ಮುಡಿಗೇರದ ಹೂವಿನ ‘ದರ’!

7
ಪ್ರತಿ ಮಹಾಲಯದಂದು ಏರಿಕೆ ಕಾಣುವ ಬೆಲೆ: ದಸರಾದಲ್ಲಿ ಉತ್ತುಂಗ

ಮುಡಿಗೇರದ ಹೂವಿನ ‘ದರ’!

Published:
Updated:
Deccan Herald

ಹಾವೇರಿ: ನಾಡಿನಾದ್ಯಂತ ಮಹಾಲಯ ಅಮಾವಾಸ್ಯೆಯ ಬಳಿಕ ‘ನವರಾತ್ರಿ–ದಸರಾ’ವು ರಂಗೇರುತ್ತದೆ. ಈ ಮೆರುಗನ್ನು ಬಣ್ಣ ಬಣ್ಣದ ಹೂಗಳ ಕಂಪು ಇನ್ನಷ್ಟು ಹೆಚ್ಚಿಸುತ್ತವೆ. ಅವು ದೇವರ ಗುಡಿ ಅಥವಾ ಯುವತಿಯ ಮುಡಿಗೇರಿದರೂ ಪರವಾಗಿಲ್ಲ, ದರ ಏರಿಕೆಯೇ ರೈತರು ಮತ್ತು ವ್ಯಾಪಾರಿಗಳ ಮೊಗ ಅರಳಿಸುತ್ತವೆ‌. ಆದರೆ, ಈ ಬಾರಿ, ‘ಮಹಾಲಯ’ದ ಸೋಮವಾರ ಇಲ್ಲಿನ ಹೂವಿನ ಮಾರುಕಟ್ಟೆಯಲ್ಲಿ ರಂಗೇರಿಲಿಲ್ಲ. ನಿರೀಕ್ಷಿತ ಮಾರಾಟ ಹಾಗೂ ಬೆಲೆ ಇಲ್ಲದಿರುವುದೇ ಕಾರಣವಾಗಿದೆ.

ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ರಸ್ತೆ ಮುಂಭಾಗದಲ್ಲಿ ನಸುಕಿನ ಜಾವ ಹೂವಿನ ವ್ಯಾಪಾರ ಶುರುವಾಗುತ್ತದೆ. ಈ ವ್ಯಾಪಾರವು ಶ್ರಾವಣದ ಬಳಿಕ ಚಿಗುರಿಕೊಂಡರೆ, ಮಹಾಲಯದ ಬಳಿಕ ಉತ್ತುಂಗಕ್ಕೇರಿ, ದೀಪಾವಳಿ ತನಕ ಹೆಚ್ಚಿರುತ್ತದೆ. ದಸರಾದಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತದೆ. ಆದರೆ, ಈ ಬಾರಿ ನಿರೀಕ್ಷಿತ ವಹಿವಾಟು ಹಾಗೂ ಧಾರಣೆಯ ಲಕ್ಷಣಗಳು ಕಂಡುಬಂದಿಲ್ಲ ಎಂಬುದು ವ್ಯಾಪಾರಿಗಳ ಕೊರಗು.

‘ಕಳೆದ ವರ್ಷ ಮಹಾಲಯದಂದು ಕೆ.ಜಿ. ಚೆಂಡು ಹೂ ₹40ಕ್ಕೆ ಮಾರಾಟಗೊಂಡಿದ್ದರೆ, ದಸರಾದಲ್ಲಿ ₹100 ತನಕ ಮಾರಾಟಗೊಂಡಿತ್ತು. ಆದರೆ, ಈ ಸೋಮವಾರ ₹10ಕ್ಕೂ ಖರೀದಿಸುವವರು ಇಲ್ಲದಾಗಿದೆ. ಬಹುತೇಕ ಹೂವುಗಳು ‘ಏಕ್‌ ದಿನ್‌ ಕಾ ಸುಲ್ತಾನ್‌’. ಮರುದಿನ ಬಾಡಿ ಹೋಗುತ್ತವೆ. ಹೀಗಾಗಿ, ಹೂವು ವ್ಯಾಪಾರ ಆಗದಿದ್ದರೆ, ಭಾರಿ ನಷ್ಟ ’ ಎಂದು ವ್ಯಾಪಾರಿ ಸಾದಿಕ್ ಲಿಂಗದಹಳ್ಳಿ ತಿಳಿಸಿದರು.

ಹಾವೇರಿಯಲ್ಲಿ ಕೆಂಪು ಹಾಗೂ ಹಳದಿ ಚೆಂಡು ಹೂವು, ಸುಗಂಧ ರಾಜ, ಮಾರಿಗೋಲ್ಡ್, ಸೇವಂತಿಗೆಯನ್ನು ಬೆಳೆಯುತ್ತಾರೆ. ಗುಲಾಬಿ, ಗಲಾಟೆ ಮತ್ತಿತರ ಹೂವುಗಳು ಅಲ್ಪಸ್ವಲ್ಪ ಪ್ರಮಾಣದಲ್ಲಿವೆ. ಹೀಗಾಗಿ, ಚಿಕ್ಕಬಳ್ಳಾಪುರ, ಬೆಂಗಳೂರು, ಹೊಸಕೋಟೆಯಿಂದ ತರಿಸಿಕೊಳ್ಳುತ್ತೇವೆ ಎಂದು ಸಾದಿಕ್ ವಿವರಿಸಿದರು.

‘ನಾವು ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಈ ವರ್ಷ ವ್ಯಾಪಾರ ಕುಸಿತ ಕಂಡಿದೆ. ಆದರೆ, ತೀರಾ ಆತಂಕ ಪಡಬೇಕಾದ ಅಗತ್ಯವಿಲ್ಲ. ನವರಾತ್ರಿ, ದಸರಾ ಹಾಗೂ ದೀಪಾವಳಿಯಲ್ಲಿ ಮಾರುಕಟ್ಟೆ ಏರಿಕೆ ಕಾಣಬಹುದು’ ಎಂದು ವ್ಯಾಪಾರಿ ಎಸ್‌.ಯು. ಸವಣೂರ ವಿಶ್ವಾಸ ವ್ಯಕ್ತಪಡಿಸಿದರು.

ಹಾವೇರಿಯಿಂದ ಹುಬ್ಬಳ್ಳಿ, ಗೋವಾ, ಕೊಲ್ಲಾಪುರ, ಪುಣೆ ಸೇರಿದಂತೆ ವಿವಿಧ ಮಾರುಕಟ್ಟೆಗಳಿಗೆ ಹೂ ಕಳುಹಿಸುತ್ತಾರೆ. ರಾತ್ರಿ ವೇಳೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಟಾಪ್‌ ಮೇಲೆ ಹೂವಿನ ಚೀಲಗಳನ್ನಿಟ್ಟು ಕಳುಹಿಸಲಾಗುತ್ತದೆ. ಆಗ, ಈ ಬಸ್‌ಗಳೂ ಹೂ ಮುಡಿದ ವಧುವಿನಂತೆ ಕಂಗೊಳಿಸುತ್ತವೆ.

ಸೋಮವಾರದ ಮಾರುಕಟ್ಟೆಯಲ್ಲಿ ಮೀರಾ ಬೆಹನ್ (ಪುಟಾಣಿ ಗುಲಾಬಿ) ಕೆ.ಜಿಗೆ ₹60ರಿಂದ ₹90, ಗಲಾಟೆ ₹10ರಿಂದ ₹30, ಸುಗಂಧ ರಾಜ ₹100ರಿಂದ ₹120, ಕಾಕಡ ₹40ರಿಂದ ₹60, ಸೇವಂತಿಗೆ ₹60ರಿಂದ ₹80, ಮಾರಿ ಗೋಲ್ಡ್‌ (ಚೆಂಡು ಹೂ) ₹40ರಿಂದ ₹50ಕ್ಕೆ ಮಾರಾಟಗೊಂಡಿತ್ತು. ಗುಲಾಬಿ ಕಟ್ಟಿಗೆ ₹30ರಿಂದ ₹70ರ ತನಕ ಮಾರಾಟಗೊಂಡಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !