರಟಿದ್ದೇನೆ. ವಾಪಸ್ ಬಂದು ಸೂರಿಗೆ ವ್ಯವಸ್ಥೆ ಮಾಡಿಕೊಳ್ಳುತ್ತೇನೆ’ ಎಂದು ಬೇಸರ ವ್ಯಕ್ತಪಡಿಸಿದರು ಹುಸೇನ್ ಸಾಬ್ ಖುರ್ಚಿ.

ನೀರು, ಕರೆಂಟ್ ಇಲ್ಲ: ವರದಾ ನದಿ ತುಂಬಿದ್ದರಿಂದ ಪೂರ್ತಿ ಮುಳುಗಡೆಯಾಗಿದ್ದ ಕುಣಿಮೆಳ್ಳಿಹಳ್ಳಿ ಗ್ರಾಮವೂ ಸಹಜ ಸ್ಥಿತಿಗೆ ಬಂದಿದೆ. ಬೋರ್‌ವೆಲ್‌ಗಳು ಬಂದ್ ಆಗಿ ಇಲ್ಲಿನ ನೀರಿನ ಸರಬರಾಜು ಪೂರ್ತಿ ಬಂದ್ ಆಗಿದೆ. ಸ್ನಾನ, ಬಟ್ಟೆ–ಪಾತ್ರೆ ತೊಳೆಯುವುದಕ್ಕೆ ಇಲ್ಲಿನ ನಿವಾಸಿಗಳು ನೆರೆಯ ನೀರನ್ನೇ ಡ್ರಮ್‌ಗಳಲ್ಲಿ ಸಂಗ್ರಹಿಸಿದ್ದಾರೆ.

‘ನಾವೆಲ್ಲ ಆ.7ರಂದು ಗಂಜಿಕೇಂದ್ರ ಸೇರಿದವರು. ಆ ದಿನ ಅಗತ್ಯ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಮನೆ ಖಾಲಿ ಮಾಡಿದ್ದೆವು. ಈಗ ಮನೆ ಬಿಟ್ಟು ಬೇರ‍್ಯಾವ ವಸ್ತುಗಳೂ ಇಲ್ಲಿ ಉಳಿದಿಲ್ಲ. ಹಾವು–ಚೇಳುಗಳ ಭಯದಲ್ಲಿ ಮಕ್ಕಳನ್ನು ಸಂಬಂಧಿಕರ ಮನೆಗಳಿಗೆ ಕಳುಹಿಸಿದ್ದೇವೆ. ಈ ಪ್ರದೇಶ ಪೂರ್ತಿ ಸ್ವಚ್ಛವಾದ ಬಳಿಕ ಮಕ್ಕಳನ್ನು ಕರೆಸಿಕೊಳ್ಳುತ್ತೇವೆ. ಮೊದಲು ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕಾಗಿ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇವೆ’ ಎಂದರು ಮಹದೇವಪ್ಪ–ಈರಮ್ಮ ದಂಪತಿ.  

ಶಾಲೆಗಳು ಪುನರಾರಂಭ

ನಿರಂತರ ಮಳೆಯಿಂದಾಗಿ ಒಂದು ವಾರದಿಂದ ರಜೆ ನೀಡಲಾಗಿದ್ದ ಶಾಲಾ–ಕಾಲೇಜುಗಳು ಮಂಗಳವಾರದಿಂದ (ಆ.13) ಪುನರಾರಂಭ ಆಗಲಿವೆ. ಕೊಠಡಿಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಗೋಡೆಗಳು ಶಿಥಿಲಗೊಂಡಿದ್ದರೆ ಪರ್ಯಾಯ ಕಟ್ಟಡಗಳಲ್ಲಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ತಿಳಿಸಿದ್ದಾರೆ.

Post Comments (+)