ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ

7
ಉತ್ತರ ಕರ್ನಾಟಕ ರೈತ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ

Published:
Updated:
ಉತ್ತರ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತ ಮಹಿಳೆಯರು

ಹಾವೇರಿ:  ಪ್ರತ್ಯೇಕ  ಉತ್ತರ ಕರ್ನಾಟಕ ರಾಜ್ಯ ಅಥವಾ ವಿಶೇಷ ಸ್ಥಾನಮಾನ, ರೈತರ ಸಂಪೂರ್ಣ ಸಾಲ ಮನ್ನಾ, ಮಹದಾಯಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉತ್ತರ ಕರ್ನಾಟಕ ರೈತ ಸಂಘದ ವತಿಯಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೋಮವಾರ ರಸ್ತೆ ತಡೆ ನಡೆಸಿ, ಪ್ರತಿಭಟನೆ ಮಾಡಲಾಯಿತು.

ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪಗೌಡ ದೇಸಾಯಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕದ ಜಿಲ್ಲೆಗಳ ಬಗ್ಗೆ ಮಲತಾಯಿ ಧೋರಣೆ ತೋರಿವೆ. ಹೀಗಾಗಿ, ನಮಗೆ ಪ್ರತ್ಯೇಕ ರಾಜ್ಯದ ಸ್ಥಾನ ಮಾನ ಕಲ್ಪಿಸಿ ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕದ ರೈತರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಏಳು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ಯಾವುದೇ ಪಕ್ಷದ ಸರ್ಕಾರವೂ ಈ ಬಗ್ಗೆ ಗಂಭೀರ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ದೂರಿದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗಾಗಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಘೋಷಿಸಿದ್ದರು. ಈಗ, ಅಧಿಕಾರಕ್ಕೆ ಬಂದು ತಿಂಗಳು ಕಳೆದರೂ, ಕೇವಲ ಸಬೂಬು ನೀಡಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದರು.

ಬಗರ್ ಹುಕುಂ ಅಥವಾ ಅರಣ್ಯ ಭೂಮಿಯಲ್ಲಿ ಮೂರು ತಲೆಮಾರುಗಳಿಂದ ಉಳುಮೆ ಮಾಡಿಕೊಂಡು ಬಂದ ರೈತರಿಗೆ ಹಕ್ಕು ಪತ್ರಗಳನ್ನು ನೀಡುತ್ತಿಲ್ಲ. ಕಳೆದ ನಾಲ್ಕು ದಶಕಗಳಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಕುರಿತು ನಿರಂತರ ಹೋರಾಟ ಮಾಡುತ್ತಿದ್ದೇವೆ. ಆದರೆ, ಯಾವುದೇ ಸರ್ಕಾರಗಳು ಈ ಬಗ್ಗೆ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.

ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ,  ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ದಕ್ಷಿಣ ಕರ್ನಾಟಕದ ಕಾವೇರಿ ನದಿ ವಿಷಯದಲ್ಲಿ ಮಾತ್ರ ದಿಢೀರ್ ನಿರ್ಧಾರಗಳನ್ನು ತೆಗದುಕೊಳ್ಳುತ್ತವೆ. ಆದರೆ, ಉತ್ತರ ಕರ್ನಾಟಕದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತವೆ ಎಂದು ವಾಗ್ದಾಳಿ ನಡೆಸಿದರು.

ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಬದಲಾಗಿ, ತಮ್ಮ ಐಷಾರಾಮಿ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವಲ್ಲಿಯೇ ಸರ್ಕಾರಗಳು ನಿರತವಾಗಿವೆ. ರೈತರಿಗೆ ಬರಬೇಕಾದ ಹಾಲಿನ ಪ್ರೋತ್ಸಾಹಧನವೂ ಈ ವರೆಗೂ ಸರಿಯಾಗಿ ಬಂದಿಲ್ಲ ಎಂದರು. 

ರಾಜ್ಯ ಘಟಕದ ಖಜಾಂಚಿ ಪ್ರವೀಣಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ, ಗದಗ ಜಿಲ್ಲಾ ಘಟಕದ ಅಧ್ಯಕ್ಷ ವೀರಪ್ಪ ಕೂಸಗಲ್‌, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಮಹದೇವಪ್ಪ ಉರಳಿಗಡ್ಡಿ, ರಾಜ್ಯ ಘಟಕದ ಮಹಿಳಾ ಸಂಚಾಲಕಿ ಕವಿತಾ ಪಾಟೀಲ, ಹಾವೇರಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪರಮೇಶಣ್ಣ ಚಿನ್ನಣ್ಣನವರ, ರೋಣ ತಾಲ್ಲೂಕು ಘಟಕದ ಅಧ್ಯಕ್ಷರಾದ ರತ್ನಾಬಾಯಿ ಪಾಟೀಲ ಹಾಗೂ ಜಿಲ್ಲಾ ಮುಖಂಡರಾದ ಫಕ್ಕೀರಗೌಡ ಗಾಜೀಗೌಡ್ರ, ಜಗದೀಶ ಕುಸಗೂರ, ಸಣ್ಣೆಪ್ಪ ಚಿನ್ನಿಕಟ್ಟಿ, ಫಕ್ಕೀರಪ್ಪ ಗೋಣಗೇರ, ರಾಮನಗೌಡ ತರ್ಲಗಟ್ಟ, ಫಕ್ಕಿರ ಕಾಳೆ, ಕಾಳಪ್ಪ ಲಮಾಣಿ, ಮಹೇಶ ಪುಟ್ಟಣ್ಣನವರ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !