ಮದ್ಯಬಿಟ್ಟೆ, ಮನೆ ಕಟ್ಟಿದೆ: ಸುರೇಶ ಎಸ್.ನಾಯಕ ಭಾವುಕ ಕ್ಷಣಗಳು...

7
ಗಾಂಧಿಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶ

ಮದ್ಯಬಿಟ್ಟೆ, ಮನೆ ಕಟ್ಟಿದೆ: ಸುರೇಶ ಎಸ್.ನಾಯಕ ಭಾವುಕ ಕ್ಷಣಗಳು...

Published:
Updated:
Deccan Herald

ಹಾವೇರಿ: ‘1996ರಿಂದ ಕುಡಿಯುವ ನಶೆ ಹತ್ತಿತ್ತು. 2004ರಲ್ಲಿ ಮದುವೆಯೂ ಆಯಿತು. ಮಡದಿ ಬಂದರೂ ಮದ್ಯ ಬಿಡಲಿಲ್ಲ. 2012ರಲ್ಲೊಮ್ಮೆ, ‘₹30 ಸಾವಿರ ಸಾಲ ನೀಡುತ್ತಾರೆ’ ಎಂದು ಹೇಳಿದ ಪತ್ನಿ, ಉಕ್ಕಡಗತ್ರಿಯಲ್ಲಿ ನಡೆಯುತ್ತಿದ್ದ ‘ಮದ್ಯವ್ಯರ್ಜನ’ ಶಿಬಿರಕ್ಕೆ ಕರೆದೊಯ್ದಳು. ಅಲ್ಲಿ ಮದ್ಯ ಬಿಡಿಸಿದರು. ವಾಪಸಾದ ಬಳಿಕ ನಿಷ್ಠೆಯಿಂದ ದುಡಿದೆ. ಈಚೆಗೆ ₹12 ಲಕ್ಷದ ಮನೆ ಕಟ್ಟಿಸಿದ್ದೇನೆ...’
–ರಟ್ಟೀಹಳ್ಳಿಯ ತೋಟಗಂಟಿಯ ಸುರೇಶ ಎಸ್.ನಾಯಕ ಸಂತಸದಿಂದ ಹೇಳಿಕೊಳ್ಳುತ್ತಿದ್ದರೆ, ಪತ್ನಿ ಗಾಯತ್ರಿ ಕಣ್ಣಲ್ಲಿ ಆನಂದ ಭಾಷ್ಪ ತುಂಬಿತ್ತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕ.ವಿ.ಪ್ರ.ನಿ. ನೌಕರರ ಸಂಘ, ನವಜೀವನ ಸಮಿತಿ, ಲಯನ್ಸ್ ಕ್ಲಬ್ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ನಗರದಲ್ಲಿ ನಡೆದ ‘ಗಾಂಧಿಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶ’ದಲ್ಲಿನ ಭಾವುಕ ಕ್ಷಣಗಳು.

‘ಮದ್ಯದಿಂದ ನನ್ನ ದೇಹ ಕ್ಷೀಣಿಸುತ್ತಿತ್ತು. ಕುಡಿದು ಕೈಯಲ್ಲಿ ಕಾಸು ಖಾಲಿಯಾಗಿತ್ತು. ಏನೋ ಕಾಡುತ್ತಿತ್ತು. ಅದಕ್ಕಾಗಿ, ನಮ್ಮ  ಹೊಲದ ಕೃಷಿಯಲ್ಲೇ ಪೂರ್ಣವಾಗಿ ತೊಡಗಿಸಿಕೊಂಡೆನು. ಆದಾಯ ಕೈ ಹಿಡಿಯಿತು. 48 ಕೆ.ಜಿ.ಯಿದ್ದ ದೇಹ 70ಕ್ಕೆ ಬಂತು.  ಮಕ್ಕಳಿಬ್ಬರಿಗೂ ಉತ್ತಮ ಶಿಕ್ಷಣ ಕೊಡಿಸುವ ಸಲುವಾಗಿ ಉಜಿರೆಗೆ ಸೇರಿಸಿದೆನು. ಈಗ ನೆಮ್ಮದಿಯಾಗಿದ್ದೇನೆ. ನೀವೂ ಬಿಟ್ಟುಬಿಡಿ...’ ಎಂದು ಸಂಭ್ರಮಿಸಿದರು.

ಹೀಗೆ ನೀರಲಗಿಯ ಗುಡ್ಡಪ್ಪ ಕಮ್ಮಾರ ಮತ್ತಿತರರು ಅಭಿಪ್ರಾಯ ಹಂಚಿಕೊಂಡರು. ಈ ವರ್ಷ 150 ಮಂದಿ ಸೇರಿದಂತೆ ಜಿಲ್ಲೆಯಲ್ಲಿ 2010ರಿಂದ ಈತನಕ 1,500 ಮಂದಿ ವ್ಯಸನಮುಕ್ತರಾಗಿದ್ದಾರೆ ಎಂದು ಯೋಜನೆಯ ಅಧಿಕಾರಿಗಳು ತಿಳಿಸಿದರು.

ಬಳಿಕ ಮಾತನಾಡಿದ ಹೊಸಮಠದ ಚರಮೂರ್ತಿ ಬಸವಶಾಂತಲಿಂಗ ಸ್ವಾಮೀಜಿ, ‘ಚಟವೆಂಬ ದೆವ್ವವನ್ನು ದೂರವಿಟ್ಟರೆ, ನೀವು ಸಹಜವಾಗಿಯೇ ಶರಣರಾಗುತ್ತೀರಿ. ಬಸವಣ್ಣನವರು ಈ ನಿಟ್ಟಿನಲ್ಲಿ ಹೆಂಡದ ಮಾರಾಟ ಮಾಡುತ್ತಿದ್ದವರನ್ನೂ ಪರಿವರ್ತನೆ ಮಾಡಿ ಶರಣರನ್ನಾಗಿಸಿದ್ದಾರೆ’ ಎಂದರು.

‘ರಕ್ತ ಹಂಚಿಕೊಂಡು ಹುಟ್ಟಿದ ಮಗನೇ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ತಾಯಿಗೆ ರಕ್ತ ನೀಡಲಾರದ ಸ್ಥಿತಿಗೆ ತಲುಪಿದ್ದನು. ಅದಕ್ಕೆ ಆತನ ಚಟ ಕಾರಣವಾಗಿತ್ತು. ಇದಕ್ಕಿಂತ ಹೀನಾಯ ಬದುಕು ಬೇಕೇ?’ ಎಂದು ಪ್ರಶ್ನಿಸಿದ ಅವರು, ಚಟದ ದಾಸ್ಯವು  ನಮ್ಮನ್ನು ನಾವೇ ಚಟ್ಟಕ್ಕೆ ಏರಿಸಿದಂತೆ’ ಎಂದರು.

ಶಾಸಕ ನೆಹರು ಓಲೇಕಾರ ಮಾತನಾಡಿ, ‘ಚಟ ನಿಮ್ಮನ್ನು ಕಾಡಬಹುದು. ಅದಕ್ಕಾಗಿ, ಚಟ ಬಿಟ್ಟು ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಆಗ, ಕೆಟ್ಟ ಆಲೋಚನೆಯೂ ದೂರವಾಗಿ, ಅಭಿವೃದ್ಧಿ ಹೊಂದುತ್ತೀರಿ. ಆರೋಗ್ಯವನ್ನು ನಾವು ಕಾಪಾಡಿದರೆ, ಅದು ನಮ್ಮ ಗೌರವವನ್ನು ಕಾಪಾಡುತ್ತದೆ ಎಂದರು.

ಯೋಜನೆಯ ಪ್ರಾದೇಶಿಕ ನಿರ್ದೇಶಕ ಸೀತಾರಾಮ ಶೆಟ್ಟಿ ಮಾತನಾಡಿ, ‘ನಾವು ಮನುಷ್ಯರಾಗಿ ಬದುಕಲು ವ್ಯಸನ ಮುಕ್ತರಾಗಬೇಕು’ ಎಂದರು.

ಪ್ರಮುಖರಾದ ಮೋಹನ ಮೆಣಸಿನಕಾಯಿ, ವಿಜಯಕುಮಾರ ಮುದುಕಣ್ಣನವರ, ಕವಿತಾ ಎ.ಯಲಿಗಿಮಠದ, ನಿರಂಜನ ಬ. ತಾಂಡೂರು, ಮುತ್ತಣ್ಣ ಎಲಿಗಾರ, ಪ್ರೊ.ಪಿ.ಸಿ. ಹಿರೇಮಠ, ಮಹಾಬಲ ಕುಲಾಲ್, ನಾಗೇಂದ್ರಪ್ಪ ಕಟಕೋಳ, ಮುರಿಗೆಪ್ಪ ಶೆಟ್ಟರ್, ವಜ್ರಕುಮಾರ್ ಇದ್ದರು. ಇದಕ್ಕೂ ಮೊದಲು ಜಾಥಾ ನಡೆಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !