ಮಂಗಳವಾರ, ಜನವರಿ 19, 2021
17 °C
₹15 ಕೋಟಿ ಅನುದಾನದ ನಿರೀಕ್ಷೆ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಜಿಲ್ಲಾಡಳಿತದಿಂದ 14 ಸಮಿತಿಗಳ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ 14 ಸಮಿತಿಗಳನ್ನು ರಚನೆ ಮಾಡಲಾಯಿತು. ಪ್ರಮುಖರ ಹೆಸರು ಬಿಟ್ಟು ಹೋಗಿದ್ದರೆ ಸೇರ್ಪಡೆ ಮಾಡಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. 

ದೇವಗಿರಿ ಸಮೀಪದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ಪೂರ್ವಭಾವಿ ಸಭೆಯು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆಯಿತು. 

ಸ್ವಾಗತ ಸಮಿತಿ, ಹಣಕಾಸು ಸಮಿತಿ, ವೇದಿಕೆ ನಿರ್ಮಾಣ ಸಮಿತಿ, ವಸತಿ ಸಮಿತಿ, ಪ್ರತಿನಿಧಿಗಳ ನೋಂದಣಿ ಸಮಿತಿ, ಮೆರವಣಿಗೆ ಸಮಿತಿ, ಸಮನ್ವಯ ಸಮಿತಿ, ಆರೋಗ್ಯ ಸಮಿತಿ, ಸಾರಿಗೆ ಸಮಿತಿ, ಆಹಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಮಹಿಳಾ ಸಮಿತಿ ಸೇರಿದಂತೆ ಒಟ್ಟು 14 ಸಮಿತಿಗಳ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮತ್ತು ಸದಸ್ಯ ಸ್ಥಾನಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸಭೆಗೆ ಮಾಹಿತಿ ನೀಡಿದರು. 

₹15 ಕೋಟಿ ವೆಚ್ಚ: ಸಾಹಿತ್ಯ ಸಮ್ಮೇಳನಕ್ಕೆ ಅಂದಾಜು ₹ 15 ಕೋಟಿ ವೆಚ್ಚವಾಗಲಿದ್ದು, ಈ ಪೈಕಿ ರಾಜ್ಯ ಸರ್ಕಾರದಿಂದ ₹10 ಕೋಟಿ, ಸರ್ಕಾರಿ ನೌಕರರಿಂದ ₹1.5 ಕೋಟಿ, ಸಂಘ-ಸಂಸ್ಥೆಗಳಿಂದ ₹1 ಕೋಟಿ ಹಾಗೂ ಇತರೆ ಮೂಲಗಳಿಂದ ₹2 ಕೋಟಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

6 ಲಕ್ಷ ಜನ ಬರುವ ನಿರೀಕ್ಷೆ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಮಾತನಾಡಿ, ‘ಸಮ್ಮೇಳನವು ಫೆ.26, 27 ಮತ್ತು 28ರಂದು ಈಗಾಗಲೇ ಗುರುತಿಸಲಾದ ಸ್ಥಳದಲ್ಲೇ ನಡೆಯಲಿದೆ. ಪ್ರತಿ ದಿನ 2 ಲಕ್ಷದಂತೆ ಒಟ್ಟು 6 ಲಕ್ಷ ಜನರು ಬರುವ ನಿರೀಕ್ಷೆಯಿದೆ. ಕೋವಿಡ್‌ ಮಾರ್ಗಸೂಚಿ ಪ್ರಕಾರ ಸಮ್ಮೇಳನವನ್ನು ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಮಾಡಲು ಚಿಂತಿಸಲಾಗಿದೆ’ ಎಂದರು. 

ಹೆಚ್ಚುವರಿ ಬಸ್‌ಗಳ ಅಗತ್ಯ: ‌‌3 ವೇದಿಕೆಗಳನ್ನು ನಿರ್ಮಾಣ ಮಾಡಲಾಗುವುದು. ಸಮಿತಿಗಳ ರಚನೆಯಲ್ಲಿ ಪ್ರಧಾನ ಕಚೇರಿ ಕಸಾಪದಿಂದ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ವಸತಿ ವ್ಯವಸ್ಥೆ ಕೊರತೆ ನೀಗಿಸಲು ದಾವಣಗೆರೆಯಿಂದ ಹುಬ್ಬಳ್ಳಿವರೆಗೆ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಹಾಗೂ ಸಾರಿಗೆ ವ್ಯವಸ್ಥೆ ಹೆಚ್ಚು ಮಾಡಬೇಕಾಗಿದೆ. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಗ್ಗೂಡಿ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸೋಣ ಎಂದರು. 

ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ‘ಯಾವುದೇ ಲೋಪಗಳು ಆಗದಂತೆ ಸಮ್ಮೇಳನ ಆಯೋಜನೆ ಆಗಬೇಕು ಹಾಗೂ ವೇದಿಕೆ, ಆಹಾರ ಇತರೆ ವಿಷಯಗಳ ಕುರಿತು ತೀರ್ಮಾನ ಕೈಗೊಳ್ಳಲು ಆಯಾ ಸಮಿತಿಗಳಗೆ ಅನುಮತಿ ನೀಡಬೇಕು’ ಎಂದರು. 

ಸಭೆಯಲ್ಲಿ ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ ರೋಶನ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರು, ಕವಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು. 

‘ಸಿ.ಎಂ. ಜತೆ ಚರ್ಚಿಸಿ, ಅನುದಾನ ಬಿಡುಗಡೆ’

ಕೋವಿಡ್ ಸಮಯದಲ್ಲಿ ಸಮ್ಮೇಳನಕ್ಕೆ ಬೇಕಾದ ಹಣಕಾಸಿನ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಗತ್ಯ ಅನುದಾನ ಒದಗಿಸಲಾಗುವುದು. ಸಮ್ಮೇಳನಕ್ಕೆ ನಿಗದಿತ ಬಜೆಟ್ ಘೋಷಿಸದೇ ವಸ್ತುಸ್ಥಿತಿಗೆ ತಕ್ಕಂತೆ ಖರ್ಚು ಮಾಡಬೇಕು. ಬಜೆಟ್ ನೋಡಿಕೊಂಡು ಸಮ್ಮೇಳನ ಆಯೋಜಿಸುವ ಕೆಲಸವಾಗಬಾರದು. ಯಶಸ್ವಿ ಸಮ್ಮೇಳನ ನಡೆಸಲು ಕೈಗೊಳ್ಳಬೇಕಾದ ಪಟ್ಟಿಗಳ ಪ್ರಸ್ತಾವ ಸಲ್ಲಿಸಿದರೆ ಸಚಿವರು, ಶಾಸಕರೊಡನೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು