ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ, ಲಿಂಗಾಯತ...?

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಹಿಂದೂಗಳೆಲ್ಲಾ ವೈದಿಕರೇ?’ (ಪ್ರ.ವಾ., ಚರ್ಚೆ, ಮಾರ್ಚ್‌ 28) ಲೇಖನದಲ್ಲಿ ಲೇಖಕರು ತರ್ಕಬದ್ಧವಾಗಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ಸಂಬಂಧ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಗೆ ಒಂದು ಬಹು ಮುಖ್ಯವಾದ ಪ್ರಶ್ನೆಯನ್ನು ಕೇಳಿದ್ದಾರೆ. ‘ಈ ಇಡೀ ಲಿಂಗಾಯತ, ಹಿಂದೂ, ವೈದಿಕ ಇತ್ಯಾದಿ ತತ್ವಗಳನ್ನು ನಾವು ವಚನ ಕಾಲದ ಹಿನ್ನೆಲೆಯಲ್ಲಿ ನೋಡುತ್ತಿದ್ದೇವೆ. ಇಂದಿನ ವೈದಿಕರ ಬಗ್ಗೆ ನಾವು ಹೇಳುತ್ತಿಲ್ಲ. ಹಿಂದಿನ ಕಾಲದ, ಅಂದರೆ ವಚನ ಕಾಲದ ವ್ಯವಸ್ಥೆಗಳ ಬಗ್ಗೆ ನಾವು ಹೇಳುತ್ತಿದ್ದೇವೆ’- ಇದನ್ನು ಸಮಿತಿ ಪ್ರತಿಪಾದಿಸುವುದೇ? ಇದು ಪ್ರಶ್ನೆ.

ವರ್ತಮಾನದಲ್ಲಿ ಹಿಂದೂಗಳು ಮತ್ತು ಲಿಂಗಾಯತರು ಹೇಗೆ ಬದುಕುತ್ತಿದ್ದಾರೆ ಎನ್ನುವುದು ಪ್ರಸ್ತುತವೇ ಹೊರತು ನೂರಾರು ವರ್ಷಗಳ ಹಿಂದೆ
ಬದುಕು ಯಾವುದರಿಂದ ಪ್ರೇರಿತವಾಗಿತ್ತು ಎನ್ನುವುದನ್ನು ವಿಚಾರ ಮಾಡಿದಾಗ ಅಂಥ ಪ್ರೇರಣೆಯಂತೆ ಇಂದು ‘ಜೀವನ ವಿಧಾನ’ ಇಲ್ಲದಿರುವಾಗ, ಆ ಹಿಂದಿನ ಪ್ರೇರಣೆಗಳ ನೆಲೆಯಲ್ಲಿ ಈ ಧರ್ಮ ಇಂಥದು, ನಮ್ಮ ಧರ್ಮ ಇದಕ್ಕಿಂತ ಬೇರೆ ಎಂಬುದು ಅತಾರ್ಕಿಕ ಎನಿಸದೇ?

ಲೇಖಕರು, ಇನ್ನೊಂದು ಮಾತನ್ನು ಹೇಳಿದ್ದಾರೆ. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ ಎಂದು ಸಮಿತಿ ಹೇಳುವಲ್ಲಿ, ‘ಹಿಂದೂ ಧರ್ಮ ಎಂದರೆ ಏನು, ಯಾವುದು’ ಎನ್ನುವ ಪ್ರಶ್ನೆಗೆ ಸಮಿತಿ ಉತ್ತರಿಸಿಲ್ಲ. ಇನ್ನೊಂದು ಗೋಜಲು ಅಥವಾ ಸಂದೇಹವನ್ನು ಇಲ್ಲಿ ಪ್ರಸ್ತಾಪಿಸಿದರೆ ತಪ್ಪಾಗಲಾರದು.

ಹಿಂದೂ (ಧರ್ಮವೋ ಅಥವಾ ಮತವೋ?) ಸಂಬಂಧಿಸಿದಂತೆ ಇರುವ 1955ರ ವಿವಾಹ ಕಾಯ್ದೆ, 1956ರ ಉತ್ತರಾಧಿಕಾರ ಕಾಯ್ದೆ, ಅಪ್ರಾಪ್ತ ವಯಸ್ಕರ ಪಾಲನೆ ಕಾಯ್ದೆ , ಹಾಗೂ ದತ್ತಕ ಮತ್ತು ಜೀವನಾಂಶ ಕಾಯ್ದೆ - ಈ ಕಾಯ್ದೆಗಳು, ‘any Hindu by religion in any of its forms or developments, including a Virashaiva, a Lingaayat, or a follower of the Brahmo, Prarthana or Arya Samaj...’ ಎಂದು ಹೇಳುತ್ತವೆ.

ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ. ಆದರೆ ‘ಹಿಂದೂ’ ಈ ಎರಡನ್ನೂ ಒಳಗೊಂಡಿದೆ ಎನ್ನುವುದನ್ನು ನಾವು ಗಮನಿಸಬೇಕು. ಬೇರೆ ಬೇರೆ ಧರ್ಮಗಳು ಎಂದಾದರೆ ಈ ಕಾಯ್ದೆಗಳಿಗೂ ತಿದ್ದುಪಡಿ ಅಗತ್ಯ.
–ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT