ಮಂಗಳವಾರ, ಜೂನ್ 15, 2021
25 °C
ಪಿಪಿಇ ಕಿಟ್‌ ಧರಿಸದೇ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಪುತ್ರ!

ಅಂತ್ಯಸಂಸ್ಕಾರ ವಿಳಂಬ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಕ್ಕಿಆಲೂರ: ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ 50 ವರ್ಷದ ಮಹಿಳೆಯ ಅಂತ್ಯಕ್ರಿಯೆ ವಿಳಂಬವಾಗಿದೆ. ಆಂಬುಲೆನ್ಸ್‌ನಲ್ಲಿ ಮೂರು ಗಂಟೆಗಳ ಕಾಲ ಮಹಿಳೆಯ ಮೃತದೇಹ ಇಟ್ಟು ಕಾಯ್ದ ಘಟನೆ ಹಾನಗಲ್ ತಾಲ್ಲೂಕಿನ ಮಲಗುಂದ ಗ್ರಾಮದಲ್ಲಿ
ನಡೆದಿದೆ.

ಗ್ರಾಮದ 50 ವರ್ಷದ ಮಹಿಳೆಯೊಬ್ಬರು ಜ್ವರದಿಂದ ಬಳಲುತ್ತಿದ್ದ ಕಾರಣ ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ರಾತ್ರಿವರೆಗೂ ಆರೋಗ್ಯವಾಗಿದ್ದ ಅವರು ಮಧ್ಯರಾತ್ರಿ ಉಸಿರಾಟದ ತೊಂದರೆಯಿಂದ ಮೃತಪಟ್ಟರು. ಬಳಿಕ ಪರೀಕ್ಷೆಯಲ್ಲಿ ಕೋವಿಡ್‌ ದೃಢಪಟ್ಟಿತ್ತು. 

ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಗ್ರಾಮದ ಸ್ಮಶಾನಕ್ಕೆ ಜಿಲ್ಲಾಸ್ಪತ್ರೆಯಿಂದ ಆಂಬುಲೆನ್ಸ್‌ನಲ್ಲಿ ಮೃತದೇಹ ತರಲಾಗಿದೆ. ಅಷ್ಟು ಹೊತ್ತಿಗೆ ಸ್ಥಳದಲ್ಲಿ ಸಂಬಂಧಿಗಳು, ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ನೆರೆದಿದ್ದರೂ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗಿಲ್ಲ. ಮೂರ್ನಾಲ್ಕು ಗಂಟೆಗಳ ಬಳಿಕ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಅಂತ್ಯಕ್ರಿಯೆ
ನೆರವೇರಿಸಿದ್ದಾರೆ.

ಈ ಸಂದರ್ಭದಲ್ಲಿ ಪಿಪಿಇ ಕಿಟ್ ಧರಿಸದ ಮೃತ ಮಹಿಳೆಯ ಪುತ್ರನಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿಸಿ ಇಲಾಖೆ ಎಡವಟ್ಟು ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

‘ಜಿಲ್ಲಾಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡಲಾಗಿಲ್ಲ. ಮೊದಲು ಕೊರೊನಾ ಸೋಂಕು ಇಲ್ಲ ಎನ್ನುವ ವರದಿ ಬಂದಿದೆ. ಮಹಿಳೆ ಸತ್ತ ಬಳಿಕ ಕೋವಿಡ್‌ ಇದೆ ಎನ್ನುವ ವರದಿ ಬಂದಿದೆ. ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರೆ ಮಹಿಳೆ ಬದುಕುಳಿಯುತ್ತಿದ್ದಳು. ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾಳೆ’ ಎಂದು ಸ್ಥಳದಲ್ಲಿ ನೆರೆದಿದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲಾಸ್ಪತ್ರೆಯಿಂದ ಮಾಹಿತಿ ಬಂದಿತ್ತು. ಸ್ಥಳೀಯ ಪಿಡಿಒ ಅವರಿಗೆ ಮಾಹಿತಿ ನೀಡಲಾಗಿತ್ತು. ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಲಿಂಗರಾಜ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು